More

    ನಾಯಕನಹಟ್ಟಿ ಬಂದ್‌ಗೆ ಉತ್ತಮ ಬೆಂಬಲ

    ನಾಯಕನಹಟ್ಟಿ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯ ಅನುಷ್ಠಾನಕ್ಕಾಗಿ ಒತ್ತಾಯಿಸಿ ನಾಯಕನಹಟ್ಟಿ ಹೋಬಳಿ ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ನಾಯಕನಹಟ್ಟಿ ಬಂದ್‌ಗೆ ಉತ್ತಮ ಸ್ಪಂದನೆ ದೊರೆತಿದೆ.

    ಬೆಳಗ್ಗೆಯಿಂದಲೇ ಮುಖ್ಯ ರಸ್ತೆಯ ಎಲ್ಲ ಅಂಗಡಿ- ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ವಾಹನ ಸಂಚಾರ ಸ್ಥಗಿತವಾಗಿತ್ತು. 9 ಗಂಟೆ ನಂತರ ರೈತಸಂಘ, ಕರವೇ, ಕೆಆರ್‌ಎಸ್ ಪಕ್ಷ, ದಸಂಸ, ಮಾದಿಗ ಸೇವಾಟ್ರಸ್ಟ್, ವರ್ತಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ, ಖಾಸಗಿ ಬಸ್ ಮಾಲೀಕರ ಸಂಘ ಸೇರಿ 35 ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ಬಂದ್ ಬೆಂಬಲಿಸಿ ಬೀದಿಗಿಳಿದರು.

    ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ರಾಯದುರ್ಗ, ಕಲ್ಯಾಣದುರ್ಗ, ಹೊಸಪೇಟೆ, ದಾವಣಗೆರೆ ಮಾರ್ಗಗಳನ್ನು ಬ್ಯಾರಿಕೇಡ್‌ಗಳ ಮೂಲಕ ಮುಚ್ಚಲಾಗಿತ್ತು. ಸಂಜೆ 6 ಗಂಟೆಯವರೆಗೆ ವಾಣಿಜ್ಯ ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು.

    ಖಾಸಗಿ ಬಸ್ ಸಂಚಾರ, ಆಟೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಪಟ್ಟಣ ಪ್ರವೇಶಿಸಲಿಲ್ಲ. ಕೆಲ ಬಸ್‌ಗಳು ಪಟ್ಟಣದ ಹೊರಭಾಗದಲ್ಲಿ ಸಂಚರಿಸಿದವು. ಹಳ್ಳಿಗಳಿಗೆ ತೆರಳುವ ಆಟೋಗಳು ಸಂಚರಿಸಲಿಲ್ಲ.

    ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ, ಸಾರ್ವಜನಿಕರು ಇರಲಿಲ್ಲ.

    ಹನ್ನೊಂದು ಗಂಟೆಗೆ ಹಟ್ಟಿ ಮಲ್ಲಪ್ಪನಾಯಕ ಆವರಣದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಾದಗಟ್ಟೆ, ತೇರುಬೀದಿ, ಒಳಮಠ ನಾಗರಕಟ್ಟೆ, ಅಂಬೇಡ್ಕರ್ ವೃತ್ತ, ಜೆ.ಸಿ.ರಸ್ತೆ ಮಾರ್ಗವಾಗಿ ವಾಲ್ಮೀಕಿ ವೃತ್ತವನ್ನು ತಲುಪಿತು. ಅಲ್ಲಿ ಪ್ರತಿಭಟನಾಕಾರರು ಧರಣಿ ಕುಳಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

    ನಂತರ ನಡೆದ ಬಹಿರಂಗ ಸಮಾವೇಶದಲ್ಲಿ ಜೆ.ಯಾದವರೆಡ್ಡಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ಬಾಲರಾಜ್, ಬಂಡೆ ಕಪಿಲೆ ಓಬಣ್ಣ, ಸೈಯದ್‌ಅನ್ವರ್, ಜಿ.ಬಿ.ಮುದಿಯಪ್ಪ, ರೈತಮುಖಂಡ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಎನ್‌ಐಎಮ್‌ಡಿ. ಮನ್ಸೂರ್, ಎಸ್.ಟಿ.ಬೋರಸ್ವಾಮಿ, ಬಸವರಾಜ್, ಜೆ.ಪಿ.ರವಿಶಂಕರ್, ಎಸ್.ಓಬಯ್ಯ, ಬಾಲರಾಜ್ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರು ಸೇರಿ ಹಲವರು ಭದ್ರಾಮೇಲ್ದಂಡೆ ಯೋಜನೆಯ ಅಗತ್ಯತೆ, ಅನುಷ್ಠಾನದಿಂದಾಗುವ ಪ್ರಯೋಜನಗಳು, ಯೋಜನೆಯ ಸಾಧಕ ಬಾಧಕಗಳನ್ನು ಕುರಿತು ಮಾತನಾಡಿದರು.

    ನಾಯಕನಹಟ್ಟಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಎಲ್ಲ ಪದಾಧಿಕಾರಿಗಳು, ಪಟ್ಟಣದ 33 ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ಪಪಂ ಸದಸ್ಯರು, ಹೋಬಳಿಯ ವಿವಿಧ ಗ್ರಾಮಗಳಿಂದ ಬಂದ ರೈತ ಮುಖಂಡರು ಪಾಲ್ಗೊಂಡಿದ್ದರು.

    ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆಯ ಪುರಸ್ಕಾರ ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, 5300 ಕೋಟಿ ರೂ.ಮೀಸಲಿಟ್ಟಿರುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ, ಇದುವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ರಾಷ್ಟ್ರೀಯ ಯೋಜನೆಯ ಪುರಸ್ಕಾರವನ್ನು ಸಹ ನೀಡದೆ ಕಣ್ಣಾಮುಚ್ಚಾಲೆ ಆಡುತ್ತಿದೆ.
    ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಹಟ್ಟಿಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts