More

    ಬೆಂಗಳೂರಲ್ಲಿ ಮಳೆ, ಬೈರಮಂಗಲ ಜಲಾಶಯ ಭರ್ತಿ

    ಬಿಡದಿ: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ವೃಷಭಾವತಿ ನದಿ ಉಕ್ಕಿ ಹರಿಯುತ್ತಿದ್ದು, ಬೈರಮಂಗಲ ಜಲಾಶಯ ತುಂಬಿ ತುಳುಕುತ್ತಿದೆ.

    ಕಳೆದ ಎರಡು ದಿನಗಳಿಂದ ಬೆಂಗಳೂರು, ಕೆಂಗೇರಿ, ವಿಜಯನಗರ ಭಾಗದಲ್ಲಿ ಸುರಿದ ಮಳೆ ಪರಿಣಾಮ ದೊಡ್ಡಬೆಲೆ, ತಾಳಗುಪ್ಪೆ, ಶ್ಯಾನುಮಂಗಲ ಗ್ರಾಮದ ಮೂಲಕ ಹರಿದ ಮಳೆ ನೀರು ಬೈರಮಂಗಲ ಕೆರೆ ಸೇರುತ್ತಿದೆ. ಶುಕ್ರವಾರ ಮಧ್ಯಾಹ್ನದವರೆಗೂ ಭೋರ್ಗರೆದು ಹರಿಯುತ್ತಿದ್ದ ನೀರು, ನಂತರ ಹರಿವಿನ ಪ್ರಮಾಣ ಕಡಿಮೆಯಾಯಿತು. ಆದರೂ ಎರಡು ದಿನಗಳಲ್ಲಿ ಹರಿದ ನೀರಿನಿಂದ ಕೆರೆ ಭರ್ತಿಯಾಗಿ, ಬೈಪಾಸ್ ನಾಲೆಯ ಮೂಲಕ ಕೆರೆಯ ಕೆಳಭಾಗಕ್ಕೆ ಹರಿದು ಹೋಗುತ್ತಿದೆ. ಇದು ಈ ಭಾಗದ ಜನರಲ್ಲಿ ಆಕರ್ಷಣೆಯಾದರೂ, ಗಬ್ಬು ವಾಸನೆಯಿಂದ ಬೇಸತ್ತಿದ್ದ ನದಿ ಪಾತ್ರದ ಜನರಲ್ಲಿ ಒಂದೆಡೆ ತುಸು ಸಮಾಧಾನ ಕಂಡು ಬಂದಿದೆ.

    ಶಾಪಗ್ರಸ್ತ ಜಲಾಶಯ: ನಗರ ಪ್ರದೇಶದ ವಿವಿಧ ಬಡಾವಣೆಗಳಿಂದ ಹೊತ್ತು ತರುವ ಕಲ್ಮಶ ನೀರು ಬೈರಮಂಗಲ ಕೆರೆ ಸೇರಿ, ಈ ಭಾಗದ ಜನರ ಪಾಲಿಗೆ ಶಾಪಗ್ರಸ್ತ ಜಲಾಶಯವಾಗಿ ಗುರ್ತಿಸಿಕೊಂಡಿದೆ. ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಎ.ಮಂಜುನಾಥ್ ಈ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿ, ಕಲುಷಿತ ನೀರು ಬೈರಮಂಗಲ ಕೆರೆ ಸೇರದಂತೆ ಬೈಪಾಸ್ ಚಾನೆಲ್ ಮೂಲಕ ಕೆಳಭಾಗಕ್ಕೆ ಹರಿಯುವಂತೆ ಮಾಡಿ. ದೊಡ್ಡಬೆಲೆ ಬಳಿ ಕಲ್ಮಶ ನೀರು ಶುದ್ದೀಕರಿಸಿ ಕೆರೆ ತುಂಬಿಸುವ ಯೋಜನೆ ಚಾಲನೆಯಲ್ಲಿದೆ. ಬೈಪಾಸ್ ನಾಲೆ ಕೆಲಸ ಮುಗಿದಿರುವುದರಿಂದ ವೃಷಭಾವತಿ ನದಿ ನೀರು ಮತ್ತೆ ಬೈರಮಂಗಲ ಕೆರೆಯ ಒಡಲು ಸೇರುತ್ತಿದೆ.

     

    ಬೆಂಗಳೂರು ಭಾಗದಿಂದ ಮಳೆಯ ನೀರು, ಕಲ್ಮಶ ಮತ್ತು ಕಾರ್ಖಾನೆ ನೀರು ಭಾರಿ ಪ್ರಮಾಣದಲ್ಲಿ ಬೈರಮಂಗಲ ಕೆರೆ ಸೇರುತ್ತಿದೆ. ಕೋಡಿ ಮೂಲಕ ಅಪಾರ ನೀರು ಕೆಳಭಾಗಕ್ಕೂ ಹರಿದು ಹೋಗುತ್ತಿದ್ದು, ಬೈಪಾಸ್ ನಾಲೆ ಕೆಲಸವನ್ನು ಶೀಘ್ರವಾಗಿ ಮುಗಿಸಿದರೆ ಮಾತ್ರ ಬೈರಮಂಗಲ ಕೆರೆಗೆ ಶುದ್ಧೀಕರಿಸಿದ ನೀರು ತುಂಬಿಸಲು ಸಾಧ್ಯವಾಗಲಿದೆ. ಇಲ್ಲದಿದ್ದರೆ ಈ ಭಾಗದ ಜನರಿಗೆ ವಾಸನೆ ಮತ್ತು ಸೊಳ್ಳೆ ಕಾಟ ತಪ್ಪಿದ್ದಲ್ಲ.
    ನಾರಾಯಣರೆಡ್ಡಿ, ಚೌಕಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts