More

    ಭರತನಾಟ್ಯ ಸಿರಿಗೊಳಿಸುತ್ತಿದೆ ತಾಶಿಧರೇ

    ಅವಿನಾಶ್ ಜೈನಹಳ್ಳಿ ಮೈಸೂರು
    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರತನಾಟ್ಯ ನೃತ್ಯ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ‘ತಾಶಿಧರೇ’ ಪ್ರದರ್ಶಕ ಕಲೆಗಳ ಕೇಂದ್ರವೂ ಪ್ರಮುಖ ಪಾತ್ರ ವಹಿಸಿದೆ.
    ಭರತನಾಟ್ಯ ಕಲೆ ನಮ್ಮ ದೇಸಿ ಸಂಸ್ಕೃತಿ, ಆಚಾರ, ಸಂಪ್ರದಾಯಗಳನ್ನು ಎತ್ತಿ ತೋರಿಸುತ್ತದೆ. ಹಲವು ಜನರ ಆರಾಧನಾ ಕಲೆ ಆಗಿರುವ ಭರತನಾಟ್ಯವಿಂದು ದೇಶ, ವಿದೇಶಗಳಲ್ಲಿ ಪಸರಿಸಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಪ್ರಸಿದ್ಧಿ ಹೊಂದಿದೆ. ಇಂತಹ ಕಲೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನೇಕ ಸಂಸ್ಥೆಗಳು, ಕಲಾವಿದರು ಪ್ರಚಾರಪಡಿಸುತ್ತಿದ್ದಾರೆ. ಇಂತಹ ಸಾಲಿಗೆ ‘ತಾಶಿಧರೇ’ ಪ್ರದರ್ಶಕ ಕಲೆಗಳ ಕೇಂದ್ರವೂ ಸೇರುತ್ತದೆ.

    ಭರತನಾಟ್ಯ ಸಿರಿಗೊಳಿಸುತ್ತಿದೆ ತಾಶಿಧರೇ


    ಇದು ನಗರದಲ್ಲಿ ‘ವಸುಂಧರಾ ಶೈಲಿ’ಯ ಭರತನಾಟ್ಯ ಪರಿಚಯಿಸುವ, ಕಲಿಸುವ ಕಾಯಕದಲ್ಲಿ ತೊಡಗಿದೆ. ಕೇಂದ್ರದ ಸಂಸ್ಥಾಪಕಿಯಾಗಿರುವ ವಿದುಷಿ ತನುಶ್ರೀ ಶಿವರಾಜ್ ತಮ್ಮ ಗುರುಗಳಾದ ವಸುಂಧರಾ ದೊರೆಸ್ವಾಮಿ ಅವರ ಮಾರ್ಗದರ್ಶನದಲ್ಲಿ 10 ವರ್ಷಗಳಿಂದ ಭರತನಾಟ್ಯ ನೃತ್ಯವನ್ನು ಪಸರಿಸುವ ಕಾಯಕದಲ್ಲಿ ತೊಡಗಿದ್ದಾರೆ.
    ತನುಶ್ರೀ ಶಿವರಾಜ್ ಅವರು ಈ ಹಿಂದೆ ಕಲಾಂಧಿಕಾ ಪ್ರದರ್ಶಕ ಕಲೆಗಳ ಕೇಂದ್ರದಲ್ಲಿ ನೃತ್ಯ ಶಿಕ್ಷಕಿಯಾಗಿ 4 ವರ್ಷ ಕಾಲ ಕಾರ್ಯನಿರ್ವಹಿಸಿದ್ದಾರೆ. 2018ರಲ್ಲಿ ಶಿವರಾಜ್ ಅವರನ್ನು ವಿವಾಹವಾಗಿ ಅವರ ಸಹಾಯ ಹಾಗೂ ಮಾರ್ಗದರ್ಶನದಲ್ಲಿ ಎಸ್‌ಟಿಜಿ ಎಜುಕೇಷನಲ್ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನ ಸಂಸ್ಕೃತಿ ವಿಭಾಗವಾಗಿ ತಾಶಿಧರೇ ಪ್ರದರ್ಶಕ ಕಲೆಗಳ ಕೇಂದ್ರವನ್ನು ಸ್ಥಾಪಿಸಿ ಭರತನಾಟ್ಯ ಹೇಳಿಕೊಡುತ್ತಿದ್ದಾರೆ.

    ಭರತನಾಟ್ಯ ಸಿರಿಗೊಳಿಸುತ್ತಿದೆ ತಾಶಿಧರೇ

    ವಾರದಲ್ಲಿ ಮೂರು ದಿನ ತರಬೇತಿ:
    ತಾಶಿಧರೇ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಡಿ ನಡೆಯುವ ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಇನ್ನು ಅನೇಕರು ವಿದ್ವತ್ ಹಂತದ ಪಾಠಗಳನ್ನು ಕಲಿತು ಯಶಸ್ವಿಯಾಗಿದ್ದಾರೆ.
    ಗೋಕುಲಂನಲ್ಲಿರುವ ‘ತಾಶಿಧರೇ’ ಪ್ರದರ್ಶಕ ಕಲೆಗಳ ಕೇಂದ್ರದಲ್ಲಿ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಜೆ 5 ರಿಂದ 6 ಗಂಟೆವರೆಗ ಜೂನಿಯರ್ ವಿದ್ಯಾರ್ಥಿಗಳ ತರಗತಿ ಹಾಗೂ ಸಂಜೆ 6 ರಿಂದ 7.30 ರವರೆಗೆ ಸೀನಿಯರ್ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿದೆ. ಇಲ್ಲಿವರೆಗೆ ನೂರಾರು ವಿದ್ಯಾರ್ಥಿಗಳು ನೃತ್ಯ ಕಲಿತಿದ್ದಾರೆ. ಸದ್ಯ 25 ಜೂನಿಯರ್ ಹಾಗೂ 20 ಸೀನಿಯರ್ ವಿದ್ಯಾರ್ಥಿಗಳಿದ್ದಾರೆ.

    ಭರತನಾಟ್ಯ ಸಿರಿಗೊಳಿಸುತ್ತಿದೆ ತಾಶಿಧರೇ


    ಪ್ರಸಿದ್ಧ ನೃತ್ಯ ಕಲಾವಿದೆ:
    ಭದ್ರಾವತಿಯ ಸುರೇಶ್, ಗಾಯತ್ರಿ ದಂಪತಿಯ ಪುತ್ರಿಯಾಗಿರುವ ವಿದುಷಿ ತನುಶ್ರೀ ಶಿವರಾಜ್ ಪ್ರಸಿದ್ಧ ನೃತ್ಯ ಕಲಾವಿದೆಯಾಗಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಭದ್ರಾವತಿಯಿಂದ ಮೈಸೂರಿಗೆ ಬಂದು ನೆಲೆಸಿದ ಇವರು ತಮ್ಮ 5ನೇ ವಯಸ್ಸಿನಿಂದ ಇಲ್ಲಿಯವರೆಗೂ ವಸುಂಧರಾ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್‌ನಲ್ಲಿ ಡಾ.ವಸುಂಧರಾ ದೊರೆಸ್ವಾಮಿ ಬಳಿ ವಸುಂಧರಾ ಶೈಲಿಯಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡುತಿದ್ದಾರೆ. ಕೆಎಸ್‌ಇಇಬಿ ನಡೆಸುವ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
    ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ 2011ರಲ್ಲಿ ರಂಗಪ್ರವೇಶವನ್ನು ಪ್ರಸ್ತುತ ಪಡಿಸಿದ್ದಾರೆ. ಪ್ರವಾಹ್ ರಾಷ್ಟ್ರೀಯ ಉತ್ಸವ (ಗೋವಾ ಹಾಗೂ ಜೋದ್ಪುರ್), ಲೋಕ್ರಂಗ್ ರಾಷ್ಟ್ರೀಯ ಉತ್ಸವ ( ಭೋಪಾಲ್), ಕೋನಾರ್ಕ್ ರಾಷ್ಟ್ರೀಯ ಉತ್ಸವ, ಬ್ರಹ್ಮಕುಮಾರಿಯ ಅಂತಾರಾಷ್ಟ್ರೀಯ ಶಾಂತಿ ಸಭೆ (ಮೌಂಟ್ ಅಬು), ಪ್ರಕೃತಿ ಉತ್ಸವ, ಸೌತ್ ಜೋನ್ ಕಲ್ಚರಲ್ ಸೆಂಟರ್ ಕಾರ್ಯಕ್ರಮ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಸಹ್ಯಾದ್ರಿ ಉತ್ಸವ, ಬೇಲೂರು-ಹಳೇಬೀಡು ಉತ್ಸವ, ಶ್ರಾವಣ ಬೆಳಗೊಳದ ಮಹಾಮಸ್ತಕಾಭಿಷೇಕ, ಕರಾವಳಿ ಉತ್ಸವ, ಮೂಡಿಬಿದ್ರೆಯ ಆಳ್ವಾಸ್ ನುಡಿಸಿರಿ, ಮೈಸೂರು ದಸರಾ ಅರಮನೆ ಕಾರ್ಯಕ್ರಮ, ಗಾಯನ ಸಮಾಜ, ಲಾಸ್ಯ ನೃತ್ಯ ಶಾಲೆಯ ಲಾಸ್ಯೋತ್ಸವ(ಚೆನ್ನೈ), ಸುತ್ತೂರು ಜಾತ್ರಾ ಮಹೋತ್ಸವ, ಆರ್ಯಭಟ ಉತ್ಸವ, ಪಲ್ಲವೋತ್ಸವ, ಪಾರಂಗತೋತ್ಸವ ಸೇರಿ ನೂರಾರು ಪ್ರತಿಷ್ಠಿತ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದ್ದಾರೆ.


    ಹಲವು ಪ್ರಶಸ್ತಿ:
    ತನುಶ್ರೀ ಶಿವರಾಜ ಅವರಿಗೆ ಹೊಯ್ಸಳ ಪ್ರಶಸ್ತಿ, ಜಿ.ಪಿ.ರಾಜರತ್ನಂ ಪ್ರಶಸ್ತಿ, ಸಾಧನಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ (ಭಾರತ ಸರ್ಕಾರ), ಮಕ್ಕಳ ವಿದ್ಯಾರ್ಥಿವೇತನ (ಭಾರತ ಸಂಸ್ಕೃತಿ ಇಲಾಖೆ), ಯುವ ವಿದ್ಯಾರ್ಥಿವೇತನ (ಭಾರತ ಸಂಸ್ಕೃತಿ ಇಲಾಖೆ), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಿದ್ಯಾರ್ಥಿವೇತನ ಪಡೆದಿದ್ದಾರೆ. ವಿಶೇಷ ಎಂದರೆ ಚೀನಾ ದೇಶದಲ್ಲಿ ನಡೆದ ಟಿಯಾಜಿನ್ ಇಂಟರ್‌ನ್ಯಾಷನಲ್ ಚಿಲ್ಡ್ರನ್ ಕಲ್ಚರಲ್ ಆ್ಯಂಡ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ ಭಾರತದ ರಾಯಭಾರಿಯಾಗಿ ಭಾಗವಹಿಸಿದ್ದಾರೆ. ಇವರನ್ನು (ಮೊ.9341113345) ಮೂಲಕ ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts