More

    ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಿ: ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಆಗ್ರಹ

    ಬಳ್ಳಾರಿ: ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿಗೀಡಾಗಿದ್ದು, ಸರ್ಕಾರ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ತುಂಗಭದ್ರಾ ರೈತಸಂಘ ಅಧ್ಯಕ್ಷ ಪುರುಷೋತ್ತಮಗೌಡ ಒತ್ತಾಯಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳೆ ಹಾನಿ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಹೋದರೆ ಕೆಲ ಅಧಿಕಾರಿಗಳು ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆ ಎಂದು ಹೇಳುತ್ತಿದ್ದು, ಸರಿಯಲ್ಲ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಡಿ.21ರವರೆಗೆ ಅರ್ಜಿ ಸಲ್ಲಿಸಬಹುದೆಂದು ತಿಳಿಸಿದ್ದಾರೆ. ಹೀಗಾಗಿ ಅರ್ಜಿ ಸ್ವೀಕರಿಸಬೇಕು ಎಂದು ಆಗ್ರಹಿಸಿದರು. ಅವಳಿ ಜಿಲ್ಲೆಯಲ್ಲಿ 2.65 ಲಕ್ಷ ಎಕರೆ ಭತ್ತ, 1.45 ಲಕ್ಷ ಎಕರೆ ಮೆಣಸಿನಕಾಯಿ, 1.10 ಲಕ್ಷ ಎಕರೆ ಹತ್ತಿ ಹಾಗೂ ಇತರ ಬೆಳೆಗಳು ನಾಶವಾಗಿದ್ದು, ರೈತರು ಬೀದಿ ಪಾಲಾಗಿದ್ದಾರೆ. ಒಂದು ಎಕರೆಗೆ 50 ರಿಂದ 60 ಸಾವಿರ ರೂ. ರೈತರು ಖರ್ಚು ಮಾಡಿದ್ದರು. ಆದರೆ, ಬಿಡಿಗಾಸು ನೀಡುತ್ತಿರುವುದು ಸರಿಯಲ್ಲ. ಪ್ರತಿ ಎಕರೆಗೆ 50 ಸಾವಿರ ರೂ. ಕೊಡಬೇಕು ಎಂದು ಆಗ್ರಹಿಸಿದರು.

    ಬೆಳೆ ಹಾನಿಗೆ ಕಳೆದೊಂದು ತಿಂಗಳಲ್ಲಿ ಜಿಲ್ಲೆಯ ನಾಲ್ಕು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ಜಮೀನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದರು. ಮಳೆಯಿಂದ ಬೆಳೆ ನಷ್ಟವಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ದರಿಂದ ಸರ್ಕಾರ, ಆಂಧ್ರ ಸರ್ಕಾರದ ಮಾದರಿಯಲ್ಲಿ ಗುತ್ತಿಗೆ ಪಡೆದ ರೈತರಿಗೂ ಪರಿಹಾರ ನೀಡಬೇಕು.ಎಚ್‌ಎಲ್ ಕಾಲುವೆ ಮೂಲಕ ಮೂರು ತಿಂಗಳ ಕಾಲ ಹೆಚ್ಚಿಗೆ ನೀರು ಹರಿಸಬೇಕು. ಇದರಿಂದ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದರು. ಮುಖಂಡರಾದ ಜಾಲಿಹಾಳ್ ಶ್ರೀಧರ, ಡಿ.ಶಿವಯ್ಯ, ಸತ್ಯನಾರಾಯಣ, ಗಂಗಾವತಿ ವೀರೇಶ್, ಗೋವಿಂದ್, ಮಾರುತಿ, ಮಲ್ಲಪ್ಪ, ಭೀಮನಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts