More

    ಬಿಸಿಲೂರು ಬಳ್ಳಾರಿ ಜಿಲ್ಲೆಯಲಿಲ್ಲ ಜಾನುವಾರು ಮೇವಿಗೆ ಬರ

    ಹೀರಾನಾಯ್ಕ ಟಿ. ಬಳ್ಳಾರಿ
    ಬೇಸಿಗೆ ಬಂತೆದಂತೆ ಬರ..ಬರ..ಬರ.. ಕುಡಿಯುವ ನೀರಿಗೆ ತಾತ್ವಾರ. ಜಾನುವಾರುಗಳಿಗೆ ಮೇವಿನ ಕೊರತೆ. ಹೀಗೆ ಅನೇಕ ಸಮಸ್ಯೆಗಳು ತಲೆದೂರುವುದು ಸಹಜ.
    ಆದರೆ, ಈ ಬಾರಿ ಬಿಸಿಲೂರು ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಮೇವಿನ ಸಮಸ್ಯೆ ಇಲ್ಲ. ಕಳೆದೆರಡು ವರ್ಷಗಳಿಂದ ಮೇವಿನ ಕೊರತೆ ಆಗದಂತೆ ಜಿಲ್ಲಾಡಳಿತ ಹಾಗೂ ಪಶು ಸಂಗೋಪನಾ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

    ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರ ಹೆಚ್ಚಳದ ಹಿನ್ನೆಲೆಯಲ್ಲಿ ಮೇವಿನ ಸಮಸ್ಯೆ ಕಡಿಮೆ ಆಗಿದೆ. ತುಂಗಭದ್ರಾ ಜಲಾಶಯದ ಮೂಲಕ ಕಾಲುವೆಗಳಿಗೆ ನೀರು ಹರಿಸುತ್ತಿರುವುದರಿಂದ ಎಲ್ಲೆಡೆ ಮೇವು ಬೆಳೆದಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಇಲ್ಲದಂತಾಗಿದೆ. ಕಳೆದ ವರ್ಷವೂ ಜಿಲ್ಲೆಯಲ್ಲಿ ಮೇವಿನ ಕೊರತೆ ಆಗಿಲ್ಲ. ಒಣಮೇವಿನ ಸಂಗ್ರಹ ಸಾಕಷ್ಟು ಇದ್ದು, ಒಂದು ವರ್ಷದವರೆಗೆ ಪೂರೈಸಬಹುದಾಗಿದೆ.

    ಇದನ್ನೂ ಓದಿ: ಪ್ರಾಣಿಗಳ ಹಸಿವು ನೀಗಿಸುವಂತೆ ಸಾರ್ವಜನಿಕರಿಗೆ ಪಶು ಸಂಗೋಪನಾ ಇಲಾಖೆಯಿಂದ ಮನವಿ

    4.24 ಲಕ್ಷ ಟನ್ ಒಣಮೇವು ಸಂಗ್ರಹ

    ಜಿಲ್ಲೆಯಲ್ಲಿ ಮೇವು ಸಂಗ್ರಹ ಹಾಗೂ ಮೇವು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ 4.24 ಲಕ್ಷ ಟನ್ ಒಣಮೇವು ಲಭ್ಯತೆ ಇದೆ. ಒಟ್ಟು 7.73 ಲಕ್ಷ ಜಾನುವಾರುಗಳಿದ್ದು, ಅವುಗಳಿಗೆ ಮುಂದಿನ 44 ವಾರಗಳ ಕಾಲ ಆಗುವಷ್ಟು ಈಗಾಗಲೇ ಮೇವು ಸಂಗ್ರಹಿಸಲಾಗಿದೆ. 2022-23ನೇ ಸಾಲಿನಲ್ಲಿ 1318 ಪ್ಯಾಕೆಟ್ ಮೇವು ಬಿತ್ತನೆ ಬೀಜ ವಿತರಿಸಲಾಗಿದ್ದು, ಅದರಿಂದಲೂ 3954 ಟನ್ ಉತ್ಪಾದನೆ ಮಾಡಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ನೆರೆ ರಾಜ್ಯಕ್ಕೆ ಮೇವು ಮಾರಾಟ

    ಜಿಲ್ಲೆಯಲ್ಲಿ ನೀರಾವರಿ ಹೆಚ್ಚಿದ ನಂತರ ಮೇವು ಹೆಚ್ಚಾಗಿದ್ದು, ಜಿಲ್ಲೆಯಿಂದ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಹೆಚ್ಚಾಗಿ ಮೇವು ಮಾರಾಟ ಮಾಡಲಾಗುತ್ತದೆ. ಅದರಲ್ಲೂ ಭತ್ತದ ಹುಲ್ಲು , ಮೆಕ್ಕೆಜೋಳದ ಮೇವು ಹೆಚ್ಚಾಗಿ ಸಾಗಣೆ ಮಾಡಲಾಗುತ್ತದೆ. ಒಂದು ಟ್ರಾೃಕ್ಟರ್ ಲೋಡ್‌ಗೆ 8 ರಿಂದ 10 ಸಾವಿರ ರೂ. ವರೆಗೆ ದರ ನಿಗದಿ ಮಾಡಲಾಗಿದೆ. ಜಾನುವಾರು ಇಲ್ಲದ ರೈತರು ಮೇವು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಕುಟುಂಬ ನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದಾರೆ.

    ಹಾಲು ಒಕ್ಕೂಟದಿಂದಲೂ ಆಸರೆ

    ಬಳ್ಳಾರಿ-ವಿಜಯನಗರ-ಕೊಪ್ಪಳ-ರಾಯಚೂರು ಹಾಲು ಒಕ್ಕೂಟದಿಂದಲೂ ರೈತರಿಗೆ ಆಸರೆ ಆಗಿದೆ. ಮೇವು ಉತ್ಪಾದನೆ ಹೆಚ್ಚಿನ ಒತ್ತು ನೀಡಲಾಗಿದ್ದು, 10 ಸಾವಿರ ಕ್ವಿಂಟಾಲ್ ಮೇವು ಬಿತ್ತನೆ ಬೀಜ ಉತ್ಪಾದಿಸಿ, ರಾಜ್ಯದ ಬೇರೆ ಬೇರೆ ಒಕ್ಕೂಟಗಳಿಗೂ ಕಳುಹಿಸಲಾಗಿದೆ. ಈಗಾಗಲೇ ಒಂದು ಸಾವಿರ ಕ್ವಿಂಟಾಲ್ ಮೇವು ಬಿತ್ತನೆ ಬೀಜವನ್ನು ಉಚಿತವಾಗಿ ರೈತರಿಗೆ ವಿತರಿಸಲಾಗಿದೆ. ಪ್ರತಿ ತಿಂಗಳು ಒಕ್ಕೂಟದಿಂದ ನಾಲ್ಕು ಟನ್ ಲವಣ ಮಿಶ್ರಿತ ಪಶು ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಟಿ.ತಿರುಪತಪ್ಪ ಮಾಹಿತಿ ನೀಡಿದ್ದಾರೆ.

    7.73 ಲಕ್ಷ ಜಾನುವಾರುಗಳು

    ಜಿಲ್ಲೆಯಲ್ಲಿ ಒಟ್ಟು 7.73 ಲಕ್ಷ ಜಾನುವಾರುಗಳಿವೆ. ಅವುಗಳಲ್ಲಿ 1.14 ಲಕ್ಷ ದನ, 66 ಸಾವಿರ ಎಮ್ಮೆ, 4.59 ಲಕ್ಷ ಕುರಿ, 1.30 ಲಕ್ಷ ಮೇಕೆಗಳಿವೆ. ಅದರಲ್ಲಿ ಬಳ್ಳಾರಿ ತಾಲೂಕು ಹಾಗೂ ಸಂಡೂರಿನಲ್ಲಿ ಜಾನುವಾರು ಹೆಚ್ಚಾಗಿವೆ ಎಂದು ಪಶು ಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.

    ಜಾನುವಾರು ಸಂಖ್ಯೆ ಹಾಗೂ ಮೇವಿನ ಲಭ್ಯತೆ ಕುರಿತು ತಾಲೂಕುವಾರು ಮಾಹಿತಿ.
    ತಾಲೂಕು ದನ/ಎಮ್ಮೆ ಸಂಖ್ಯೆ ಕುರಿ/ಮೇಕೆ ಲಭ್ಯವಿರುವ ಮೇವು (ಟನ್‌ಗಳಲ್ಲಿ)

    ಬಳ್ಳಾರಿ 52,257 1,68,276 1,01,790
    ಸಿರಗುಪ್ಪ 38,232 93,634 62,284
    ಸಂಡೂರು 48,794 1,77,366 1,74,972
    ಕುರುಗೋಡು 21,111 82,554 40,421

    ಕಂಪ್ಲಿ 21,032 69,804 45,508

    ಬಳ್ಳಾರಿ ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರ ಪ್ರತಿವರ್ಷವೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇವಿನ ಲಭ್ಯತೆ ಹೆಚ್ಚುತ್ತಿದೆ. ಕಳೆದ ಬಾರಿ ಬೇಸಿಗೆಯಲ್ಲೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಈ ಬಾರಿಯೂ ಬೇಸಿಗೆ ಮುಗಿಯುವವರೆಗೆ ಮೇವಿನ ಲಭ್ಯತೆ ಇದೆ. ಯಾವುದೇ ರೀತಿ ಸಮಸ್ಯೆ ಆಗದಂತೆ ಈಗಾಗಲೇ ತಾಲೂಕುವಾರು ಅಧಿಕಾರಿಗಳಿಗೆ ಮೇವಿನ ಸಂಗ್ರಹದ ಬಗ್ಗೆ ಪ್ರತಿದಿನವೂ ವರದಿ ನೀಡುವಂತೆ ಸೂಚಿಸಲಾಗಿದೆ.
    ಡಾ.ಹನುಮಂತನಾಯ್ಕ, ಉಪ ನಿರ್ದೇಶಕ
    ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ

    ಬಿಸಿಲೂರು ಬಳ್ಳಾರಿ ಜಿಲ್ಲೆಯಲಿಲ್ಲ ಜಾನುವಾರು ಮೇವಿಗೆ ಬರ

    ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ನೀರಿನ ಕೊರತೆಯಿಂದಾಗಿ ಮೇವಿನ ಸಮಸ್ಯೆ ಆಗುತ್ತಿತ್ತು. ಪ್ರಸಕ್ತ ನೀರಾವರಿ ಕ್ಷೇತ್ರ ಹೆಚ್ಚಳ ಆಗಿರುವುದರಿಂದ ಜಿಲ್ಲೆಯಲ್ಲಿ 2 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ಹಿಂಗಾರು ಹಂಗಾಮಿನಲ್ಲಿ ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸುವುದರಿಂದ ಮೇವಿನ ಕೊರತೆ ಇಲ್ಲ.
    ಆರ್.ಮಾಧವರೆಡ್ಡಿ, ರೈತ ಮುಖಂಡ

    ಜಿಲ್ಲೆಯಲ್ಲಿ ಮೇವು ಕೊರತೆ ಇಲ್ಲ. ತುಂಗಭದ್ರಾ ಜಲಾಶಯದಿಂದ ಕಂಪ್ಲಿ, ಕುರುಗೋಡು, ಸಿರಗುಪ್ಪ ಹಾಗೂ ಬಳ್ಳಾರಿ ಗ್ರಾಮಾಂತರದಲ್ಲಿ ಕಾಲುವೆ ಹರಿದು ಹೋಗುವುದರಿಂದ ಮೇವಿನ ಸಮಸ್ಯೆ ತೀವ್ರ ಕಡಿಮೆ.
    ಉಮಾಪತಿಗೌಡ, ಜಾಲಿಹಾಳ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts