More

    ‘ನಿರ್ಬಂಧ ಹೇರಿದ್ರೂ ಗಣೇಶ ಆಚರಣೆ ನಿಲ್ಲಿಸಲ್ಲ… ಧಾರ್ಮಿಕ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಬಾರದು’

    ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ವಿಧಿಸದರೂ, ಧಾರ್ಮಿಕ ಆಚರಣೆಯಲ್ಲಿ ಹಿಂಜರಿಯದೆ ಸರಳವಾಗಿ ಗಣೇಶ ಉತ್ಸವ ಮಾಡಲಾಗುವುದು ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ತಿಳಿಸಿದೆ.

    ರಾಜ್ಯದಲ್ಲಿ ಕರೊನಾ ಸೋಂಕಿನ ಆತಂಕ ದೂರವಾಗಿದ್ದು, ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಮಾರುಕಟ್ಟೆ, ಶಾಪಿಂಗ್ ಮಾಲ್, ಪಬ್, ಕ್ಲಬ್, ಬಾರ್ ಹಾಗೂ ಸಭೆ-ಸಮಾರಂಭಕ್ಕೆ ಮುಕ್ತ ಅವಕಾಶವಿದೆ. ಆದರೆ, ಸರ್ಕಾರ ಧಾರ್ಮಿಕ ವಿಚಾರದಲ್ಲಿ ಮೂಗು ವ್ಯಥಾ ತೂರಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸುವುದು ಸರಿಯಲ್ಲ. ಕೋವಿಡ್ ನಿಯಮ ಪಾಲನೆಯೊಂದಿಗೆ ಮೆರವಣಿಗೆ ರಹಿತ ಸರಳ ಗಣೇಶ ಉತ್ಸವಕ್ಕೆ ಅನುಮತಿ ಕೊಡಬೇಕು. ಇಲ್ಲದಿದ್ದರೆ ಸರ್ಕಾರದ ಆದೇಶ ಉಲ್ಲಂಸಿ ನಗರಾದ್ಯಂತ 500ಕ್ಕೂ ಅಧಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಧಾರ್ಮಿಕ ವಿಚಾರಕ್ಕೆ ಪ್ರಕರಣ ದಾಖಲಿಸಿದರೂ ನಾವು ಹಿಂಜರಿಯುವುದಿಲ್ಲ ಎಂದು ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

    ಧಾರ್ಮಿಕ ಪದ್ದತಿಗೆ ವಿರೋಧ:
    ಸರ್ಕಾರದ ವತಿಯಿಂದ 3 ಅಡಿಗಿಂತ ಕಡಿಮೆ ಎತ್ತರದ ಮಣ್ಣಿನ ಗಣೇಶ ಮೂರ್ತಿಯನ್ನು ಕೇವಲ ಮೂರು ದಿನ ಕೂರಿಸಿ ಬಕೆಟ್‌ನಲ್ಲಿ ಗಣೇಶ ವಿಸರ್ಜನೆ ಮಾಡುವಂತೆ ತಿಳಿಸುತ್ತಿದೆ. ಆದರೆ, ಬಕೆಟ್‌ನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದು ನಮ್ಮ ಧಾರ್ಮಿಕ ಪದ್ದತಿಯಲ್ಲ. ಚೌತಿಯಿಂದ ಚತುರ್ದಶಿವರೆಗೆ (11 ದಿನ) ಗಣೇಶ ಕೂರಿಸುವ ನಿಯಮವಿದ್ದು, ಅದಕ್ಕೆ ಅಡ್ಡಿ ಪಡಿಸಬಾರದು. ಮಣ್ಣಿನಿಂದ ದೊಡ್ಡ ಗಣೇಶನ ಮೂರ್ತಿ ತಯಾರಿಕೆ ಸಾಧ್ಯವಿಲ್ಲ. ಹೀಗಾಗಿ, ಪ್ಲಾಸ್ಟರ್ ಆ್ ಪ್ಯಾರೀಸ್ (ಪಿಒಪಿ) ಬಳಸಿ ಹಗುರದ ಮೂರ್ತಿ ತಯಾರಿಸುತ್ತಿದೆ. ಸರ್ಕಾರ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಮಾತ್ರವಲ್ಲದೆ, ಎಲ್ಲ ಮಾದರಿ ವಿಗ್ರಹ ಸೇರಿ ಸಂಪೂರ್ಣವಾಗಿ ಪಿಒಪಿ ನಿಷೇಧಿಸಬೇಕು. ಜನರು ತಮ್ಮ ಆರ್ಥಿಕ ಶಕ್ತಿಗನುಗುಣ ಗಣೇಶ ವಿಗ್ರಹ ಪ್ರತಿಷ್ಠಾಪಿಸಲು ಸರ್ಕಾರ ನಿರ್ಬಂಧ ತೆರವುಗೊಳಿಸಬೇಕು.
    ಈ ವೇಳೆ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಈ. ಅಶ್ವತ್ಥನಾರಾಯಣ, ಉಪಾಧ್ಯಕ್ಷ ನಾಗೇಂದ್ರ ಪ್ರಸಾದ್, ಸಂಯೋಜಕರಾದ ನಾಗರಾಜ್ ಕುಟ್ಟಿ, ಕೇಶವ ನಾಯಕ್, ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು.

    ಸಾರ್ವಜನಿಕ ಲಸಿಕಾ ಅಭಿಯಾನ:
    ಕಳೆದ ವರ್ಷ ಗಣೇಶ ಉತ್ಸವದ ನಡುವೆ 7 ಲಕ್ಷ ಜನರಿಗೆ ಹೋಮಿಯೋಪಥಿ ಔಷಧ ನೀಡಲಾಗಿತ್ತು. ಈ ವರ್ಷ ಕೋವಿಡ್ ಸಂತ್ರಸ್ಥ ಕುಟುಂಬಗಳಿಗೆ ನೆರವು ಮತ್ತು ಕರೊನಾ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಸಲಾಗುತ್ತದೆ. ಜತೆಗೆ, 24 ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಲಸಿಕಾ ಅಭಿಯಾನ ಮಾಡಲು ಉದ್ದೇಶಿಸಿದ್ದು, ಸರ್ಕಾರ ಸಹಕರಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಮನವಿ ಮಾಡಿದರು.

    ಗಣೇಶ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಿ:
    ಕಳೆದ 10 ವರ್ಷಗಳಿಂದ ಎಲ್ಲ ಕೆರೆಗಳ ಬಳಿ ಪ್ರತ್ಯೇಕ ಕಲ್ಯಾಣಿ ನಿರ್ಮಿಸಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಕೂಡಲೆ ಕೆರೆ ಹತ್ತಿರ ಕಲ್ಯಾಣಿ ಮತ್ತು ವಾರ್ಡ್‌ವಾರು ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಗಣೇಶ ಉತ್ಸವ ಆಚರಣೆಗೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಈ. ಅಶ್ವತ್ಥನಾರಾಯಣ ಮನವಿ ಮಾಡಿದರು.

    MLA ಪುತ್ರನ ಡೆಡ್ಲಿ ಕಾರು ಅಪಘಾತಕ್ಕೆ ಕಾರಣವಾಯ್ತಾ ನೀರಿನ ಬಾಟಲ್​? ಇಲ್ಲಿದೆ ಶಾಕಿಂಗ್​ ಸಂಗತಿ..!

    ಕಿಚ್ಚನ ಹುಟ್ಟುಹಬ್ಬಕ್ಕೆ ಚಿನ್ನದ ಹುಡುಗ ನೀರಜ್​ ಚೋಪ್ರಾರಿಂದ ಸರ್ಪ್ರೈಸ್: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ವಿಕ್ರಾಂತ್​ ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts