More

    ಇನ್ನು ನೀವೂ ಬೆಸ್ಕಾಂಗೆ ವಿದ್ಯುತ್​ ಮಾರಬಹುದು; ಮಾಡಬೇಕಾದದ್ದು ಇಷ್ಟೇ…

    ಬೆಂಗಳೂರು: ಅನೇಕರಲ್ಲಿ ನಾವೇ ಯಾಕೆ ವಿದ್ಯುತ್​ ಪೂರೈಕೆ ಮಾಡುವ ಘಟಕಗಳಿಗೆ ಕರೆಂಟ್​ ಮಾರಬಾರದು ಎಂದು ಈ ಹಿಂದೆ ಅನಿಸಿರಬಹುದು. ಆದರೆ ವಿದ್ಯುತ್​ ಉತ್ಪಾದನೆ ಮಾಡಿ ಮಾರಬೇಕು ಎಂದರೆ ಹಿಂದೆ ಸಾಕಷ್ಟು ಶ್ರಮ ಪಡಬೇಕಿತ್ತು. ಇನ್ನು ಮನೆಯಲ್ಲಿ ಸುಮ್ಮನೆ ಕೂತು ಜನರು ವಿದ್ಯುತ್​ ಮಾರಿ ಹಣ ಸಂಪಾದಿಸಬಹುದು.

    ನವೀಕರಿಸಬಹುದಾದ ಇಂಧನದ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ‘ಸೋಲಾರ ರೂಫ್‌ ಟಾಪ್ ಹಂತ-02’ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಗೆ ಬೆಸ್ಕಾಂನಲ್ಲಿ ಚಾಲನೆ ಸಿಕ್ಕಿದೆ. ಇನ್ನು ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಸೋಲಾರ್‌ ಪ್ಯಾನಲ್​ ಅಳವಡಿಸಿ ಹೆಚ್ಚುವರಿ ವಿದ್ಯುತ್​ಅನ್ನು ಬೆಸ್ಕಾಂಗೆ ಮಾರಬಹುದು.

    ಸದ್ಯ ಈ ಹೊಸ ಯೋಜನೆಯ ಅಡಿಯಲ್ಲಿ ಸೋಲಾರ್‌ ಪ್ಯಾನಲ್​ ಅಳವಡಿಸಿಕೊಳ್ಳಲು ಬೆಸ್ಕಾಂಗೆ 1500 ಅರ್ಜಿಗಳು ಸಲ್ಲಿಕೆಯಾಗಿವೆ. ‘ಸೌರ ಗೃಹ’ ಹೆಸರಿನಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.

    ಗ್ರಾಹಕರು ಪಡೆದಿರುವ ವಿದ್ಯುತ್‌ ಸಾಮರ್ಥ್ಯಕ್ಕೆ ಅನುಗುಣವಾಗಿ ಸೋಲಾರ್‌ ಘಟಕಗಳನ್ನು ಅಳವಡಿಸಲಾಗುತ್ತೆ. ಸೌರ ವಿದ್ಯುತ್‌ ಬಳಸಿಕೊಂಡು ಉಳಿದ ಹೆಚ್ಚುವರಿ ವಿದ್ಯುತ್‌ಅನ್ನು ಗ್ರಿಡ್‌ಗೆ ಮಾರಾಟ ಮಾಡಿ ಹಣಗಳಿಸಬಹುದು. ಇದಕ್ಕಾಗಿ ನೆಟ್‌ ಮೀಟರ್‌ ಅನ್ನು ಗ್ರಾಹಕರು ಅಳವಡಿಸಿಕೊಳ್ಳಬೇಕಾಗುತ್ತದೆ.

    ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಇತ್ತೀಚೆಗೆ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಯೋಜನೆಯನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ಕಾರ್ಯರೂಪಕ್ಕೆ ತರಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸೌರ ಗೃಹ ಯೋಜನೆಯ ಉಪಯೋಗ ಪಡೆಯುವ ಗ್ರಾಹಕರಿಗೆ ಗರಿಷ್ಟ 3 ಕಿ.ವ್ಯಾ. ಸಾಮರ್ಥ್ಯದ ಸೋಲಾರ ಘಟಕಗಳಿಗೆ ಶೇ. 40 ರಷ್ಟು ಸಹಾಯಧನ, 3 ಕಿ.ವ್ಯಾ ಸಾಮಾರ್ಥ್ಯಕ್ಕಿಂತ ಹೆಚ್ಚು ಮತ್ತು 10 ಕಿ. ವ್ಯಾ ಸಾಮಾರ್ಥ್ಯದವರೆಗಿನ ಸೋಲಾರ ಘಟಕಗಳಿಗೆ ಶೇ. 40 ಜತೆಗೆ ಶೇ.20 ರಷ್ಟು ಹೆಚ್ಚುವರಿ ಸಹಾಯಧನವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

    ವಸತಿ ಸಮುಚ್ಛಯಗಳ ಮೇಲ್ಛಾವಣಿಗಳ ಸಾಮಾನ್ಯ (ಕಾಮನ್‌ ಏರಿಯಾ ಮಾತ್ರ) ಸೌಲಭ್ಯಗಳಾದ ಲಿಫ್ಟ್‌, ಮೋಟರ್‌ ಮತ್ತು ಲೈಟ್‌ಗಳಿಗೆ ಸೋಲಾರ ಘಟಕಗಳ ಸ್ಥಾಪನೆಯ ಸಾಮಾರ್ಥ್ಯವನ್ನು ಗರಿಷ್ಟ 500 ಕಿ.ವ್ಯಾಟ್​ಗೆ ಸೀಮಿತಗೊಳಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೆಸ್ಕಾಂನಲ್ಲಿ ನೋಂದಣಿಗೊಂಡಿರುವ ಏಜೆನ್ಸಿಗಳ ಮೂಲಕವೂ ಜನರು ಸೋಲಾರ್‌ ಪ್ಯಾನೆಲ್‌ ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ಸೋಲಾರ್‌ ಪ್ಯಾನಲ್​ಗಳನ್ನು ಅಳವಡಿಸಿ 5 ವರ್ಷಗಳ ಕಾಲ ಏಜೆನ್ಸಿಗಳೇ ಅವುಗಳ ನಿರ್ವಹಣೆ ಮಾಡಬೇಕು.

    ಇಲಾಖೆ ಅಭಿವೃದ್ದಿ ಪಡಿಸಿರುವ ವೆಬ್ ಪೋರ್ಟಲ್ https://solarrooftop.gov.in ಮುಖಾಂತರ ಗ್ರಾಹಕರು ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದ ವೆಬ್‌ ಸೈಟ್‌ ಮೂಲಕ ಅರ್ಜಿ ಸಲ್ಲಿಸಿದರೆ, ಯೋಜನೆ ಅನುಷ್ಠಾನ ಇನ್ನಷ್ಟು ಸರಳ. ಹಾಗೆಯೇ ಬೆಸ್ಕಾಂನಲ್ಲಿ ನೋಂದಣಿಗೊಂಡಿರುವ ಏಜೆನ್ಸಿಗಳ ಮೂಲಕ ಸೋಲಾರ್‌ ಫಲಕಗಳನ್ನು ಅಳವಡಿಸಿಕೊಳ್ಳಲು https://bescom.karnataka.gov.in/ ಮೂಲಕ ಗ್ರಾಹಕರು ಅರ್ಜಿ ಸಲ್ಲಿಸಬಹುದು.

    ಬೆಸ್ಕಾಂ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿ ಸೋಲಾರ್‌ ಪ್ಯಾನಲ್‌ ಗಳನ್ನು ನೆಟ್‌ ಮೀಟರ್‌ ಅಡಿಯಲ್ಲಿ ಅಳವಡಿಸಿಕೊಂಡರೆ, ಕೇಂದ್ರ ಸರ್ಕಾರದಿಂದ ಬರುವ ಸಹಾಯಧನವನ್ನು ಬೆಸ್ಕಾಂ ನೇರವಾಗಿ ಸೋಲಾರ್‌ ಘಟಕ ಅಳವಡಿಸಿದ ಏಜೆನ್ಸಿಗೆ ಪಾವತಿಸುತ್ತದೆ, ಗ್ರಾಹಕರು ಸಹಾಯಧನ ಮೊತ್ತವನ್ನು ಬಿಟ್ಟು, ಉಳಿದ ಹಣವನ್ನು ಸಂಬಂಧಿಸಿದ ಏಜೆನ್ಸಿಗಳಿಗೆ ಪಾವತಿಸಬೇಕು ಎಂದು ಮಹಾಂತೇಶ ಬೀಳಗಿ ವಿವರಿಸಿದರು.

    ವೆಬ್ ಪೋರ್ಟಲ್‌ ಮೂಲಕ ಗ್ರಾಹಕರಿಗೆ ಸೋಲಾರ್ ಮೇಲ್ಛಾವಣಿ ಘಟಕಗಳನ್ನು ಅಳವಡಿಸಲು ಬೆಸ್ಕಾಂನಲ್ಲಿ ನೊಂದಣಿ ಆಗಿರುವ ಏಜೆನ್ಸಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

    ನೋಂದಾಯಿತ ಏಜೆನ್ಸಿಗಳು ಫಲಾನುಭವಿಗಳ ಸೋಲಾರ್‌ ಪ್ಯಾನಲ್‌ ಸಾಮರ್ಥ್ಯವನ್ನು ನಿರ್ಣಯಿಸಲು ಸ್ಥಳ ಸಮೀಕ್ಷೆಯನ್ನು ಮಾಡಿ ಸೋಲಾರ ಘಟಕಗಳ ಸಾಮಾರ್ಥ್ಯವನ್ನು ನಿಗದಿಪಡಿಸುತ್ತಾರೆ. ಫಲಾನುಭವಿಗಳ ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಬಹುದಾದ ಸೋಲಾರ್‌ ಪ್ಯಾನಲ್‌ ಸಾಮರ್ಥ್ಯದ ಕುರಿತು ಗ್ರಾಹಕರಿಗೆ (ಫಲಾನುಭವಿಗೆ) ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ಹಾಗೆಯೆ ಯೋಜನೆಯನ್ನು ಪಡೆಯಲು ಬೇಕಾಗುವ ಅಗತ್ಯ ಅನುಮೋದನೆ, ನೆಟ್-ಮೀಟರ್ ಅಳವಡಿಕೆ ಮತ್ತು ಬೆಸ್ಕಾಂ ಅಧಿಕಾರಿಗಳಿಂದ ತಪಾಸಣೆ ನಡೆಸಲು ಸಹಾಯ ಮಾಡತ್ತಾರೆ.

    ಯಾವುದೇ ಏಜೆನ್ಸಿಯ ಪ್ರತಿನಿಧಿಗಳು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಒದಗಿಸಿದರೆ ಅಥವಾ ಪೋರ್ಟಲ್‌ ನಲ್ಲಿ ಉಲ್ಲೇಖಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಬ್ಯಾಂಕ್‌ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts