More

    ಭೈರನಟ್ಟಿಯಲ್ಲಿ ಅಸ್ಪಶ್ಯತೆ ಜೀವಂತ!

    ದಲಿತರಿಗಿಲ್ಲ ದೇವಸ್ಥಾನ, ಮನೆ ಪ್ರವೇಶ ಶತಮಾನಗಳೇ ಉರುಳಿದರೂ ನಿಲ್ಲದ ಅನಿಷ್ಟ ಆಚರಣೆ

    ಗೋಕಾಕ: ಶತಮಾನಗಳಿಂದ ಆಚರಣೆಯಲ್ಲಿರುವ ಅಸ್ಪಶ್ಯತೆ ಇತ್ತೀಚಿನ ವರ್ಷಗಳಲ್ಲಿ ಕೊಂಚ ಕಡಿಮೆಯಾಗುತ್ತಿದೆ ಅನ್ನುವಷ್ಟರಲ್ಲಿ ಗ್ರಾಮೀಣ ಭಾಗದಲ್ಲಿ ಅನಿಷ್ಟ ಪದ್ಧತಿಯ ಕುರುಹು ಇನ್ನೂ ಜೀವಂತ ಇರುವುದು ಕಂಡುಬರುತ್ತಲೇ ಇದೆ. ಕಾಲ ಬದಲಾದಂತೆ, ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ನಿಲ್ಲಬೇಕಾಗಿದ್ದ ಅನಿಷ್ಟತೆ ಇನ್ನೂ ಸೋಂಕಿನಂತೆ ಜೀವಂತ ಇರುವುದು ದುರಂತ.

    ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅರಬಾವಿ ಕ್ಷೇತ್ರದ ಭೈರನಟ್ಟಿ ಗ್ರಾಮದಲ್ಲಿ ಅಸ್ಪಶ್ಯತೆ ಜೀವಂತವಿದೆ. ಬಹಳ ಹಿಂದಿನಿಂದಲೂ ಇಲ್ಲಿನ ಜನ ಸಂಪ್ರದಾಯದ ಹೆಸರಿನಲ್ಲಿ ಈ ಪದ್ಧತಿ ಆಚರಣೆ ಮಾಡಿಕೊಂಡು ಬಂದಿದ್ದು, ಇಂದಿಗೂ ಸಹ ದಲಿತರು ಊರಿನ ಯಾವುದೇ ದೇವಸ್ಥಾನ ಪ್ರವೇಶ ಮಾಡುವುದಿಲ್ಲ. ಅಲ್ಲದೆ, ಊರಿನ ಮೇಲ್ವರ್ಗದ ಜನರ ಮನೆಗಳಿಗೂ, ಹೋಟೆಲ್‌ಗಳಿಗೂ ದಲಿತರಿಗೆ ಪ್ರವೇಶವಿಲ್ಲ. ಇದು ಸಾಮಾಜಿಕ ಅಸಮಾನತೆಗೆ ಹಿಡಿದ ಕನ್ನಡಿಯಾಗಿದೆ.

    ಏನೂ ಬದಲಾಗಿಲ್ಲ: ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಅನಿಸುತ್ತಿದೆಯಾದರೂ ಅಲಿಖಿತ ಒಪ್ಪಂದದಂತೆ ಈ ಅಸ್ಪಶ್ಯತೆ ಎಂಬ ಪಿಡುಗು ಭೈರನಟ್ಟಿಯಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಶತಮಾನಗಳಿಂದ ತುಳಿತಕ್ಕೊಳಗಾದ ದಲಿತರು ಇಂದಿಗೂ ತಮ್ಮಂತೆಯೇ ಇರುವವರ ಮಧ್ಯೆ ಒಳಗೊಂಡು ಬದುಕಲು ಸಾಧ್ಯವಾಗುತ್ತಿಲ್ಲ. ದಲಿತರು ಎಂಬ ಕಾರಣಕ್ಕೆ ದೇವಸ್ಥಾನ ಪ್ರವೇಶ ಸೇರಿ ರೈತರ ಮನೆಗಳಿಗೂ ಪ್ರವೇಶ ನಿರ್ಬಂಧಿಸಿರುವುದು ಭೈರನಟ್ಟಿಯಲ್ಲಿ ನಡದೇ ಇದೆ. ಏನಾದರೂ ತರ್ತು ಕೆಲಸವಿದ್ದರೆ ರೈತರ ಮನೆಯ ಬಾಗಿಲಿನಲ್ಲಿ
    ನಿಂತು ಕೂಗಿ ಕರೆಯಬೇಕು. ಆದರೆ ಮನೆಯೊಳಗೆ ಹೆಜ್ಜೆ ಇಡುವಂತಿಲ್ಲ.

    ಕ್ರಮ ಕೈಗೊಳ್ಳಿ: ಕಂದಾಚಾರದ ಆಚರಣೆಗಳು ಮೂರು ದಶಕದ ಹಿಂದೆ ಇದ್ದವು ಎಂದರೆ ನಂಬಬಹುದು.
    ಆದರೆ, 21ನೇ ಶತಮಾನದಲ್ಲೂ ಈ ಜನರು ಅದೇ ಕಂದಾಚಾರ, ಮೂಢನಂಬಿಕೆ ಸಂಪ್ರದಾಯದ ಹೆಸರಿನಲ್ಲಿ ಜೋತು ಬಿದ್ದಿರುವುದು ನಿಜಕ್ಕೂ ಶೋಚನೀಯ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಭೈರನಟ್ಟಿ ಗ್ರಾಮಸ್ಥ ಮಂಜುನಾಥ ಜಾಡರ.

    ಅನಿಷ್ಟತೆಗೂ ಸಂಪ್ರದಾಯದ ಲೇಪನ: ದೇಶಕ್ಕೆ ಸ್ವತಂತ್ರ ಸಿಕ್ಕು ದಶಕಗಳೇ ಕಳೆದರೂ ಅಸ್ಪಶ್ಯತೆ ನಿಲ್ಲುತ್ತಿಲ್ಲ ಎಂಬುದಕ್ಕೆ ಭೈರನಟ್ಟಿ ಜ್ವಲಂತ ಉದಾಹರಣೆ. ಇಲ್ಲಿನ ಹಿರಿಯರು ಮತ್ತು ಕಿರಿಯರು ಸಂಪ್ರದಾಯದ ಹೆಸರಿನಲ್ಲಿ ಈ ಪದ್ಧತಿ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಯಾಕೆ ಈ ರೀತಿ ಎಂದು ಇಲ್ಲಿನವರಿಗೆ ಪ್ರಶ್ನಿಸಿದರೆ, ‘ನಮಗೂ ಗೊತ್ತಿಲ್ಲ. ಹಿಂದಿನಿಂದಲೂ ಸಹ ಈ ಪದ್ಧ್ದತಿ ಜಾರಿಯಲ್ಲಿದೆ. ಹೀಗಾಗಿ ನಾವು ಆಚರಣೆ ಮಾಡಿಕೊಂಡು ಬಂದಿದ್ದೇವೆ’ ಎನ್ನುತ್ತಾರೆ.

    ಭೈರನಟ್ಟಿಯಲ್ಲಿ ಅಸ್ಪಶ್ಯತೆ ಆಚರಣೆ ಇರುವ ಕುರಿತು ಯಾವುದೇ ದೂರು ಬಂದಿಲ್ಲ. ಯಾರಾದರೂ ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    | ಡಿ.ಜಿ. ಮಹಾತ.
    ತಹಸೀಲ್ದಾರ್, ಮೂಡಲಗಿ

    ಭೈರನಟ್ಟಿಯಷ್ಟೇ ಅಲ್ಲದೆ, ಸುತ್ತಲಿನ ಕೆಲ ಹಳ್ಳಿಗಳಲ್ಲಿ ದಲಿತರು ಮಾನಸಿಕವಾಗಿ ಬೆಳವಣಿಗೆ ಹೊಂದಿಲ್ಲ. ನಾವು ಎಷ್ಟೇ ಅವರನ್ನು ನಮ್ಮ ಜತೆ ಕರೆದರೂ ಅವರು ಕೀಳರಿಮೆಯಿಂದ ಹೊರಬಂದಿಲ್ಲ. ಅವರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ದೇವಸ್ಥಾನದಲ್ಲಿ ಕರ್ಪೂರ ಹಚ್ಚಲೂ ಬರುತ್ತಿಲ್ಲ. ತಾವು ಮಾಂಸಾಹಾರಿಗಳು. ದೇವರು ಅದನ್ನು ಸಹಿಸುವುದಿಲ್ಲ ಎಂಬ ಭಾವನೆ ದಲಿತರಲ್ಲಿದೆ. ಜಾಗೃತಿ ಮೂಡಿಸುವ ಪ್ರಯತ್ನ ಇನ್ನೂ ನಡೆದೇ ಇದೆ.
    |ಶಿವನಗೌಡ ಪಾಟೀಲ
    ಗ್ರಾಪಂ ಮಾಜಿ ಉಪಾಧ್ಯಕ್ಷ, ಕಳ್ಳಿಗುದ್ದಿ

    ರೈತರ ಮನೆಗೂ ದಲಿತರು ಹೋಗುವುದು ಗ್ರಾಮದಲ್ಲಿ ಇಂದಿಗೂ ನಿಷಿದ್ಧ. ಹಾಗೇನಾದರೂ ಹೋಗಲೇಬೇಕಾದ ಅನಿವಾರ್ಯತೆ ಬಂದರೆ ರೈತರ ಮನೆಯ ಹೊರಗೆ ನಿಂತು ಕರೆಯುವ ಪರಿಸ್ಥಿತಿ ಇದೆ. ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶ ನಿಷೇಧಿಸಲಾಗಿದೆ. ಅವರೇನಾದರೂ ಅಲ್ಲಿಗೆ ಟೀ ಅಥವಾ ಇನ್ನೇನಾದರೂ ತೆಗೆದುಕೊಳ್ಳೋಕೆ ಹೋದರೆ ಅಲ್ಲಿ ಅವರಿಗಾಗಿಯೇ ಮೀಸಲಿಟ್ಟಿರುವ ತಟ್ಟೆ ಮತ್ತು ಕಪ್‌ನಲ್ಲೇ ಟೀ ಕುಡಿಯುವ ಪದ್ಧತಿ ಈಗಲೂ ಇದೆ. ದಲಿತರು ದೇವಸ್ಥಾನ ಪ್ರವೇಶ ಮಾಡಿದರೆ ಕೆಡುಕಾಗುತ್ತದೆ ಎಂದು ಅವರು ನಂಬಿದ್ದಾರೆ.
    | ಶಿವಯ್ಯ ಸ್ವಾಮಿಗೋಳ ಭೈರನಟ್ಟಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts