More

    ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಿಲ್ಲ ದುರಸ್ತಿ ಭಾಗ್ಯ-ಶಿಥಿಲ ಕಟ್ಟಡದಲ್ಲೇ ಕಾರ್ಯನಿರ್ವಹಣೆ

    ಯಲಬುರ್ಗಾ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಛಾವಣಿಯ ಸಿಮೆಂಟ್ ಉದುರುವುದು, ಮಳೆಗಾಲದಲ್ಲಿ ನೀರು ಜಿನುಗುವಿಕೆಯಿಂದ ಕಡತ, ದಾಖಲೆಗಳ ರಕ್ಷಣೆ ಸವಾಲಾಗಿದ್ದು, ಶಿಥಿಲ ಕಟ್ಟಡದಲ್ಲಿ ಸಿಬ್ಬಂದಿ ಛತ್ರಿ ಹಿಡಿದುಕೊಂಡು ಕಾರ್ಯನಿರ್ವಹಿಸುವಂತಾಗಿದೆ.

    ಇದನ್ನೂ ಓದಿ: ಭಾರತದ ಕೋರ್ಟ್​ಗಳು ಶಿಥಿಲ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿವೆ: ಸಿಜೆಐ ಅಸಮಾಧಾನ

    ಐವತ್ತು ವರ್ಷಕ್ಕೂ ಹಳೆಯ ಕಟ್ಟಡದ ಛಾವಣಿ ಸಿಮೆಂಟ್ ಉದುರಿ ಕಬ್ಬಿಣದ ರಾಡುಗಳು ಹೊರಚಾಚಿವೆ. ಕಚೇರಿ ಸಂಪೂರ್ಣ ಶಿಥಿಲಗೊಂಡಿದ್ದು, ಸಿಬ್ಬಂದಿ ಕೆಲಸದಲ್ಲಿ ತೊಡಗಿದ್ದಾಗ ಛಾವಣಿ ಸಿಮೆಂಟ್ ಕಿತ್ತು ಮೈಮೇಲೆ ಉದುರುತ್ತಿದೆ.

    ಮಳೆ ಬಂದರೆ ಛತ್ರಿ ಹಿಡಿದು ಕಾರ್ಯನಿರ್ವಹಿಸಬೇಕಾಗಿದೆ. ಕಂಪ್ಯೂಟರ್, ಝೆರಾಕ್ಸ್ ಯಂತ್ರ ಹಾಳಾಗುತ್ತಿವೆ. ದಾಖಲೆಗಳನ್ನು ಎಲ್ಲೆಂದರಲ್ಲಿ ಸಂಗ್ರಹಿಸಿ ಇಡಲಾಗಿದ್ದು, ಅವುಗಳ ರಕ್ಷಣೆ ಸವಾಲಾಗಿದ್ದು, ಭಯದ ವಾತಾವರಣದಲ್ಲಿ ಸಿಬ್ಬಂದಿ ಕೆಲಸ ಮಾಡುವಂತಾಗಿದೆ.

    ಭೀತಿಯಲ್ಲೇ ಸಿಬ್ಬಂದಿ ಕೆಲಸ

    ಮಳೆಗಾಲದಲ್ಲಿ ಕಚೇರಿ ಛಾವಣಿ ಸೋರುತ್ತದೆ. ಇದರಿಂದ ಸಿಬ್ಬಂದಿ ಅಂಗೈಯಲ್ಲಿ ಜೀವ ಹಿಡಿದು ಕೆಲಸ ಮಾಡಬೇಕಾಗಿದೆ. ಸಾರ್ವಜನಿಕರು ತಮ್ಮ ಕೆಲಸಕ್ಕೆ ಕಚೇರಿಗೆ ಬರಲು ಹೆದರುತ್ತಿದ್ದಾರೆ. ಶಿಥಿಲ ಕಟ್ಟಡದಲ್ಲಿ ಕೆಲಸ ನಡೆಯುತ್ತಿದ್ದು, ದುರಸ್ತಿ ಭಾಗ್ಯ ಮಾತ್ರ ಸಿಗುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಿಸಿದವರು ಶೀಘ್ರವೇ ಶಿಥಿಲ ಕಟ್ಟಡ ದುರಸ್ತಿಗೆ ಮುಂದಾಗಬೇಕೆಂದು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.

    ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಶಿಥಿಲಗೊಂಡಿದೆ. ದುರಸ್ತಿಗಾಗಿ ಡಿಡಿಪಿಐಗೆ ಪತ್ರ ಬರೆಯಲಾಗಿದ್ದು, ಅಂದಾಜು ಮೂರು ಕೋಟಿ ರೂ. ಅನುದಾನದ ಬೇಡಿಕೆ ಸಲ್ಲಿಸಲಾಗಿದೆ. ಹಣ ಬಿಡುಗಡೆ ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
    | ಪದ್ಮನಾಭ ಕರ್ಣಂ, ಬಿಇಒ ಯಲಬುರ್ಗಾ

    ಕ್ಷೇತ್ರ ಶಿಕ್ಷಣಾಧಿಕಾರಿ ನೂತನ ಕಚೇರಿ ನಿರ್ಮಾಣಕ್ಕಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಾಸಕ ಬಸವರಾಜ ರಾಯರಡ್ಡಿ ಅವಹನೆಗೂ ತರಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
    | ಸಿದ್ದಲಿಂಗಪ್ಪ ಶ್ಯಾಗೋಟಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ, ಯಲಬುರ್ಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts