More

    ಭೂ ಸುಧಾರಣಾ ತಿದ್ದುಪಡಿ ಕಾಯಿದೆ ವಾಪಸ್ಸು ಸಿಎಂ ಭರವಸೆ; ಕಾರ್ಮಿಕರ ಕೆಲಸ ಅವಧಿ 8 ಗಂಟೆಗೆ ಇಳಿಕೆ ಮಾಡಲು ಕ್ರಮ

    ಬೆಂಗಳೂರು:
    ಭೂ ಸುಧಾರಣಾ ಕಾಯ್ದೆ 79 ಎ ಹಾಗೂ ಬಿ ಪರಿಚ್ಛೇಧಕ್ಕೆ ತಂದಿರುವ ತಿದ್ದುಪಡಿಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ನೀರಾವರಿ ಹೋರಾಟಗಾರರು, ಭೂ ಹೀನರ ಹೋರಾಟ ಸಮಿತಿ, ಕಟ್ಟಡ ಕಾರ್ಮಿಕರ ಹೋರಾಟ ಸಮಿತಿ ಹಾಗೂ ಮಹಿಳಾ ಸಂಘಟನೆಗಳು ಹಾಗೂ ಟ್ರೇಡ್ ಯೂನಿಯನ್ ಸಂಘಟನೆಗಳ ಸಮನ್ವಯ ಸಮಿತಿಯ ನಾಯಕರುಗಳು ಮತ್ತು ಪದಾಧಿಕಾರಿಗಳ ಜತೆ ಸುದೀರ್ಘ ಸಭೆ ನಡೆಸಿದ ಸಿಎಂ, ಹಂತ ಹಂತವಾಗಿ ಬೇಡಿಕೆಗಳ ಈಡೇರಿಸಲು ಆದ್ಯತೆ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.
    ಎಪಿಎಂಸಿ ಕಾಯಿದೆ ವಾಪಸ್ಸು ಪಡೆಯುವ ಮಸೂದೆಯನ್ನು ಮಂಡನೆ ಮಾಡಲಾಗಿದ್ದು, ಈಗಾಗಲೇ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾಗಿದೆ. ವಿಧಾನ ಪರಿಷತ್‌ನಲ್ಲಿ ಅಂಗೀಕಾರ ಬಾಕಿ ಇದ್ದು, ಮುಂದೆ ಅದು ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ.
    ಕಾರ್ಮಿಕರಿಗೆ 12 ಗಂಟೆಗಳ ಕಾಲ ಇರುವ ಕೆಲಸದ ಅವಧಿಯನ್ನು ಮೊದಲಿನಂತೆ 8 ಗಂಟೆಗೆ ಸೀಮಿತ ಮಾಡಬೇಕು ಎನ್ನುವ ಒತ್ತಾಯವನ್ನು ಪರಿಶೀಲನೆ ಮಾಡುವುದಾಗಿ ಸಿಎಂ ಭರವಸೆ ನೀಡಿದರು.
    ಗೋ ಹತ್ಯೆ ನಿಷೇಧ ಕಾಯ್ದೆ, ಬಗರ್ ಹುಕುಂ, ಗ್ರಾಮೀಣ ಬ್ಯಾಂಕುಗಳಲ್ಲಿ ರೈತರ ಸಾಲಕ್ಕೆ ಒಟಿಎಸ್ ವ್ಯವಸ್ಥೆ , ಫ್ರೀಡಂ ಪಾರ್ಕ್‌ನ್ನು ಹೋರಾಟಗಳಿಗೆ ಮೀಸಲಿಡುವುದು ಸೇರಿದಂತೆ ಹಲವು ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸಂಘದ ಸದಸ್ಯರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
    ಬಲವಂತವಾಗಿ ರೈತರ ಸಾಲ ವಸೂಲಾತಿಯನ್ನು ಮಾಡಬಾರದೆಂದು ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಸೂಚಿಸಲಾಗುವುದು ಎಂದು ಸಿಎಂ ತಿಳಿಸಿದರು.
    ಬಗರ್ ಹುಕುಂ, ಅಕ್ರಮ – ಸಕ್ರಮ, ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಉಪ ಮುಖ್ಯಮಂತ್ರಿಗಳು ಕಂದಾಯ, ಅರಣ್ಯ, ಕೃಷಿ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು. ಸರ್ಕಾರ ಕಾನೂನಾತ್ಮಕವಾಗಿ ಮಾಡಬಹುದಾದ ಎಲ್ಲ ಕ್ರಮವನ್ನು ಕೈಗೊಳ್ಳಲಿದೆ ಎಂದರು.
    60 ಕ್ಕೂ ಹೆಚ್ಚು ಹೋರಾಟಗಾರರು, ನಾನಾ ಸಂಘಟನೆಗಳ ಮುಖಂಡರುಗಳು ಮುಂದಿಟ್ಟ ಬೇಡಿಕೆ ಮತ್ತು ಒತ್ತಾಯಗಳನ್ನು ಮುಖ್ಯಮಂತ್ರಿಗಳು ಆಲಿಸಿದರು.
    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬು ಕುಮಾರ್, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಹಶೀನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಉಪಸ್ಥಿತರಿದ್ದರು.
    ಕಂದಾಯ, ಕೃಷಿ, ಕಾರ್ಮಿಕ ಇಲಾಖೆ ಸೇರಿದಂತೆ 10 ಕ್ಕೂ ಹೆಚ್ಚು ಇಲಾಖೆಗಳ ಕಾರ್ಯದರ್ಶಿಗಳು, ಹಿರಿಯ ಐಎಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts