More

    ಮಕ್ಕಳ ಮೇಲೆ ಹೆಚ್ಚಿದ ದೌರ್ಜನ್ಯ

    ಶ್ರೀಕಾಂತ ಅಕ್ಕಿ ಬಳ್ಳಾರಿ

    ಗಣಿನಾಡು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕರೊನಾ ಲಾಕ್‌ಡೌನ್ ಅವಧಿಯಲ್ಲಿ ಏನೂ ಅರಿಯದ ಕಂದಮ್ಮಗಳು ನಾನಾ ರೀತಿಯ ಶೋಷಣೆಗೆ ಒಳಗಾಗಿದ್ದು, ಸಹಾಯವಾಣಿಗೆ 1008 ದೂರುಗಳು ಬಂದಿವೆ.

    ಅವಳಿ ಜಿಲ್ಲೆಯಲ್ಲಿ 2020ರ ಏಪ್ರಿಲ್‌ನಿಂದ 2021ರ ಮಾರ್ಚ್ ಅವಧಿಯಲ್ಲಿ ಮಕ್ಕಳ ಸಹಾಯವಾಣಿ 1098ಗೆ ತೊಂದರೆಯಲ್ಲಿ ಇರುವ ಮಕ್ಕಳನ್ನು ರಕ್ಷಿಸುವಂತೆ 1008 ಕರೆಗಳು ಬಂದಿರುವುದು ದೌರ್ಜನ್ಯ ಪ್ರಕರಣಗಳು ಹೆಚ್ಚಳಕ್ಕೆ ಸಾಕ್ಷಿ. ಬೌದ್ಧಿಕ ಮಟ್ಟ ಸುಧಾರಣೆಗೂ ಮುಂಚೆಯೇ ಲೈಂಗಿಕ, ಅಪಹರಣ, ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿ ಹಲವು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ.

    ಬಳ್ಳಾರಿ ಜಿಲ್ಲೆ ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಮಕ್ಕಳ ಕಳ್ಳ ಸಾಗಣೆ, ಅಪಹರಣ ಸೇರಿ ನಾನಾ ರೀತಿಯ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಜಿಲ್ಲೆಯಲ್ಲಿ ನಾಪತ್ತೆಯಾದ ಕೆಲ ಪುಟಾಣಿಗಳು ಆಂಧ್ರದಲ್ಲಿ ಪತ್ತೆಯಾಗಿರುವ ಹಲವು ಪ್ರಕರಣಗಳು ನಡೆದಿವೆ. ಕಳ್ಳರ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇಟ್ಟರೂ ಕಳೆದೊಂದು ವರ್ಷದಲ್ಲಿ 23 ಮಕ್ಕಳು ಅಪಹರಣವಾಗಿದ್ದು, ಈವರೆಗೂ ಪತ್ತೆಯಾಗಿಲ್ಲ.

    ಬಾಲ್ಯದ ಸಂಭ್ರಮ ಮಾಯ: ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ 16 ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆ ಎಂಬ ನೊಗ ಹೊತ್ತು 360 ಪುಟಾಣಿಗಳು ಸುಂದರ ಜೀವನ ಕಳೆದುಕೊಂಡಿದ್ದಾರೆ. ಭಿಕ್ಷಾಟನೆಯಲ್ಲಿ ತೊಡಗಿದ್ದ 12 ಮಕ್ಕಳನ್ನು ರಕ್ಷಿಸಿದ್ದು, 46 ಮಂದಿ ಶಾಲೆಯಿಂದ ಹೊರಗುಳಿದಿದ್ದಾರೆ. ಇದರ ಹೊರತು ನಾನಾ ಶೈಕ್ಷಣಿಕ ಸಮಸ್ಯೆಗೆ ಸಂಬಂಧಿಸಿದಂತೆ 69 ಪ್ರಕರಣ ವರದಿಯಾಗಿವೆ. ಭಾವನಾತ್ಮಕವಾಗಿ ಸಮಸ್ಯೆ ಎದುರಿಸುತ್ತಿದ್ದ 56 ಚಿಣ್ಣರು ಪತ್ತೆಯಾಗಿದ್ದು, ಇವರಲ್ಲಿ ನಾಲ್ವರು ದೈಹಿಕ ಶಿಕ್ಷೆಗೆ ಗುರಿಯಾಗಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣ ಘಟಕಕ್ಕೆ 30 ಚಿಣ್ಣರು ಆಶ್ರಯ ಅರಸಿ ಬಂದಿದ್ದಾರೆ. 151 ಮಕ್ಕಳು ಬಾಲ ಕಾರ್ಮಿಕರಾಗಿ ಪತ್ತೆಯಾಗಿದ್ದಾರೆ. 40 ಮಂದಿ ದೈಹಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. 12 ಜನ ಮಾನಸಿಕ ತೊಂದರೆಗೆ ಸಿಲುಕಿದ್ದಾರೆ. ಇನ್ನಾದರೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಇನ್ನಷ್ಟು ಕಾರ್ಯ ತತ್ಪರತೆ ಮೈಗೂಡಿಸಿಕೊಂಡು ಮಕ್ಕಳನ್ನು ರಕ್ಷಿಸುವ ಹೊಣೆ ನಿಭಾಯಿಸಬೇಕಿದೆ.

    ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಳ ಆತಂಕಕಾರಿ ವಿಚಾರ. ಏನೂ ಅರಿಯದ ವಯಸ್ಸಿನಲ್ಲಿ ಹಲವು ಕಂದಮ್ಮಗಳು ತೊಂದರೆಗೆ ಒಳಗಾಗುವುದು ಸರಿಯಲ್ಲ. ಈ ವಿಷಯದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಎಚ್ಚರ ವಹಿಸಬೇಕು.
    | ಅರುಣಾ ಕಾಮಿನೇನಿ ವೈದ್ಯೆ, ಬಳ್ಳಾರಿ

    ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ನಿರಂತರವಾಗಿ ತಡೆಯಲಾಗುತ್ತಿದೆ. ಕಳೆದೊಂದು ವರ್ಷದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕರೆಗಳು ಸಹಾಯವಾಣಿಗೆ ಬಂದಿವೆ. ದೂರುಗಳನ್ನು ಆಲಿಸಿ ತೊಂದರೆಗೆ ಸಿಲುಕಿರುವ ಮಕ್ಕಳನ್ನು ರಕ್ಷಣೆ ಮಾಡುವ ಕೆಲಸವನ್ನು ಸಿಬ್ಬಂದಿ ಜತೆಗೂಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಡುತ್ತಿದೆ.
    | ಸೈಯದ್ ಚಾಂದ್‌ಪಾಷಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts