More

    ಎತ್ತರದ ಗೋಡೆಗಳನ್ನು ಚಕಚಕನೆ ಹತ್ತಿ ಕಳವು ಮಾಡುತ್ತಿವರು ಅಂದರ್​, ಇವರು ಸಿಕ್ಕಿಬೀಳಲು ನಟ ಶಿವರಾಜ್​ಕುಮಾರ್​ ಕಾರಣ!

    ಬೆಂಗಳೂರು: ಎತ್ತರದ ಗೋಡೆಗಳನ್ನು ಚಕಚಕನೆ ಹತ್ತಿ, ಇಳಿದು, ಅತಿಶ್ರೀಮಂತರ ಮನೆಗಳಿಗೆ ಕನ್ನಹಾಕಿ ಕೇವಲ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗುತ್ತಿದ್ದ ಕೊಲಂಬಿಯಾ ಮೂಲದ ತಂಡವನ್ನು ಕೊತ್ತನೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ವಿಲಿಯಂ ಪಡಿಲ್ಲಾ ಮಾಟಿನೇಜ್​ (48), ಲೇಡಿ ಸ್ಟಿಫಾನಿ ಮುನೋಜ್​ (23) ಮತ್ತು ಕ್ರಿಶ್ಚಿಯನ್​ ಯೀನೀಸ್​ ನವರೊ (34) ಬಂಧಿತರು. ಕೊಲಂಬಿಯಾ ಮೂಲದವರಾದ ಇವರು ಪ್ರವಾಸಿ ವೀಸಾದಡಿ ನೇಪಾಳದ ಮೂಲಕ ಭಾರತಕ್ಕೆ ಬಂದವರು. ದೆಹಲಿ ತಲುಪಿದ ಇವರು ಕನ್ನ ಕಳವು ಮಾಡುವುದರಲ್ಲಿ ನಿಸ್ಸೀಮ ಎನಿಸಿಕೊಂಡು ಭಾರತದಲ್ಲೇ ತಲೆಮರೆಸಿಕೊಂಡು ಓಡಾಡುತ್ತಿರುವ ಗುಸ್ತಾವೋ ಎಂಬಾತನ ಸಂಪರ್ಕಕ್ಕೆ ಬಂದು, ಆತನ ನಿರ್ದೇಶನದ ಮೇರೆಗೆ ಬೆಂಗಳೂರಿಗೆ ಬಂದು ಐಟಿ ಉದ್ಯಮಿಗಳು ಹೆಚ್ಚಾಗಿರುವ ಪ್ರದೇಶದ ಅಪಾರ್ಟ್​ಮೆಂಟ್​ ಬಾಡಿಗೆ ಪಡೆದುಕೊಂಡು ವಾಸಿಸುತ್ತಿದ್ದರು.

    ಸೈಕಲ್​ನಲ್ಲಿ ಹೋಗಿ ನಿರ್ಜನ ಪ್ರದೇಶಗಳು ಸೇರಿ ಹಲವು ಪ್ರದೇಶಗಳಲ್ಲಿರುವ ಐಟಿ ಉದ್ಯಮಿಗಳು ಮತ್ತಿತರ ಅತಿಶ್ರೀಮಂತರ ಮನೆಗಳ ಸಮೀಕ್ಷೆ ನಡೆಸುತ್ತಿದ್ದ ಇವರು, ಮನೆ ಮುಂದೆ ಬಿದ್ದಿರುತ್ತಿದ್ದ ದಿನಪತ್ರಿಕೆಗಳನ್ನು ಗಮನಿಸಿ, ಯಾರ ಮನೆ ಹೆಚ್ಚು ಸಮಯದಿಂದ ಬಾಗಿಲು ಹಾಕಿದೆ ಎಂಬುದನ್ನು ಗುರುತಿಸುತ್ತಿದ್ದರು. ಸಂಜೆ 7 ಗಂಟೆಗೆ ಮೋಟಾರ್​ಸೈಕಲ್​ನಲ್ಲಿ ಹೋಗುತ್ತಿದ್ದ ಅವರು, ತಾವು ಗುರುತು ಹಾಕಿಕೊಂಡಿದ್ದ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಬೀಗ ಒಡೆದು ಮನೆಯೊಳಗೆ ನುಗ್ಗುತ್ತಿದ್ದರುಲ ಬಳಿಕ ಮೊಬೈಲ್​ ಜ್ಯಾಮರ್​ ಅಳವಡಿಸಿ, ಡ್ರಿಲ್​ ಬಿಟ್​, ಲೇಸರ್​ ಕಟ್ಟಿಂಗ್​ ಮಶಿನ್​, ರಿಂಗ್​ ಸ್ವಾನರ್​ ರಾಡ್​ಗಳು, ಫ್ಲೇಮ್​ ಗನ್​ ಮತ್ತು ಐರನ್​ ಸಾಲ್ಡರ್​ಗಳನ್ನು ಬಳಸಿ ಬೀರು, ಲಾಕರ್​ಗಳನ್ನು ಒಡೆದು ಅದರಲ್ಲಿರುತ್ತಿದ್ದ ಚಿನ್ನಾಭರಣ ಮತ್ತು ನಗದು ದೋಚುತ್ತಿದ್ದರು. ಲೈಟ್​ ಹಾಕಿದರೆ ಸಿಕ್ಕಿಬೀಳುವ ಹೆದರಿಕೆಗೆ ಹೆಡ್​ಟಾರ್ಚ್​ಗಳನ್ನು ಬಳಸಿ ಕೃತ್ಯ ಎಸಗುತ್ತಿದ್ದರು.

    ಇದನ್ನೂ ಓದಿ: ಮದುವೆಯಾದ ಎರಡೇ ತಿಂಗಳಿಗೆ ಪತ್ನಿ ಕೊಂದ ಪತಿ: ತನಿಖೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ

    ಪಿಪಿಇ ಕಿಟ್​ ಮಾದರಿಯ ಕಿಟ್​ಗಳನ್ನು ಧರಿಸುತ್ತಿದ್ದರು: ಕೃತ್ಯಕ್ಕೆ ಹೋಗುವ ಮುನ್ನ ತಮ್ಮ ಗುರುತಾಗಲಿ, ಬೆರಳಚ್ಚಾಗಲಿ ಸಿಗದಂತೆ ಮಾಡಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ಕೊಲಂಬಿಯಾ ತಂಡ ಕೈಗೊಳ್ಳುತ್ತಿತ್ತು. ಶ್ವಾನಪಡೆಗೆ ತಮ್ಮ ಮೈಕೈನ ವಾಸನೆ ಬರದಂತೆ ತಡೆಯಲು ಕೋವಿಡ್​-19 ಪಿಪಿಇ ಕಿಟ್​ ಮಾದರಿಯ ಮುಖ ಮತ್ತು ಮೈ ಪೂರ್ತಿ ಮುಚ್ಚುವ ಗೌನ್​ ಅನ್ನು ಧರಿಸುತ್ತಿತ್ತು. ಕೈಗೆ ಹ್ಯಾಂಡ್​ಗ್ಲೌಸ್​, ಮುಖಕ್ಕೆ ಮಾಸ್ಕ್​ ಮತ್ತು ತಲೆಗೆ ಟೋಪಿ ಹಾಕಿಕೊಳ್ಳುತ್ತಿತ್ತು. ತಾವು ಗುರುತು ಹಾಕಿಕೊಂಡಿದ್ದ ಮನೆಗೆ ಸಂಜೆ ತೆರಳುತ್ತಿದ್ದ ತಂಡ, ಮೊದಲಿಗೆ ಲೇಡಿ ಸ್ಟಿಫಾನಿಯಾಳನ್ನು ಮನೆಗೆ ಕಳುಹಿಸಿ ಡೋರ್​ಬೆಲ್​ ಬಾರಿಸುತ್ತಿತ್ತು. ಯಾರೂ ಉತ್ತರಿಸಲಿಲ್ಲ ಎಂದಾಗ ತನ್ನೊಂದಿಗೆ ತೆಗೆದುಕೊಂಡು ಹೋಗಿರುತ್ತಿದ್ದ ವಾಕಿಟಾಕಿ ಮೂಲಕ ಆಕೆ ಇತರರಿಗೆ ಮಾಹಿತಿ ಕೊಡುತ್ತಿದ್ದಳು. ಆಗ ತಂಡದ ಇತರ ಸದಸ್ಯರು ಬಂದು ಮನೆಬಾಗಿಲು ಒಡೆದು ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತಿದ್ದರು.

    ಶಿವರಾಜ್​ಕುಮಾರ್​ ಪಾತ್ರ: ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್​ ಅವರು ಮಾನ್ಯತಾ ಟೆಕ್​ಪಾರ್ಕ್​ನ ಹಿಂಬದಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಮನೆಯ ಪಕ್ಕದಲ್ಲಿರುವ ಮನೆಗೆ ಕೊಲಂಬಿಯಾ ತಂಡ 2019ರ ಅಕ್ಟೋಬರ್​ನಲ್ಲಿ ಕನ್ನ ಹಾಕಿತ್ತು. ಗ್ರಿಲ್​ ಲಾಕ್​ ಮುರಿದು ಕಳ್ಳತನ ಮಾಡುತ್ತಿರುವ ಮಾಹಿತಿ ಸಂಪಿಗೆಹಳ್ಳಿ ಪೊಲೀಸ್​ ಠಾಣೆ ಸಿಬ್ಬಂದಿಗೆ ತಲುಪಿತ್ತು. ತಕ್ಷಣವೇ ಅವರು ಸ್ಥಳಕ್ಕೆ ಧಾವಿಸಿದಾಗ ಶಿವರಾಜ್​ಕುಮಾರ್​ ಅವರ ಮನೆಗೆ ಅಂಟಿಕೊಂಡಂತೆ ಇದ್ದ 15 ಅಡಿ ಎತ್ತರದ ಗೋಡೆಯನ್ನು ತಂಡದ ಸದಸ್ಯರು ಚಕಚಕನೆ ಹತ್ತಿ ಪರಾರಿಯಾಗಿದ್ದರು. ಕೃತ್ಯ ಎಸಗಲು ತಮ್ಮೊಂದಿಗೆ ತಂದಿದ್ದ ಕಾರನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು.

    ಕಾರು ಪರಿಶೀಲಿಸಿದ ಪೊಲೀಸರಿಗೆ ಅದರಲ್ಲಿದ್ದ ವಾಕಿಟಾಕಿ ಅಲ್ಲದೆ, ಬಲಿಷ್ಠವಾದ ಬೀರು, ಲಾಕರ್​ಗಳನ್ನು ಮುರಿಯಲು ಬಳಸುವ ಅತ್ಯಾಧುನಿಕ ಸಾಧನಗಳು ಪತ್ತೆಯಾಗಿದ್ದವು. ನೆರೆಹೊರೆಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಇವರು ಚಕಚಕನೆ 15 ಅಡಿ ಎತ್ತರದ ಗೋಡೆ ಹತ್ತಿ ಇಳಿದಿದ್ದು ಕಂಡುಬಂದಿತ್ತು. ಪಾರ್ಕೂರ್​ ತರಬೇತಿ ಪಡೆದವರು ಮಾತ್ರವೇ ಇಷ್ಟು ಎತ್ತರದ ಗೋಡೆ ಹತ್ತಿ ಇಳಿಯಲು ಸಾಧ್ಯ ಎಂಬುದು ಪೊಲೀಸರಿಗೆ ಮನವರಿಕೆಯಾಗಿತ್ತು. ಅಲ್ಲದೆ, ಈ ಹಿಂದೆ ಕೂಡ ಇಂಥ ತರಬೇತಿ ಪಡೆದವರು ಕನ್ನ ಕಳವು ಮಾಡಿದ್ದು ನೆನಪಾಗಿ, ಕಡತಗಳನ್ನು ತಡಕಾಡಿದಾಗ ಇದು ಕೊಲಂಬಿಯಾ ತಂಡದ್ದೇ ಕೃತ್ಯ ಎಂಬುದು ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಠಾಣೆಗಳ ಪ್ರತ್ಯೇಕ ತಂಡಗಳು ಕೊಲಂಬಿಯಾ ಕನ್ನ ಕಳ್ಳರ ಪತ್ತೆಗೆ bಎಂಗಳೂರು ಪೊಲೀಸರು ಮುಂದಾಗಿದ್ದರು.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋವಿಡ್​-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವುದು ಏಕೆ? ಇಲ್ಲಿದೆ ಮಾಹಿತಿ…

    2 ತಿಂಗಳು ಸಿಸಿ ಕ್ಯಾಮರಾ ದೃಶ್ಯಗಳ ಪರಿಶೀಲನೆ: ಈಶಾನ್ಯ ವಿಭಾಗದ ಡಿಸಿಪಿ ನೇತೃತ್ವದಲ್ಲಿ ರಚನೆಗೊಂಡಿದ್ದ ವಿವಿಧ ತಂಡಗಳು ಸತತ ಎರಡು ತಿಂಗಳು ನಗರದ ವಿವಿಧ ಭಾಗಗಳಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ವೀಕ್ಷಿಸಿ ಶಂಕಿತರ ಮೇಲೆ ನಿಗಾ ಇರಿಸಿದ್ದವು. 2020ರ ಮಾರ್ಚ್​ನಲ್ಲಿ ಥಣಿಸಂದ್ರದ ಪೆಟ್ರೋಲ್​ಬಂಕ್​ನಲ್ಲಿ ಮೋಟಾರುಬೈಕ್​ಗೆ ಪೆಟ್ರೋಲ್​ ಹಾಕಿಸಿಕೊಳ್ಳಲು ಬಂದಿದ್ದವರ ಮುಖಚಹರೆ ಮತ್ತು ಶಿವರಾಜ್​ಕುಮಾರ್​ ಮನೆಯ ಪಕ್ಕದ ಮನೆಯಲ್ಲಿ ದೊರೆತ ಸಿಸಿ ಕ್ಯಾಮರಾದ ದೃಶ್ಯಗಳಲ್ಲಿ ದಾಖಲಾಗಿದ್ದವರ ಮುಖಚಹರೆಗಳಲ್ಲಿ ಹೋಲಿಕೆ ಇರುವುದನ್ನು ಗುರುತಿಸಿ, ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬಯಲಾಗಿದೆ.

    6 ಕೆಜಿ ಚಿನ್ನಾಭರಣ ಪತ್ತೆ: ತಾವು ಕದ್ದಿರುವ ಚಿನ್ನಾಭರಣವನ್ನು ಮಾರಾಟ ಮಾಡಲು ಹೋದರೆ ಸಿಕ್ಕಿಬೀಳುವ ಭೀತಿ ಕೊಲಂಬಿಯಾ ಕನ್ನ ಕಳ್ಳರ ತಂಡದ್ದಾಗಿತ್ತು. ಹಾಗಾಗಿ ತಂಡದ ಸದಸ್ಯರು ತಮ್ಮ ಪಾಲಿಗೆ ಬರುತ್ತಿದ್ದ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡದೆ, ಅವನ್ನು ಕರಗಿಸಿ ಚಿಕ್ಕ ಉಂಡೆಗಳನ್ನಾಗಿ ಮಾಡಿ ಇರಿಸಿಕೊಳ್ಳುತ್ತಿದ್ದರು. ನೇಪಾಳ ಮಾರ್ಗವಾಗಿ ಸ್ವದೇಶಕ್ಕೆ ಮರಳುವಾಗ ಚೆನ್ನವನ್ನು ಸಾಗಿಸಲು ಅನುಕೂಲವಾಗುತ್ತದೆ ಎಂಬುದು ಇವರ ಮತ್ತೊಂದು ಉದ್ದೇಶವಾಗಿತ್ತು. ತಮ್ಮ ಪಾಲಿಗೆ ಬಂದ ನಗದನ್ನು ಮಾತ್ರ ಸ್ವೇಚ್ಛಾಚಾರವಾಗಿ ಖರ್ಚು ಮಾಡುತ್ತಿದ್ದರು.

    ಹೀಗಾಗಿ ಬಂಧಿತರ ಬಳಿ 2.58 ಕೋಟಿ ರೂ. ಮೌಲ್ಯದ 6 ಕೆ.ಜಿ. ಚಿನ್ನ, 4 ಲಕ್ಷ ರೂ. ಮೌಲ್ಯದ 9 ಎಂಎಂ ಬ್ರೌನಿಂಗ್​ ಪಿಸ್ತೂಲ್​ ಮತ್ತು 2 ಮೋಟಾರ್​ಬೈಕ್​ಗಳು ಪತ್ತೆಯಾಗಿದ್ದು, ಅವೆಲ್ಲವನ್ನೂ ಜಪ್ತಿ ಮಾಡಿರುವುದಾಗಿ ಕೊತ್ತನೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

    ಸ್ಪ್ಯಾನಿಷ್​ ಕಲಿತ ಪೊಲೀಸರು: ಬಂಧಿತ ಆರೋಪಿಗಳಿಗೆ ಸ್ಪ್ಯಾನಿಷ್​ ಭಾಷೆ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಹಾಗಾಗಿ ಇವರ ವಿಚಾರಣೆಗೆ ಭಾರಿ ತೊಡಕಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ದುಭಾಷಿಗಳ ಸಹಾಯ ಪಡೆದು ಇವರ ಬಳಿಯಿಂದ ಮಾಹಿತಿ ಪಡೆದುಕೊಂಡಿದ್ದರು. ಗೂಗಲ್​ ಟ್ರ್ಯಾನ್ಸ್​ಲೇಷನ್​ ಆ್ಯಪ್​ ಮೂಲಕವೂ ಒಂದಷ್ಟು ಮಾಹಿತಿ ಪಡೆದುಕೊಂಡರು. ವಿಚಾರಣೆ ಮುಗಿಯುವ ವೇಳೆಗೆ ಇವರನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸ್​ ಸಿಬ್ಬಂದಿ ತಮಗೆ ಅರಿವಿಲ್ಲದಂತೆ ಸ್ಪ್ಯಾನಿಶ್​ ಭಾಷೆಯನ್ನೂ ಕಲಿತುಕೊಂಡಿದ್ದರು!

    ಕರೊನಾ ಚಿಕಿತ್ಸೆಗೆ ಬೆಡ್​ಗಳಿವೆ ; ರೋಗಿಗಳೇ ಇಲ್ಲ; ಒಂದೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಏನಿದು ಬದಲಾವಣೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts