More

    ಭಾರತೀಯ ವಾಲಿಬಾಲ್ ತಂಡಕ್ಕೆ ಭಾಗ್ಯೇಶ

    ಗಿರೀಶ ಪಾಟೀಲ ಜೊಯಿಡಾ

    ತಾಲೂಕಿನ ಯುವ ಕ್ರೀಡಾಪಟು ದೇಶದ ವಾಲಿಬಾಲ್ ತಂಡ ಪ್ರತಿನಿಧಿಸುತ್ತಿದ್ದಾನೆ. ಇದು ತಾಲೂಕಿನ ಜನರಲ್ಲಿ ಹೆಮ್ಮೆ ಮೂಡಿಸಿದೆ. ಭಾಗ್ಯೇಶ ದೇಸಾಯಿ ವಾಲಿಬಾಲ್ ತಂಡ ಪ್ರತಿನಿಧಿಸುತ್ತಿರುವ ಕ್ರೀಡಾಪಟು. ಭಾರತದ 19 ವರ್ಷದೊಳಗಿನ ವಾಲಿಬಾಲ್ ತಂಡ ಪ್ರತಿನಿಧಿಸುತ್ತಿರುವ ಈತನ ಸಾಧನೆಯ ಹಿಂದೆ ಸ್ವಂತ ಪರಿಶ್ರಮ ಮತ್ತು ಪಾಲಕರ ಪ್ರೋತ್ಸಾಹ ಪ್ರಮುಖವಾಗಿದೆ.

    ಜೊಯಿಡಾ ತಾಲೂಕಿನ ಸಿಂಗರಗಾಂವ ನಿವಾಸಿ ಮಾರುತಿ ಮತ್ತು ಗಾಯತ್ರಿ ದೇಸಾಯಿ ದಂಪತಿಯ ಹಿರಿಯ ಪುತ್ರ ಭಾಗ್ಯೇಶ ದೇಸಾಯಿ. ತಾಯಿ ಗಣೇಶಗುಡಿಯ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಕೃಷಿಕರು. ಭಾಗ್ಯೇಶ 1 ರಿಂದ 10 ನೇ ತರಗತಿವರೆಗೆ ಗಣೇಶಗುಡಿಯ ಕೆಪಿಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. ದಾಂಡೇಲಿ ಬಂಗೂರನಗರ ಕಾಲೇಜ್​ನಲ್ಲಿ ಪಿಯುಸಿ ಓದಿದ್ದು, ಸದ್ಯ ಮಹಾರಾಷ್ಟ್ರದ ಸಂಜಯ ಘೊಡಾವತ ಯುನಿವರ್ಸಿಟಿಯಲ್ಲಿ ಮೊದಲನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾನೆ.

    ‘ನನಗೆ ಬಾಲ್ಯದಿಂದಲೂ ವಾಲಿಬಾಲ್ ಆಟದಲ್ಲಿ ಆಸಕ್ತಿಯಿತ್ತು. ಪ್ರೌಢಶಾಲೆಯಲ್ಲಿದ್ದಾಗ ಅಲ್ಲಿನ ದೈಹಿಕ ಶಿಕ್ಷಕ ಎಲ್.ಎಂ. ಪಟಗಾರ ಮಾರ್ಗದರ್ಶನ, ಗಣೇಶಗುಡಿಯ ಕೆಪಿಸಿ ಇಂಜಿನಿಯರ್ ಮಯೂರ ಯಾದವ ಮತ್ತು ರಾಜೇಶ ಗಾವಡೆ ಅವರ ಮಾರ್ಗದರ್ಶನದಿಂದ ವಾಲಿಬಾಲ್ ಕ್ರೀಡೆಯಲ್ಲಿ ಸಾಧನೆಗೈಯಲು ಸಾಧ್ಯವಾಯಿತು’ ಎನ್ನುತ್ತಾನೆ ಭಾಗ್ಯೇಶ.

    ಭಾಗ್ಯೇಶ ಎರಡು ಸಲ ಮಹಾರಾಷ್ಟ್ರದಲ್ಲಿ 19 ವರ್ಷದೊಳಗಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದಾನೆ. ಸ್ಟುಡೆಂಟ್ ಒಲಿಂಪಿಕ್ ನ್ಯಾಷನಲ್ ತಂಡದಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದಿದ್ದಾನೆ. ದಿಲ್ಲಿಯಲ್ಲಿ ನಡೆದ 2019-20ರ ಪೈಕಾ ನ್ಯಾಷನಲ್ ಕ್ರೀಡಾಕೂಟದಲ್ಲಿ ಮೂದಲ ಸ್ಥಾನ ಪಡೆದಿದ್ದಾನೆ. ಈ ಮಾಸಾಂತ್ಯ ನೇಪಾಳದಲ್ಲಿ ನಡೆಯುವ 19 ವರ್ಷದೊಳಗಿನ ವಾಲಿಬಾಲ್ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾನೆ.

    ವಾಲಿಬಾಲ್ ಕ್ರೀಡೆಯಲ್ಲಿ ಭಾರತ ತಂಡ ಪ್ರತಿನಿಧಿಸುತ್ತಿರುವುದು ನನಗೆ ಅತ್ಯಂತ ಖುಷಿ ತಂದಿದೆ. ನನಗೆ ಯಾವತ್ತೂ ಪ್ರೋತ್ಸಾಹಿಸಿ ಬೆಂಬಲವಾಗಿ ನಿಂತ ನನ್ನ ತಂದೆ- ತಾಯಿ, ಮಾರ್ಗದರ್ಶನ ನೀಡಿದ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ. ಮುಂದೆ ಈ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆಯ ಜತೆಗೆ ಭಾರತೀಯ ನೌಕಾದಳ ಸೇರಬೇಕು ಎಂಬ ಆಸೆ ಇದೆ.
    | ಭಾಗ್ಯೇಶ ದೇಸಾಯಿ ವಾಲಿಬಾಲ್ ಕ್ರೀಡಾಪಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts