More

    ಭದ್ರಾ ಯೋಜನೆ ಬಗ್ಗೆ ಸಿಎಂ ಜತೆ ಚರ್ಚೆ: ತರಳಬಾಳು ಸ್ವಾಮೀಜಿ ಭರವಸೆ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಭೂ ಸ್ವಾಧೀನದ ಅಡೆ ತಡೆ ನಿವಾರಣೆಗೆ ಮುಖ್ಯಮಂತ್ರಿ ಬಳಿ ಮಾತನಾಡುವುದಾಗಿ ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭರವಸೆ ನೀಡಿದರು.

    ಸಿರಿಗೆರೆಯಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಸಮಿತಿ ಪದಾಧಿಕಾರಿಗಳ ಜತೆ ಶ್ರೀಗಳು ಮಾತುಕತೆ ನಡೆಸಿದರು.

    ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ರೈತರು ಅಡ್ಡಿ ಪಡಿಸುತ್ತಿದ್ದಾರೆ. ಈ ವರ್ಷ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳ ಭರ್ತಿ ಮಾಡಬಹುದಿತ್ತು. ಅದು ಸಾಧ್ಯವಾಗದೆ ಹೋಗಿದೆ ಎಂಬ ಸಂಗತಿಯನ್ನು ಸ್ವಾಮೀಜಿ ಗಮನಕ್ಕೆ ತರಲಾಯಿತು.

    ಭದ್ರಾ ಮೇಲ್ದಂಡೆಯಡಿ ಕಾತ್ರಾಳು, ಯಳಗೋಡು, ಮುದ್ದಾಪುರ, ಸುಲ್ತಾನಿಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಡಕವಾಗಿದೆ. ಚಿತ್ರದುರ್ಗ ಬ್ರಾಂಚ್ ಕಾಲುವೆ ಹಾಯ್ಕಲ್‌ನಿಂದ ಕೊಳವೆ ಮಾರ್ಗದ ಮೂಲಕ ಈ ಕೆರೆಗಳ ಅರ್ಧದಷ್ಟು ತುಂಬಿಸಲಾಗುತ್ತಿದೆ. ಆದರೆ, ಇದಕ್ಕೂ ಮೊದಲು ತಾವು ತುಂಗಭದ್ರಾದಿಂದ ಈ ಕೆರೆಗಳಿಗೆ ನೀರು ತರಲು ಮುಂದಾಗಿರುವುದು ಜಿಲ್ಲೆಯ ಜನ ಸಂತಸ ಪಟ್ಟಿದ್ದಾರೆ. ತಮ್ಮ ಜಲ ತಪಸ್ವಿ ನಿಲುವುಗಳಿಗೆ ವ್ಯಾಪಕ ಜನಮನ್ನಣೆ ಪ್ರಾಪ್ತವಾಗಿದೆ ಎಂದು ಸಮಿತಿ ಪದಾಧಿಕಾರಿಗಳು ಹೇಳಿದರು.

    ಪ್ರತಿಕ್ರಿಯಿಸಿದ ಸ್ವಾಮೀಜಿ, ತುಂಗಭದ್ರಾದಿಂದ ಈಗಾಗಲೇ ಭರಮಸಾಗರ ಕೆರೆಗೆ ನೀರು ತರಲಾಗಿದೆ. ಅಲ್ಲಿಂದ ಕಾತ್ರಾಳು ಸೇರಿ ಇತರೆ ಕೆರೆಗಳಿಗೆ ಹರಿಸಲಾಗುತ್ತದೆ. ಸಿರಿಗೆರೆ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಕೊಳವೆ ಮಾರ್ಗ ಹೋಗಬೇಕಾಗಿದೆ. ಅಲ್ಲದೆ ಪೆಟ್ರೋಲ್ ಬಂಕ್ ಬಳಿ ಕೊಳವೆ ಮಾರ್ಗ ಹೋಗಲು ಒಂದಿಷ್ಟು ತಕರಾರು ಬಂದಿವೆ. ಇದನ್ನು ಮಾತುಕತೆ ಮೂಲಕ ಬಗೆ ಹರಿಸುತ್ತಿದ್ದೇವೆ. ಈ ಅಡ್ಡಿಗಳು ನಿವಾರಣೆಯಾದಲ್ಲಿ ಕಾತ್ರಾಳು ಕೆರೆಗೆ ಸರಾಗವಾಗಿ ನೀರು ಹರಿಯಲಿದೆ. ವಿದ್ಯುತ್ ಸಮಸ್ಯೆ ಬಗೆ ಹರಿದಿದೆ ಎಂದರು.
    ಭದ್ರಾ ಮೇಲ್ದಂಡೆಗೆ ದಾವಣಗೆರೆ ಮಂದಿ ಆಕ್ಷೇಪಿಸುತ್ತಿರುವುದು ಸರಿಯಾದುದಲ್ಲ. ನೀರಿನ ವಿಚಾರದಲ್ಲಿ ಎಲ್ಲ ರೈತರೂ ಒಂದೇ. ಭದ್ರಾ ತುಂಬಿ ನೀರು ಹೊರ ಹೋಗುತ್ತಿದೆಯಲ್ಲ ಎಂದು ಸ್ವಾಮೀಜಿ ತಿಳಿಸಿದರು.

    ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಉಪಾಧ್ಯಕ್ಷರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಧನಂಜಯ, ಸಮಿತಿ ಜಿ.ಬಿ.ಶೇಖರ್, ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts