More

    ಪತಿ ದುಬೈನಲ್ಲಿದ್ದಾನೆ ಮನೆಗೆ ಬಾ… ಮಹಿಳೆಯ ಮಾತು ನಂಬಿ ಹೋದ ಯುವಕನಿಗೆ ಕಾದಿತ್ತು ಬಿಗ್​ ಶಾಕ್​

    ಬೆಂಗಳೂರು: ‘ಕೆಲಸದ ನಿಮಿತ್ತ ಪತಿ ದುಬೈಗೆ ಹೋಗಿದ್ದು, ಏಕಾಂತದಲ್ಲಿ ಇರಲು ಸಂಗಾತಿಯನ್ನು ಹುಡುಕುತ್ತಿದ್ದೇನೆ’ ಎಂದು ಹೇಳಿ ಯುವಕನನ್ನು ಮನೆಗೆ ಕರೆಸಿಕೊಂಡ ಮಹಿಳೆ, ತನ್ನ ಸಹಚರರೊಂದಿಗೆ ಸೇರಿ ಸುಲಿಗೆ ಮಾಡಿದ್ದಾಳೆ.

    ಈ ಕುರಿತು ವೈಟ್​ಫೀಲ್ಡ್ ಇಮ್ಮಡಿಹಳ್ಳಿಯ 27 ವರ್ಷದ ಯುವಕ, ಪುಟ್ಟೇನಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಮೆಹರ್ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಯುವಕನ ಟೆಲಿಗ್ರಾಮ್​ನಲ್ಲಿ ಅಪರಿಚಿತ ಮಹಿಳೆ ಚಾಟಿಂಗ್ ಶುರು ಮಾಡಿದ್ದಳು. ಅದಕ್ಕೆ ಯುವಕ ಪ್ರತಿಕ್ರಿಯಿಸಿದಾಗ, ಮೆಹರ್ ಎಂದು ಪರಿಚಯ ಮಾಡಿಕೊಂಡಿದ್ದಳು. ಗಂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಪರ ಪುರುಷನೊಂದಿಗೆ ಏಕಾಂತದಲ್ಲಿ ಇರಲು ಸಂಗಾತಿಯ ಹುಡುಕಾಟ ನಡೆಸುತ್ತಿದ್ದೇನೆ ಎಂದು ಹೇಳಿ ಅರೆನಗ್ನ ಫೋಟೋ ಮತ್ತು ಲೊಕೇಷನ್ ಕಳುಹಿಸಿ, ಆಹ್ವಾನಿಸಿದ್ದಳು. ಇದನ್ನು ನಂಬಿದ ಯುವಕ, ಮಾ.3ರ ಮಧ್ಯಾಹ್ನ 3.30ರಲ್ಲಿ ಮಹಿಳೆ ಕಳುಹಿಸಿದ್ದ ಲೊಕೇಷನ್ ಜಾಡು ಹಿಡಿದು ಜೆ.ಪಿ. ನಗರ 5ನೇ ಹಂತ ಅಮಿನಾ ಮಂಜಿಲ್ ಎಂಬ ಬಿಲ್ಡಿಂಗ್​ಗೆ ಬಂದಿದ್ದ.

    ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಗಂಭೀರ ಆರೋಪ ಮಾಡಿದ ಮಿಸ್​ ಬಿಕಿನಿ ಗರ್ಲ್!

    2ನೇ ಮಹಡಿಯಲ್ಲಿ ನೆಲೆಸಿದ್ದ ಮಹಿಳೆ ಮನೆಗೆ ಹೋಗಿ ಬೆಡ್ ರೂಮ್​ನಲ್ಲಿ ಕುಳಿತಿದ್ದ. ಅಷ್ಟರಲ್ಲಿ ಮೂವರು ಅಪರಿಚಿತರು ಏಕಾಏಕಿ ಒಳನುಗ್ಗಿ ಮೊಬೈಲ್​ನಲ್ಲಿ ಬೆತ್ತಲೆ ಫೋಟೋ ಸೆರೆ ಹಿಡಿದುಕೊಂಡು ತಂದೆ-ತಾಯಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದರು. ‘ಮಸೀದಿಗೆ ಕರೆದೊಯ್ದು ಮುಂಜಿ ಮಾಡಿ ಮಹಿಳೆಯೊಂದಿಗೆ ಮದುವೆ ಮಾಡುತ್ತೇವೆ. ಇಲ್ಲಿಂದ ಹೋಗಬೇಕಾದರೆ 3 ಲಕ್ಷ ರೂ. ಕೊಡು’ ಎಂದು ಬೆದರಿಸಿದ್ದರು. ಅಲ್ಲದೆ, ಯುವಕನ ಮೊಬೈಲ್ ಕಸಿದುಕೊಂಡು ಆತನ ಫೋನ್​ಪೇನಲ್ಲಿ 21,500 ರೂ.ಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ಉಳಿಕೆ ಹಣವನ್ನು ಕೊಡುವಂತೆ ಕೂಡಿಹಾಕಿ ಹಲ್ಲೆ ನಡೆಸಿದ್ದರು. ಕೊನೆಗೆ ಕ್ರೆಡಿಟ್ ಕಾರ್ಡ್ ಇದ್ದರೆ ಕೊಡುವಂತೆ ಒತ್ತಾಯಿಸಿದ್ದರು. ಮನೆಯಲ್ಲಿ ಇರುವುದಾಗಿ ಹೇಳಿದಾಗ ಯುವಕನನ್ನು ಆತನ ಮನೆಗೆ ಕರೆದುಕೊಂಡು ಹೋಗಲು ಹೊರಗೆ ಬಂದಿದ್ದರು. ಆಗ ಯುವಕ, ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಆರ್ಕಿಟೆಕ್ಟ್ ಮನೆ ದೋಚಿದ ಕೆಲಸದಾಳುಗಳು
    ಬೆಂಗಳೂರು: ಇಂಟೀರಿಯರ್ ಆರ್ಕಿಟೆಕ್ಟ್ ಮನೆಯಲ್ಲಿ ಮನೆ ಕೆಲಸದ ನೆಪದಲ್ಲಿ ಸೇರಿಕೊಂಡ ದಂಪತಿ, ಮಾಲೀಕರಿಗೆ ಯಾಮಾರಿಸಿ ಎರಡು ಕೆ.ಜಿ. ಚಿನ್ನಾಭರಣ ಮತ್ತು ಒಂದು ಪಿಸ್ತೂಲ್ ದೋಚಿದ್ದಾರೆ.

    ಜೆ.ಪಿ. ನಗರದ ಇಂಟೀರಿಯರ್ ಆರ್ಕಿಟೆಕ್ಟ್ ಮನೆಯಲ್ಲಿ ಕಳ್ಳತನ ನಡೆದಿದೆ. ಜೆ.ಪಿ. ನಗರ ಪೊಲೀಸರು ಆರೋಪಿಗಳಾದ ಲಕ್ಷ್ಮೀ ಸೆಜುವಲ್ ಮತ್ತು ಆಕೆ ಪತಿ ಪ್ರೇಮ್ ವಿರುದ್ಧ ಎಫ್​ಐಆರ್ ದಾಖಲಿಸಿ ಬಂಧನಕ್ಕೆ ಬಲೆಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತಂದೆ- ತಾಯಿ, ಪತ್ನಿ, ಸಹೋದರನ ಜತೆ ಆರ್ಕಿಟೆಕ್ಟ್ ನೆಲೆಸಿದ್ದಾರೆ. ಎರಡು ತಿಂಗಳ ಹಿಂದೆ ಆರೋಪಿತ ದಂಪತಿ ಕೆಲಸಕ್ಕೆ ಸೇರಿದ್ದರು. ಮನೆ ಕೆಲಸಕ್ಕೆ ಲಕ್ಷ್ಮೀ ಹಾಗೂ ಸೆಕ್ಯೂರಿಟಿ ಗಾರ್ಡ್ ಆಗಿ ಪ್ರೇಮ್ ಬಂದಿದ್ದ. ಕೆಲ ದಿನಗಳ ಹಿಂದೆ ಆರ್ಕಿಟೆಕ್ಟ್ ಮನೆಯಲ್ಲಿ ಎಲ್ಲರೂ ತಿರುಪತಿಗೆ ಹೋಗಿದ್ದರು. ಆದರೆ, ಅನಾರೋಗ್ಯ ಕಾರಣ ಆರ್ಕಿಟೆಕ್ಟ್ ಹೋಗಿರಲಿಲ್ಲ. ತಡರಾತ್ರಿ ಹಸಿವಾದ ಕಾರಣಕ್ಕೆ ತಾಯಿಯ ರೂಮ್ಲ್ಲಿದ್ದ ತಿನಿಸು ತರಲು ಹೋಗಿದ್ದರು. ಬೆಡ್ ರೂಮ್ಲ್ಲಿ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿ ಆಗಿದ್ದವು. ಲಾಕರ್​ನಲ್ಲಿ ಇದ್ದ 1 ಕೆ.ಜಿ. 900 ಗ್ರಾಂ ಚಿನ್ನಾಭರಣ ಮತ್ತು ಪಿಸ್ತೂಲ್ ಕಳವಾಗಿತ್ತು. ಕೆಲಸದಾಳುಗಳನ್ನು ನೋಡಿದಾಗ ನಾಪತ್ತೆಯಾಗಿದ್ದರು. ಮೊಬೈಲ್​ಗೆ ಕರೆ ಮಾಡಿದಾಗ ಆಫ್ ಆಗಿತ್ತು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಜೆ.ಪಿ. ನಗರ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಕಾರು ತಡೆದ ಟ್ರಾಫಿಕ್​ ಪೊಲೀಸ್​: ನಡುರಸ್ತೆಯಲ್ಲೇ ಯುವತಿಯಿಂದ ಭಾರೀ ಹೈಡ್ರಾಮ, ವಿಡಿಯೋ ವೈರಲ್​

    ರಕ್ತಚಂದನ ಸಾಗಾಟ ಇಬ್ಬರ ಸೆರೆ
    ಬೆಂಗಳೂರು: ರಕ್ತಚಂದನ ಸಾಗಣೆ ಜಾಲದ ಮೇಲೆ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾರಾಯಿಪಾಳ್ಯದ ಅಶ್ವತ್ಥನಗರದ ಸಾದಕ್ ಖಾನ್ ಮತ್ತು ಆಂಧ್ರದ ಚಿತ್ತೂರಿನ ನರೇಶ್ ಬಂಧಿತರು. 15 ಲಕ್ಷ ರೂ. ಮೌಲ್ಯದ 609 ಕೆ.ಜಿ. ರಕ್ತಚಂದನ ಜಪ್ತಿ ಮಾಡಲಾಗಿದೆ.

    ಆಂಧ್ರಪ್ರದೇಶದ ಚಿತ್ತೂರಿನಿಂದ ನಗರಕ್ಕೆ ಕಾನೂನುಬಾಹಿರವಾಗಿ ರಕ್ತಚಂದನ ಸಾಗಣೆೆಯಾಗಿದೆ ಎಂಬ ಮಾಹಿತಿ ಅರಣ್ಯ ಸಂಚಾರ ದಳಕ್ಕೆ ಮಾಹಿತಿ ಲಭಿಸಿತ್ತು. ಈ ಸುಳಿವು ಆಧರಿಸಿ ಎಡಿಜಿಪಿ ಕೆ.ವಿ. ಶರತ್​ಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ ಅಶ್ವತ್ಥನಗರದ ಅಫ್ಜಲ್ ಲೇಔಟ್​ನ 1ನೇ ಹಂತದ ಸಾದಕ್ ಖಾನ್​ಗೆ ಸೇರಿದ ಪೀಠೋಪಕರಣ ತಯಾರಿಕೆ ಮಳಿಗೆ ಮೇಲೆ ದಾಳಿ ನಡೆಸಿ ರಕ್ತಚಂದನ ಜಪ್ತಿ ಮಾಡಿದ್ದಾರೆ. ಆರೋಪಿಗಳು ಆಂಧ್ರದಲ್ಲಿ ಲಭ್ಯವಿದ್ದ ರಕ್ತಚಂದನವನ್ನು ಬೆಂಗಳೂರಿಗೆ ಸಾಗಿಸಿ, ಬೇರೆಡೆಗೆ ವಿಲೇವಾರಿಗೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ನಿಮ್ಮ ಕಣ್ಣಿಗೊಂದು ಸವಾಲು: ಸಾಧ್ಯವಾದ್ರೆ ಈ ಫೋಟೋದಲ್ಲಿರೋ ನೀರಿನ ಬಾಟಲ್​ ಗುರುತಿಸಿ

    ಕಬಡ್ಡಿ ಆಡುವಾಗ ಹೃದಯಾಘಾತ: ಸ್ನೇಹಿತರ ಎದುರಲ್ಲೇ ಕುಸಿದು ಬಿದ್ದು ದುರಂತ ಅಂತ್ಯ ಕಂಡ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts