More

    ಬೈಕ್​ ಸವಾರನಿಗೆ ಅವಾಚ್ಯ ಪದಗಳಿಂದ ನಿಂದನೆ ಪ್ರಕರಣ: ಭವಾನಿ ವರ್ತನೆ ಬಗ್ಗೆ ಪತಿ, ಪುತ್ರ, ಮಾವ ಏನಂದ್ರು?

    ಮೈಸೂರು: ಶಾಸಕ ಎಚ್​.ಡಿ. ರೇವಣ್ಣರ ಪತ್ನಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ದೊಡ್ಡ ಸೊಸೆ ಭವಾನಿ ರೇವಣ್ಣ ಅವರು ನಿನ್ನೆಯಿಂದ ಭಾರಿ ಸುದ್ದಿಯಲ್ಲಿದ್ದಾರೆ. ಬೈಕ್​ ಸವಾರನೊಬ್ಬ ತಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡ ಭವಾನಿ ಅವರು ಸವಾರನನ್ನು ಅವಾಚ್ಯ ಪದಗಳಿಂದ ನಿಂದಿಸಿ ಸ್ಥಳದಲ್ಲಿ ಹೈಡ್ರಾಮ ಸೃಷ್ಟಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ವೈರಲ್​ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೇವಣ್ಣ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮತ್ತು ಭವಾನಿ ಪುತ್ರ ಸೂರಜ್​ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ಇಂದಿನಿಂದ ಚಳಿಗಾಲ ಅಧಿವೇಶ ಆರಂಭವಾಗಿದ್ದು, ಬೆಳಗಾವಿಯ ಸುವರ್ಣ ಸೌಧದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​.ಡಿ. ರೇವಣ್ಣ, ತಮ್ಮ ಪತ್ನಿ ಭವಾನಿ ಅವರನ್ನು ಸಮರ್ಥಿಸಿಕೊಂಡರು. ಭವಾನಿ ಮಾತನಾಡಿರುವುದರಲ್ಲಿ ತಪ್ಪೇನು ಇಲ್ಲ. ಒಂದೇ ವೇಳೆ ಬೈಕ್​ ಚಾಲಕನಿಗೆ ಏನಾದರೂ ಆಗಿದ್ದರೆ ಯಾರು ಹೊಣೆಯಾಗುತ್ತಿದ್ದರು? ಅಪಘಾತದ ವೇಳೆ ಭವಾನಿ ಸ್ನೇಹಿತರ ಕಾರಿನಲ್ಲಿ ಹೋಗಿದ್ದರು. ತಪ್ಪಾದ ಮಾರ್ಗದಲ್ಲಿ ಬಂದು ಡಿಕ್ಕಿ ಹೊಡೆದಿದ್ದಾರೆ. ಯಾರೇ ಆಗಿದ್ದರು ಇದೇ ರೀತಿ ಸಿಟ್ಟಿನಲ್ಲಿ ಮಾತನಾಡುತ್ತಿದ್ದರು. ನಮ್ಮ ಕುಟುಂಬ ಇದುವರೆಗೂ ಯಾರಿಗೂ ನೋವು ಉಂಟು ಮಾಡುವ ಕೆಲಸವನ್ನು ಮಾಡಿಲ್ಲ ಎಂದರು. ಅಲ್ಲದೆ, ವಿಡಿಯೋವನ್ನು ಉದ್ದೇಶಪೂರ್ವಕವಾಗಿಯೇ ವೈರಲ್​ ಮಾಡಲಾಗಿದೆ. ಇಲ್ಲಿ ಬೈಕ್​ ಸವಾರನ ಪ್ರಾಣದ ಬಗ್ಗೆ ಯಾರೂ ತುಟಿ ಬಿಚ್ಚುತ್ತಿಲ್ಲ. ಭವಾನಿ ಅವರನ್ನು ಟಾರ್ಗೆಟ್​ ಮಾಡಲಾಗಿದೆ. ಈ ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇವೆ. ಭವಾನಿ ಎಂದಿಗೂ ಯಾರಿಗೂ ನೋವು ಮಾಡಿಲ್ಲ ಎಂದು ರೇವಣ್ಣ ತಿಳಿಸಿದರು.

    ಸೂರಜ್​ ರೇವಣ್ಣ ಪ್ರತಿಕ್ರಿಯೆ
    ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಎಂಎಲ್​ಸಿ ಸೂರಜ್​ ರೇವಣ್ಣ, ಅಪಘಾತದಲ್ಲಿ ಬೈಕ್ ಸವಾರನದ್ದೇ ತಪ್ಪಿದೆ. ಆತ ಕುಡಿದು ಬೈಕ್ ಓಡಿಸಿದ್ದಾನೆ. ಅಲ್ಲದೆ, ತಪ್ಪಾದ ಮಾರ್ಗದಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡಿದಿದ್ದಾನೆ. ಏನಾದರೂ ಆಗಿದ್ದರೆ ನಮ್ಮ ಮೇಲೆಯೇ ಬರುತ್ತಿತ್ತು. ಆದರೆ, ಈ ಸಂದರ್ಭದಲ್ಲಿ ನಮ್ಮ ತಾಯಿ ಬಳಕೆ ಮಾಡಿದ ಪದಗಳ ಮೇಲೆ ನನಗೆ ವಿಷಾದವಿದೆ. ಆ ಪದಗಳನ್ನು ಬಳಸಬಾರದಿತ್ತು. ಆಕ್ರೋಶದಲ್ಲಿ ಮಾತನಾಡಿದ್ದಾರಷ್ಟೇ ತಾಯಿ ಬಳಸಿರುವ ಪದಗಳಿಗಾಗಿ ಕ್ಷಮೆ ಕೇಳುತ್ತೇನೆ ಎಂದು ಸೂರಜ್​ ಹೇಳಿದ್ದಾರೆ. ಅಲ್ಲದೆ, ಬೈಕ್ ಸವಾರನದ್ದು ತಪ್ಪಿದ್ದರೂ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇದಕ್ಕಿಂತಲೂ ಹೆಚ್ಚು ಏನು ಮಾಡಬೇಕು? ಎಂದು ಹೇಳುವ ಮೂಲಕ ತಾಯಿಯ ಪರ ಬ್ಯಾಟ್​ ಬೀಸಿದರು.

    ಮಾಜಿ ಪ್ರಧಾನಿ ಹೇಳಿದ್ದೇನು?
    ಭವಾನಿ ಅವರ ಆರೋಗ್ಯ ಸರಿಯಿಲ್ಲ. ಅವರ ಎರಡೂ ಮಂಡಿ ಆಪರೇಷನ್​ ಆಗಿದೆ. ಇದೀಗ ಅನವಶ್ಯಕವಾಗಿ ಅವರ ವಿಚಾರವನ್ನು ಚರ್ಚೆ ಮಾಡಲಾಗುತ್ತಿದೆ. ದಯವಿಟ್ಟು ಆ ವಿಚಾರವನ್ನು ಇಲ್ಲಿಗೆ ಬಿಡಿ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ದೊಡ್ಡ ಸೊಸೆಯ ಪರ ಮಾತನಾಡಿದರು.

    ಘಟನೆ ಹಿನ್ನೆಲೆ ಏನು?
    ನಿನ್ನೆ (ಡಿ.03) ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಂಪುರ ಗ್ರಾಮದ ಗೇಟ್‌ ಬಳಿ ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ತಪ್ಪಾದ ಮಾರ್ಗದಲ್ಲಿ ಬಂದ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದಿದ್ದ. ಇದರ ಪರಿಣಾಮ ಕಾರಿನ ಮುಂಭಾಗ ಕೊಂಚ ಜಖಂಗೊಂಡಿತು. ಕೂಡಲೇ ಕೆಳಗೆ ಇಳಿದು ಪರಿಶೀಲಿಸಿದಾಗ ಕಾರಿಗೆ ಹಾನಿಯಾಗಿರುವುದನ್ನು ನೋಡಿ ತಾಳ್ಮೆ ಕಳೆದುಕೊಂಡ ಭವಾನಿ ರೇವಣ್ಣ ನಡುರಸ್ತೆಯಲ್ಲೇ ಬೈಕ್​ ಸವಾರನನ್ನು ಮನಬಂದಂತೆ ಅವಾಚ್ಯ ಪದಗಳಿಂದ ನಿಂದಿಸಿದರು.

    ಹಿಗ್ಗಾಮುಗ್ಗಾ ತರಾಟೆ
    ಅಪಘಾತಕ್ಕೀಡಾದ ವ್ಯಕ್ತಿಯ ಬಗ್ಗೆ ಕೊಂಚವೂ ಗಮನ ಹರಿಸದೇ ಸಾಯೋ ಹಾಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು, ಒಂದೂವರೆ ಕೋಟಿ ಕಾರೇ ಆಗ್ಬೇಕಿತ್ತಾ? ಎಂದು ಪ್ರಶ್ನಿಸುವ ಮೂಲಕ ಮಾನವೀಯತೆ ಮರೆತು ವರ್ತಿಸಿದ್ದರು. ಅಲ್ಲದೆ, ಬೈಕ್​ ಸವಾರನ ಬೈಕ್​ ಅನ್ನು ಸುಟ್ಟು ಹಾಕುವಂತೆಯೂ ಕರೆ ನೀಡಿದರು. ಗಾಡಿ ಡ್ಯಾಮೇಜ್​ ಆಗಿದೆ. ಇದನ್ನು ರಿಪೇರಿ ಮಾಡಿಸುವುದು ಹೇಗೆ? ಬಂದು ಡಿಕ್ಕಿ ಹೊಡೆಯುವಷ್ಟು ಅರ್ಜೆಂಟ್​ ಏನಿತ್ತು ನಿನಗೆ ಎಂದು ರಸ್ತೆಯಲ್ಲೇ ಕೂಗಾಡಿದರು. ಹೋಗಲಿ ಬಿಟ್ಟು ಬಿಡಿ ಎಂದು ಸ್ಥಳೀಯರ ಮಧ್ಯಪ್ರವೇಶಿಸಿ ಕೇಳಿಕೊಂಡರು ಬಿಡದ ಭವಾನಿ ಅವರು ಗಾಡಿ ರಿಪೇರಿ ಮಾಡಿಸೋಕೆ 50 ಲಕ್ಷ ರೂಪಾಯಿಯನ್ನು ನೀವು ಕೊಡ್ತಿರಾ ಎಂದು ಗದರಿದ್ದಾರೆ. ಹಣ ಕೊಡೋ ಹಾಗಿದ್ರೆ ನ್ಯಾಯದ ಮಾತನಾಡಿ ಎಂದು ಸ್ಥಳೀಯರನ್ನೂ ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡರು.

    ಪ್ರಕರಣ ದಾಖಲು
    ಇಷ್ಟಕ್ಕೆ ಸುಮ್ಮನಾಗದ ಭವಾನಿ ರೇವಣ್ಣ, ಬೈಕ್​ ಸವಾರ ಗಾಡಿ ಸೀಜ್​ ಮಾಡಿ, ಸ್ಥಳಕ್ಕೆ ಸಾಲಿಗ್ರಾಮ ಎಸ್​ಐ ಬರುವುದಕ್ಕೆ ಸಹಾಯಕರಿಗೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸಾಲಿಗ್ರಾಮ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿ, ತಂದ್ರೆಕೊಪ್ಪಲು ಗ್ರಾಮದ ಶಿವಣ್ಣ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

    ಭವಾನಿ ವಿರುದ್ಧ ವ್ಯಾಪಕ ಟೀಕೆ
    ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭವಾನಿ ರೇವಣ್ಣ ಅವರ ನಡೆಯನ್ನು ನೆಟ್ಟಿಗರು ವ್ಯಾಪಕವಾಗಿ ಖಂಡಿಸಿದ್ದಾರೆ. ಬೈಕ್​ನಿಂದ ಸವಾರ ಕೆಳಗೆ ಬಿದ್ದಿದ್ದರೂ ಅದನ್ನು ಗಮನಿಸದೇ ತಮ್ಮ ಕಾರಿನ ಬಗ್ಗೆ ಮಾತನಾಡುತ್ತಿದ್ದಾರೆ, ದೊಡ್ಡಗೌಡರ ಸೊಸೆಯಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮಾನವೀಯತೆಗಿಂತ ದುಡ್ಡು ಮುಖ್ಯವಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭವಾನಿ ರೇವಣ್ಣ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

    ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನನ್ನು ಅವಾಚ್ಯ ಪದಗಳಿಂದ ನಿಂದಿಸಿದ ಭವಾನಿ ರೇವಣ್ಣ! ನೆಟ್ಟಿಗರ ಆಕ್ರೋಶ

    ರಾಜ್ಯದಲ್ಲಿ ಮೂರು ದಿನ ಮಳೆ:ಸೈಕ್ಲೋನ್ ಪರಿಣಾಮ ಥಂಡಿ ವಾತಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts