More

    ರಾಜಧಾನಿ ಬೆಂಗಳೂರಲ್ಲೇ ಮತ ಚಲಾವಣೆ ಕಡಿಮೆ: ಮತ ಪ್ರಮಾಣ ಹೆಚ್ಚಿಸಲು ಚುನಾವಣಾಧಿಕಾರಿ ಕಚೇರಿಯಿಂದ ಜಾಗೃತಿ

    ಬೆಂಗಳೂರು: ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ವತಿಯಿಂದ ಶನಿವಾರ ಚರ್ಚ್‌ಸ್ಟ್ರೀಟ್‌ನಲ್ಲಿ ಆಯೋಜಿಸಲಾಗಿದ್ದ ಮತದಾನ ಹಬ್ಬ ಕಾರ್ಯಕ್ರಮದಲ್ಲಿ ಮತದಾನದ ಮಹತ್ವ ಹಾಗೂ ಮತ ಹಾಕದಿದ್ದರೆ ಆಗುವ ಪರಿಣಾಮ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

    ಮತದಾನ ಬಗ್ಗೆ ಯುವಕರಿಗೆ ಜಾಗೃತಿ, ವೋಟರ್ ಹೆಲ್ಪ್‌ಲೈನ್ ಆ್ಯಪ್ ಬಗ್ಗೆ ಮಾಹಿತಿ, ಪ್ರತಿಜ್ಞಾ ವಿಧಿ ಬೋಧನೆ ಮತ್ತು ಮತದಾರರ ಪಟ್ಟಿ ಪರಿಶೀಲನೆ ಸೇರಿ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಲಾಯಿತು. ಕಲಾವಿದರಿಂದ ಬೀದಿ ನಾಟಕ, ಸಂಘ ಸಂಸ್ಥೆಗಳಿಂದ ಬೈಕ್ ರ‌್ಯಾಲಿ, ಸಂಗೀತ, ಯಕ್ಷಗಾನ ಹಾಗೂ ಫ್ಲಾಶ್ ಮಾಬ್ ಸೇರಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾನದ ಪ್ರಾಮುಖ್ಯತೆ ಕುರಿತು ಬೆಳಕು ಚೆಲ್ಲಲಾಯಿತು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ವಿಧಾನಸಭಾ ಚುನಾವಣೆಯಲ್ಲಿ ಮತದಾನ ಯಶಸ್ವಿಗೆ ಯುವ ಸಮೂಹವೇ ರಾಯಭಾರಿಗಳು. ಹೆಚ್ಚಿನ ಯುವಕರು ತಮ್ಮ ಸುತ್ತಮುತ್ತ ಪ್ರದೇಶದ ಜನರನ್ನು ಮತದಾನ ಮಾಡುವಂತೆ ಪ್ರೇರೇಪಿಸಿ ಚುನಾವಣೆ ಯಶಸ್ವಿಗೊಳಿಸಬೇಕು. ಮೇ.10ರಂದು ರಾಜ್ಯದ ಜನರು ತಪ್ಪದೇ ಮತಗಟ್ಟೆಗೆ ತೆರಳಿ ಮತದಾನ ಮಾಡಲೇಬೇಕು. ಜನರಲ್ಲಿ ಮತದಾನದ ಬಗ್ಗೆ ಅರಿವು ಹಾಗೂ ಉತ್ಸಾಹ ಮೂಡಿಸಲು ಇಂದಿನ ಕಾರ್ಯಕ್ರಮ ಸಹಕಾರಿ. ಈ ಚುನಾವಣೆಯಲ್ಲಿ ಪ್ರಥಮ ಬಾರಿ ಮತದಾನ ಮಾಡುವ ಯುವಕರ ಸಂಖ್ಯೆ 1 ಲಕ್ಷ ಮೀರಿರುವುದು ಗಮನಾರ್ಹ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ ಪ್ರಧಾನಿ ಸಂಚರಿಸುವ ಮಾರ್ಗಗಳೆಲ್ಲ ಬಂದ್; ರಾತ್ರಿ ಹತ್ತರವರೆಗೂ ಈ ಪ್ರಮುಖ ರಸ್ತೆ ಬಂದ್

    18 ವರ್ಷ ತುಂಬಿದ ಯುವಕರು ಮೊದಲ ಬಾರಿ ಮತದಾನ ಮಾಡಲು ಮುಂದೆ ಬರಬೇಕು. ಈ ಮೂಲಕ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ಹಬ್ಬ ಯಶಸ್ವಿಗೊಳಿಸಬೇಕು. ಮತದಾನ ಬಗ್ಗೆ ಅರಿವು ಮೂಡಿಸಲು ಕಾಲೇಜುಗಳಲ್ಲಿ 4 ಸಾವಿರ ಎಲೆಕ್ಟೋರಲ್ ಲಿಟ್ರೆಸಿ ಕ್ಲಬ್ ಪ್ರಾರಂಭಿಸಲಾಗಿದೆ. ಹಿರಿಯ ನಾಗರಿಕರು, ಅಂಗವಿಕಲರಿಗೆ ಮತಗಟ್ಟೆಗಳಲ್ಲಿ ಮತದಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ವಿಧಾನಸಭಾ ಚುನಾವಣೆಯ ರಾಷ್ಟ್ರೀಯ ರಾಯಭಾರಿ ಆಗಿದ್ದಾರೆ ಎಂದರು.

    ಬೆಂಗಳೂರು ನಗರ ಜಿಲ್ಲಾಧಿಕಾರಿ ಟಿ.ಕೆ.ದಯಾನಂದ, ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್, ವಿಶೇಷ ಚುನಾವಣಾಧಿಕಾರಿ ಎ.ವಿ.ಸೂರ್ಯಸೇನ್ ಮತ್ತಿತರರಿದ್ದರು.

    ಬೆಂಗಳೂರು ಜಾಗತಿಕ ನಗರವಾಗಿದೆ. ಆದರೆ, ರಾಜಧಾನಿಯಲ್ಲಿ ಮತದಾನದ ಪ್ರಮಾಣ ಕಡಿಮೆ ಇದೆ. ಈ ಬಾರಿ ಗರಿಷ್ಠ ಪ್ರಮಾಣದಲ್ಲಿ ಮತದಾನ ದಾಖಲಿಸುವ ಗುರಿ ಸಾಧಿಸಬೇಕಿದೆ. ಯುವ ಸಮೂಹವನ್ನು ಮತಗಟ್ಟೆಯತ್ತ ಸೆಳೆಯಲು ಇಂದಿನ ಕಾರ್ಯಕ್ರಮ ಪೂರಕವಾಗಿದೆ. ಯುವಜನರು ತಮ್ಮ ನೆರೆಹೊರೆ ಜನರನ್ನು ಮತದಾನದ ಹಕ್ಕು ಚಲಾಯಿಸಲು ಪ್ರೋತ್ಸಾಹಿಸಬೇಕು.
    | ಪ್ರತಾಪ್ ರೆಡ್ಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts