More

    ಭಟ್ಕಳ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಸೂಪರ್‌ಸೀಡ್

    ಭಟ್ಕಳ: ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ (ಪಿಎಲ್‌ಡಿ) ಕರ್ನಾಟಕ ಸಹಕಾರ ಸಂಘಗಳ ನಿಯಮ ಉಲ್ಲಂಘಿಸಿ ಅಕ್ರಮವಾಗಿ 24 ಸಿಬ್ಬಂದಿ ನೇಮಕಾತಿ ನಡೆಸಿರುವ ಹಿನ್ನೆಲೆಯಲ್ಲಿ ಪಿಎಲ್‌ಡಿ ಬ್ಯಾಂಕಿನ ಎಲ್ಲ ಸದಸ್ಯರನ್ನು ಅನರ್ಹಗೊಳಿಸಿ ಸಹಕಾರ ಸಂಘಗಳ ಉಪನಿಬಂಧಕರು ಆದೇಶ ಹೊರಡಿಸಿದ್ದಾರೆ.

    ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ

    ಸರ್ಕಾರದ ಸುತ್ತೋಲೆಯಂತೆ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ ಎಂದು ಶಂಕರ ನಾಯ್ಕ ಜಿಲ್ಲಾ ಸಹಾಯಕ ಉಪನಿಬಂಧಕರ ಕೋರ್ಟ್‌ಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸಹಕಾರ ಸಂಘಗಳ ನಿಯಮ 17 ಹಾಗೂ 18ರ ನೇರ ಉಲ್ಲಂಘನೆ ಕಂಡು ಬಂದಿದೆ.

    24 ಸಿಬ್ಬಂದಿ ನೇಮಕ ಕಾನೂನು ಬಾಹಿರ. ಇದರಿಂದಾಗಿ ಕರ್ನಾಟಕ ಸಹಕಾರ ಸಂಘಗಳ ನಿಯಮ 29ಸಿ ಅಡಿ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲು ಪರೀಶೀಲನೆ ನಡೆಸಬೇಕು, ನೇರವಾಗಿ ನೇಮಕಾತಿ ಮಾಡಿದ 24 ಸಿಬ್ಬಂದಿಯನ್ನು ವಜಾಗೊಳಿಸಬೇಕು ಎಂದು ವರದಿ ನೀಡಿದ್ದರು. ಈ ವರದಿ ಆಧರಿಸಿ ಸಿಬ್ಬಂದಿ ನೇಮಕಾತಿ ರದ್ದು ಗೊಳಿಸುವಂತೆ ಜಿಲ್ಲಾ ಸಹಕಾರಿ ಸಹಾಯಕ ಉಪನಿಬಂಧಕರು (ಡಿಆರ್) ಸೂಚಿಸಿದ್ದರು.

    ಆದರೆ, ಈ ಆದೇಶವನ್ನು ಪ್ರಶ್ನಿಸಿ ಅಂದಿನ ಶಾಸಕ ಸುನೀಲ ನಾಯ್ಕ ಹೈಕೋರ್ಟ್ ಮೋರೆ ಹೋಗಿದ್ದರು. ಬಳಿಕ ಹೈಕೋರ್ಟ್ ದ್ವಿಸದಸ್ಯ ಪೀಠವು ಕಾರವಾರ ಡಿಆರ್ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿದ್ದು ಇದರಿಂದ ಮಾಜಿ ಶಾಸಕ ಸುನೀಲ ನಾಯ್ಕ ಮುಖಭಂಗ ಅನುಭವಿಸಿದ್ದರು.

    ಆಡಳಿತ ಮಂಡಳಿ ಸೂಪರ್ ಸೀಡ್

    ನೇಮಕಾತಿಯಲ್ಲಿ ಅವ್ಯವಹಾರ ಹಾಗೂ ಸಹಕಾರಿ ನಿಯಮ ಉಲ್ಲಂಘನೆಯಾಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸುನೀಲ ಬಿಳಿಯಾ ನಾಯ್ಕ, ಗಾಯತ್ರಿ ವಿಜಯಕುಮಾರ ನಾಯ್ಕ, ಮಂಜಪ್ಪ ನಾಯ್ಕ, ಸಂತೋಷ ಮಾದೇವ ನಾಯ್ಕ, ಮೋಹನ ಕೊರ್ಗಪ್ಪ ನಾಯ್ಕ, ಹರೀಶ ವೆಂಕಟೇಶ ನಾಯ್ಕ, ನವನೀತ ಗಣೇಶ ನಾಯ್ಕ, ಈರಪ್ಪ ಮಂಜಪ್ಪ ಗರ್ಡಿಕರ, ಈಶ್ವರ ಮಂಜುನಾಥ ನಾಯ್ಕ, ಕಮಲಾ ರಾಮಚಂದ್ರ ನಾಯ್ಕ, ನಾಗಯ್ಯ ಮಾಸಿ ಗೊಂಡ, ಈಶ್ವರ ನಾರಾಯಣ ನಾಯ್ಕ, ಮಂಜು ಮೊಗೇರ, ಸುರೇಶ ಜಟ್ಟಯ್ಯ ನಾಯ್ಕ ಮತ್ತು ಮಂಜುನಾಥ ನಾಯ್ಕ ಇವರುಗಳನ್ನು ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದಿಂದ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ ಪ್ರಕರಣ 29-ಸಿ ರನ್ವಯ ಅನರ್ಹಗೊಳಿಸಿ ಆದೇಶಿಸಲಾಗಿದೆ.

    ಶೀಘ್ರ ಚುನಾವಣೆ ನಡೆಸಲು ಆದೇಶ

    ಬ್ಯಾಂಕಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರನ್ನು ಅನರ್ಹಗೊಳಿಸಿದ ಬಳಿಕ ಶೂನ್ಯತೆ ಕಂಡು ಬಂದಿದೆ. ಬ್ಯಾಂಕಿನ ದೈನಂದಿನ ವ್ಯವಹಾರ ಸುಗಮವಾಗಿ ನಡೆಯಲು ಕುಮಟಾ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಮುಂದಿನ 6 ತಿಂಗಳ ಅವಧಿಗೆ ವಿಶೇಷ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ವಿಶೇಷ ಅಧಿಕಾರಿಯೂ ಕೂಡಲೇ ಬ್ಯಾಂಕಿನ ಪ್ರಭಾರವನ್ನು ಪಡೆದು ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಮಂಜುನಾಥ ಆರ್. ಆದೇಶ ಹೊರಡಿಸಿದ್ದಾರೆ.

    ಸುನೀಲ ನಾಯ್ಕ ಅವರ ಸರ್ವಾಧಿಕಾರ ಧೋರಣೆಯಿಂದ ಬೇಸತ್ತು ತಾನು ಈಗಾಗಲೇ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ.
    ಈಶ್ವರ ನಾಯ್ಕ, ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts