More

    ದೇವಾಲಯಗಳಲ್ಲಿ ವಿಶೇಷ ಪೂಜೆ

    ಬಳ್ಳಾರಿ: ದೀಪಾವಳಿ ಹಬ್ಬದ ಪ್ರಯುಕ್ತ ನಗರದದಲ್ಲಿನ ಕನಕ ದುರ್ಗಮ್ಮ ದೇವಿ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು.

    ಇಲ್ಲಿನ ವಿವಿಧ ಬಡಾವಣೆಗಳ ಲಕ್ಷ್ಮೀ ದೇವಾಲಯ, ಗಣೇಶ ದೇವಸ್ಥಾನ, ಆಂಜನೇಯಸ್ವಾಮಿ ದೇವಾಲಯ, ಕೃಷ್ಣ ಮಂದಿರ, ಸಾಯಿ ಬಾಬಾ ಮಂದಿರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ, ಮನೆ ಮನೆಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಸ್ಥಾನ ಹಾಗೂ ಮನೆಗಳಲ್ಲಿ ಮಣ್ಣಿನ ದೀಪ ಹಚ್ಚುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

    ನಗರದ ಬೆಂಗಳೂರು ರಸ್ತೆಯಲ್ಲಿ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಬಾಳೆಎಲೆ, ಕಂಬಗಳ ವ್ಯಾಪಾರ ಜೋರಾಗಿಯೇ ಇತ್ತು. ಇಲ್ಲಿನ ಮೋತಿ ವೃತ್ತ, ಕಾಳಮ್ಮ ಬೀದಿ, ಸರ್ಕಾರಿ ಐಟಿಐ ಮೈದಾನ ಸೇರಿ ನಾನಾ ಕಡೆ ಪಟಾಕಿ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ನಾನಾ ರೀತಿಯ ಸಿಡಿಮದ್ದು ಹಾಗೂ ಮಣ್ಣಿನ ಹಣತೆಗಳನ್ನು ಕೊಂಡುಕೊಳ್ಳುವ ದೃಶ್ಯ ಕಂಡುಬಂತು. ಮನೆ ಮುಂದೆ, ಅಂಗಡಿಗಳ ಮುಂದೆ ತಳಿರು ತೋರಣ, ರಂಗೋಲಿ, ಬಾಳೆ ಕಂದು ಹಾಗೂ ಹೂವುಗಳಿಂದ ಅಲಂಕರಿಸಿದ್ದರು ಬಣ್ಣಬಣ್ಣದ ವಿದ್ಯುತ್ ದೀಪಗಳು ಗಮನ ಸೆಳೆದವು. ಮೊಬೈಲ್ ಅಂಗಡಿ, ದಿನಸಿ ಅಂಗಡಿ, ಬಟ್ಟೆ ಅಂಗಡಿ, ಜ್ಯೂವೆಲರ್ಸ್ ಸೇರಿ ಇತರ ಕಡೆ ಲಕ್ಷ್ಮೀ ಪೂಜೆ ನೆರವೇರಿಸಿ, ನಂತರ ಸಿಹಿ ಹಂಚುವ ಮೂಲಕ ದೀಪಾವಳಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಕೆಲವೆಡೆ ಪಟಾಕಿ ಸಿಡಿಸದೆ ಪರಿಸರಸ್ನೇಹಿ ದೀಪಾವಳಿ ಹಬ್ಬ ಆಚರಿಸಿ ಗಮನಸೆಳೆದರು.

    ಗೊಂದಲ ಮೂಡಿಸಿದ ಗ್ರಹಣ: ಈ ಬಾರಿ ದೀಪಾವಳಿ ಹಬ್ಬವು ಸೋಮವಾರ ಬಂದಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಮಂಗಳವಾರ ಗ್ರಹಣ ಕಾರಣದಿಂದ ಬುಧವಾರ ಆಚರಿಸಲಾಗುವುದು ಎಂದು ಹೇಳುತ್ತಿದ್ದಾರೆ. ಮಂಗಳವಾರ ಗ್ರಹಣ ಕಾರಣದಿಂದ ಸೋಮವಾರವೇ ಸೂಕ್ತ ಎಂಬುವುದು ಕೆಲವರ ಅಭಿಪ್ರಾಯವಾಗಿದೆ. ಹೀಗಾಗಿ, ಈ ಬಾರಿ ದೀಪಾವಳಿ ಹಬ್ಬದ ನಡುವೆ ಗ್ರಹಣ ಬಂದಿರುವುದರಿಂದ ಜನರೇ ಗೊಂದಲದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts