More

    ಭದ್ರಾವತಿಯಲ್ಲೂ ಹಾರಲಿ ಬಿಜೆಪಿ ಬಾವುಟ: ಸಚಿವ ಅಶ್ವತ್ಥನಾರಾಯಣ

    ಶಿವಮೊಗ್ಗ: ಪಕ್ಷ ಸಂಘಟನೆಗೆ ವಿಜಯ ಸಂಕಲ್ಪ ಅಭಿಯಾನ ಪೂರಕವಾಗಿದ್ದು 2023ರಲ್ಲಿ ಭದ್ರಾವತಿ ಕ್ಷೇತ್ರದಲ್ಲೂ ಗೆಲ್ಲಬೇಕು. ಉಕ್ಕಿನ ನಗರಿಯಲ್ಲೂ ಬಿಜೆಪಿ ಬಾವೂಟ ಹಾರಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಅಭಿಯಾನದ ರಾಜ್ಯ ಸಂಚಾಲಕ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
    ಗಾಂಧಿಬಜಾರ್‌ನ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ವಿಜಯ ಸಂಕಲ್ಪ ಅಭಿಯಾನದ ಭಾಗವಾಗಿ ಫಲಾನುಭವಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ಮತ್ತು ಸಾಮಾಜಿಕವಾಗಿ ಶಿವಮೊಗ್ಗ ಗಟ್ಟಿಯಾಗಿದೆ. ಈಗಾಗಲೇ ಏಳರಲ್ಲಿ ಆರು ಕ್ಷೇತ್ರಗಳನ್ನು ಗೆದ್ದಿದೆ. ಈ ಬಾರಿ ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ ಎಂದರು.
    ಬಿಜೆಪಿ ಸದೃಢವಾಗಿ ಬೆಳೆಯಬೇಕಾದರೆ ಪಕ್ಷವನ್ನು ಮತ್ತಷ್ಟು ವಿಸ್ತರಣೆ ಮಾಡಬೇಕಿದೆ. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸಬೇಕಿದೆ. ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಇಲ್ಲವಾದರೆ ಪುರಸೊತ್ತಾಗಿರುವ ಪ್ರತಿಪಕ್ಷಗಳು ನಿರಾಧಾರವಾಗಿ ಆರೋಪಗಳನ್ನು ಮಾಡುತ್ತವೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.
    ಭ್ರಷ್ಟಾಚಾರದಿಂದಲೇ ಕಾಂಗ್ರೆಸ್ ಬಲಿಷ್ಠವಾಗಿದ್ದು ಅಧಿಕಾರ ದುರುಪಯೋಗದಿಂದ ಸಮಾಜ ಹೊಡೆಯುವ ಕೆಲಸ ಮಾಡಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಬಡವರ ಬಂದು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ದುಬಾರಿ ಬೆಲೆಯ ವಾಚ್ ವಾಪಸ್ ಕೊಟ್ಟ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.
    ಪಕ್ಷದಲ್ಲಿ ನಾಯಕರನ್ನು ಬೆಳೆಸದವರು ನಿಜವಾದ ನಾಯಕರೆನಿಸಿಕೊಳ್ಳಲು ಆಗುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸದನದಲ್ಲಿ ಮಾತನಾಡುವ ಧೈರ್ಯವಿಲ್ಲ. ಆದರೆ ಹೊರಗಡೆ ಬರುತ್ತಿದ್ದಂತೆ ನಿರಾಧಾರವಾಗಿ ಆರೋಪಗಳನ್ನು ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಸೋರಿಕೆ ತಡೆಯಲಿಲ್ಲ. ಡಿಜಿಟೈಲೇಷನ್‌ಗೆ ಒತ್ತು ಕೊಡಲಿಲ್ಲ. ಪರಿಣಾಮ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವಂತಾಗಿದೆ ಎಂದರು.
    ಮೇಯರ್ ಎಸ್.ಶಿವಕುಮಾರ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಂಎಲ್‌ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ರಾಜ್ಯ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್, ಮುಖಂಡರಾದ ಎಸ್.ದತ್ತಾತ್ರಿ, ಆರ್.ಕೆ.ಸಿದ್ದರಾಮಣ್ಣ, ಗಿರೀಶ್ ಪಟೇಲ್, ಶಿವರಾಜ್, ಕೆ.ಇ.ಕಾಂತೇಶ್, ಎನ್.ಕೆ.ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts