More

    ಘನತ್ಯಾಜ್ಯ ಘಟಕಕ್ಕೆ ಆರೋಗ್ಯಾಧಿಕಾರಿಗಳ ತಂಡ ಭೇಟಿ

    ಬೇಲೂರು: ಪಟ್ಟಣ ಪುರಸಭೆಯ ಘನತ್ಯಾಜ್ಯ ಘಟಕಕ್ಕೆ ಸೋಮವಾರ ರಾಜ್ಯದ ವಿವಿಧ ಭಾಗಗಳ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿ ಗೊಬ್ಬರ ತಯಾರಿಸುವ ವಿಧಾನ ಹಾಗೂ ಘಟಕದ ನಿರ್ವಹಣೆ ಬಗ್ಗೆ ಮಾಹಿತಿ ಪಡೆಯಿತು.
    ಇಲ್ಲಿನ ಘನತ್ಯಾಜ್ಯ ಘಟಕ ರಾಜ್ಯದ ಇತರ ಪುರಸಭೆಗಳ ಘನತ್ಯಾಜ್ಯ ಘಟಕಗಳಿಗೆ ಮಾದರಿಯಾಗಿರುವ ಹಿನ್ನೆಲೆಯಲ್ಲಿ ಅಧ್ಯಯನಕ್ಕಾಗಿ ಚಿತ್ರದುರ್ಗ, ಬಳ್ಳಾರಿ, ಅನೇಕಲ್, ಮೈಸೂರು, ರಾಯಚೂರು, ಮುಳಬಾಗಿಲು, ಗುರುಮಿಠಕಲ್, ರಾಮನಗರದ ಪುರಸಭೆ ಮತ್ತು ನಗರಸಭೆಗಳ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿತ್ತು.
    ಘನತ್ಯಾಜ್ಯ ಘಟಕದ ನಿರ್ವಹಣೆಯಲ್ಲಿ ಕಸ ವಿಲೇವಾರಿ, ಹಸಿಕಸ -ಒಣಕಸ ಸಂಗ್ರಹ, ಪ್ಲಾಸ್ಟಿಕ್ ಬೇರ್ಪಡಿಕೆ ಹಾಗೂ ಹಸಿ ಕಸದಿಂದ ಬರುವಂತಹ ನೀರನ್ನು ಟ್ಯಾಂಕ್‌ಗಳಲ್ಲಿ ಸಂಗ್ರಹಿಸುತ್ತಿರುವುದು ಮತ್ತು ಕಸವನ್ನು ಹಂತ ಹಂತವಾಗಿ ಸಂಸ್ಕರಿಸಿ ಸಾವಯವ ಗೊಬ್ಬರ ತಯಾರಿಸುವ ಬಗ್ಗೆ ವೀಕ್ಷಿಸಿದ ಅಧಿಕಾರಿಗಳ ತಂಡ, ಘಟಕ ಸಂಪೂರ್ಣ ಮಾಹಿತಿ ಪಡೆದುಕೊಂಡಿತು.
    ಬೇಲೂರು ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್.ಮಂಜುನಾಥ್ ಮಾತನಾಡಿ, ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ಪ್ರತಿಯೊಂದು ಮನೆಯಿಂದಲೂ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಯಾವುದೇ ರಾಸಾಯನಿಕ ಬಳಸದೆ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಘನತ್ಯಾಜ್ಯ ಘಟಕಕ್ಕೆ ಸರ್ಕಾರದಿಂದ ಬಂದಿರುವ 73 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿಗಳ ನಿರ್ವಹಣೆಯಾಗುತ್ತಿದೆ ಎಂದರು.
    ಮುಂದಿನ ದಿನಗಳಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಳ್ಳಲಾಗುವುದು. ಪ್ರಸ್ತುತ ಪಟ್ಟಣದಲ್ಲಿ ಸಂಗ್ರಹವಾಗುತ್ತಿರುವ ಮೂರೂವರೆ ಟನ್ ಕಸದಿಂದ ಗೊಬ್ಬರ ತಯಾರಿಸಲಾಗುತ್ತಿದೆ. ಕೃಷಿ ಇಲಾಖೆಯಿಂದ ಅನುಮತಿ ಪಡೆದು ಗೊಬ್ಬರವನ್ನು ಕೆಜಿಗೆ 5 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ರೈತರು ಅಥವಾ ಮನೆಗಳಲ್ಲಿ ತರಕಾರಿ ಹೂವು ಬೆಳೆಯುವವರು ಗೊಬ್ಬರ ಉಪಯೋಗಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.9620654770, 9449428005, 9663830002 ಸಂಪರ್ಕಿಸಬಹುದು ಎಂದು ತಿಳಿಸಿದರು.
    ಘನತ್ಯಾಜ್ಯ ಘಟಕ ವೀಕ್ಷಿಸಿ ಮಾತನಾಡಿದ ಮೈಸೂರಿನ ಎಟಿಐ ತರಬೇತಿ ಸಂಸ್ಥೆಯ ತರಬೇತುದಾರ ಹಾಗೂ ಪರಿಸರ ಅಭಿಯಂತರ ಯಾದವ್, ಇದು ರಾಜ್ಯದ ಇತರ ನಗರಸಭೆ ಹಾಗೂ ಪುರಸಭೆಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts