More

    ಹೈಟೆಕ್ ಕಣ್ಣುಗಳಿವೆ ಹುಷಾರ್!

    ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಡಿ ವಾಹನಗಳ ಮೇಲೆ ದಂಡವಿದ್ದರೆ, ಈಗಲೇ ಕಟ್ಟಿಬಿಡುವುದು ಲೇಸು. ಇಲ್ಲವಾದರೆ ನೀವು ಆ ವಾಹನ ಮಾರಾಟ ಮಾಡುವುದೂ ಕಷ್ಟವಾಗಲಿದೆ. ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ಮೇಲೆ ಇನ್ಮುಂದೆ ಸಿಸಿ ಕ್ಯಾಮರಾ ಕಣ್ಗಾವಲಿರಲಿದೆ. ಪೊಲೀಸ್, ಸಾರಿಗೆ ಇಲಾಖೆ ಹಾಗೂ ಇನ್ಶೂರೆನ್ಸ್ ಕಂಪನಿಗಳ ನಡುವೆ ಒಡಂಬಡಿಕೆ ಆಗಿದೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ಪೊಲೀಸರ ಜತೆಗೆ ಆರ್​ಟಿಒ ಅಧಿಕಾರಿಗಳೂ ಪರಿಶೀಲಿಸಲಿದ್ದಾರೆ. ಪ್ರತಿ ವರ್ಷ ಇನ್ಶೂರೆನ್ಸ್ ತುಂಬಲು ಹೋದಾಗ ಪಾವತಿಸದೆ ಇರುವ ದಂಡದ ಮೊತ್ತವನ್ನು ಇನ್ಶೂರೆನ್ಸ್ ಕಂಪನಿಯೇ ಮಾಲೀಕರಿಗೆ ತಿಳಿಹೇಳಿ, ಕಟ್ಟುವಂತೆ ಸೂಚಿಸಲಿದೆ. ಕಟ್ಟದೆ ಹೋದರೆ ಆ ವಾಹನವನ್ನು ಯಾರೂ ಖರೀದಿ ಮಾಡುವುದಿಲ್ಲ.

    ಕಮಿಷನರೇಟ್ ವ್ಯಾಪ್ತಿಯಲ್ಲಿ ಸದ್ಯ 164 ಸಿಸಿ ಕ್ಯಾಮರಾಗಳಿವೆ. ಈಗ ಹೈ ರೆಸ್ಯೂಲೇಷನ್ ಹೊಂದಿರುವ 100 ಸಿಸಿ ಕ್ಯಾಮರಾಗಳನ್ನು ಸೂಕ್ಷ್ಮ ಪ್ರದೇಶ ಸೇರಿ ಇತರೆಡೆ ಅಳವಡಿಸಲಾಗುತ್ತಿದೆ. ಮಾರ್ಚ್ ಒಳಗಾಗಿ ಅಳವಡಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇವು ಅಂತಿಂಥ ಕ್ಯಾಮರಾ ಅಲ್ಲ. ಹೆಲ್ಮೆಟ್ ಧರಿಸದಿದ್ದರೆ ವಾಹನ ಸವಾರರ ಮುಖಚರ್ಯು ಹಾಗೂ ವಾಹನ ಸಂಖ್ಯೆಗಳನ್ನೂ ಗುರುತಿಸಬಲ್ಲವು. ಬಹಳಷ್ಟು ದೂರವಿದ್ದರೂ ಪತ್ತೆ ಹಚ್ಚಬಹುದು. ಗುರುತಿಸಿದ ತರುವಾಯ ವಾಹನಗಳ ಮಾಲೀಕರ ಮನೆಗೆ ಸೀದಾ ನೋಟಿಸ್ ತಲುಪಲಿದೆ. ಇದಕ್ಕೆ ಅವರು ದಂಡವನ್ನು ಪಾವತಿಸಲೇಬೇಕು. ಇಲ್ಲವಾದರೆ ಆ ವಾಹನಗಳು ಗುಜರಿ ಸೇರುವುದು ಗ್ಯಾರಂಟಿ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

    ಕಾದಿದೆ ಸಂಕಷ್ಟ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಕೊಲೆ, ಸುಲಿಗೆ, ಕಳ್ಳತನ, ಚಾಕು ಇರಿತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಪ್ರಕರಣಕ್ಕೆ ಕಾರಣರಾದವರನ್ನು ಪತ್ತೆ ಮಾಡಲು, ಸಾಕ್ಷ್ಯ ಸಂಗ್ರಹ ಕಷ್ಟವೇನಲ್ಲ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಲಿದ್ದಾರೆ. ಬರೀ ಸಂಚಾರ ನಿಯಮವಷ್ಟೇ ಅಲ್ಲ, ಇತರ ಕುಕೃತ್ಯ ಎಸಗಿದವರ ಬಂಧನವೂ ಸುಲಭವಾಗಲಿದೆ.

    ಹು- ಧಾ ಅವಳಿನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಮಾರ್ಚ್ ಒಳಗೆ ಈ ಪ್ರಕ್ರಿಯೆ ಮುಗಿಯಲಿದೆ. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದರೆ ಅವರ ಮನೆಗೆ ನೋಟಿಸ್ ಕಳುಹಿಸಲಾಗುವುದು. ಅವರು ಭರಣ ಮಾಡದಿದ್ದರೆ ಆರ್​ಟಿಒ ಮತ್ತು ಇನ್ಶೂರೆನ್ಸ್ ಕಂಪನಿಯವರಿಗೂ ಗೊತ್ತಾಗುತ್ತದೆ. ಆಗಲಾದರೂ ದಂಡ ಪಾವತಿಸಬೇಕು. ಇಲ್ಲವಾದರೆ ದಂಡ ಪಾವತಿಯಾಗದ ವಾಹನಗಳನ್ನು ಯಾರೂ ಖರೀದಿ ಮಾಡುವುದಿಲ್ಲ.

    | ಡಾ. ಗೋಪಾಲ ಬ್ಯಾಕೋಡ

    ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts