More

    ಬಳ್ಳಾರಿಯಲ್ಲಿ ಬೆಳಕಿನ ಹಬ್ಬ ಜೋರು; ರಾತ್ರಿಯಲ್ಲಿ ಮೊಳಗಿದ ಪಟಾಕಿ ಸದ್ದು

    ಬಳ್ಳಾರಿ: ನಗರ ಸೇರಿ ಜಿಲ್ಲಾದ್ಯಂತ ಸೋಮವಾರ ಮತ್ತು ಮಂಗಳವಾರ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಳೆಗಟ್ಟಿತ್ತು.
    ಕರೊನಾ ಕಾರಣದಿಂದ ಎರಡು ವರ್ಷದಿಂದ ಸಾಮೂಹಿಕ ಆಚರಣೆಗೆ ನಿರ್ಬಂಧ ಹೇರಿದ್ದರಿಂದ ಕಳೆಗುಂದಿದ್ದ ಹಬ್ಬ ಈ ಬಾರಿ ಸಂಭ್ರಮ ಮೂಡಿ ಬಂತು. ಮಂಗಳವಾರ ಅಮಾವಾಸ್ಯೆ ಇರುವ ಕಾರಣ ಬಹುತೇಕ ಜನರು ಸೋಮವಾರವೇ ಮನೆಯಲ್ಲಿ ಲಕ್ಮೀ ಪೂಜೆ ನೆರವೇರಿಸಿದರೆ, ಅಂಗಡಿಗಳು ಸೇರಿ ನಾನಾ ಕಡೆಯೂ ಸೋಮವಾರ ಲಕ್ಮೀ ಪೂಜೆ ನೆರವೇರಿಸಿದರು.

    ಪ್ರತಿಷ್ಠಾಪಿಸಿದ ಲಕ್ಷ್ಮೀ ದೇವಿಯನ್ನು ಫಲ-ಪುಷ್ಪಗಳಿಂದ ಅಲಂಕರಿಸಿ, ನೈವೇದ್ಯ ಸಮರ್ಪಿಸಿ, ಆರತಿ ಬೆಳಗೆ ಪೂಜೆ ಸಲ್ಲಿಸಲಾಯಿತು. ಅಂಗಡಿ, ಮನೆಗಳನ್ನು ತಳಿರು-ತೋರಣ, ಬಾಳೆದಿಂಡು, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ನರಕಚರ್ತುದರ್ಶಿ, ಸಂಜೆ ಲಕ್ಷ್ಮೀ ಪೂಜೆ ವೈಭವದಿಂದ ಜರುಗಿತು. ಭಕ್ತರು ಪ್ರಣತಿಯಲ್ಲಿ ದೀಪ ಹಚ್ಚಿಟ್ಟರೆ, ಕೆಲವರು ಮೇಣದ ಬತ್ತಿ ಬೆಳಗಿಸಿ ದೀಪಾವಳಿ ಆಚರಿಸಿದರು. ಮನೆಯಂಗಳದಲ್ಲಿ ರಂಗೋಲಿ ಮೈದಳೆದಿದ್ದವು.

    ಗಗನ ಬೆಳಗಿದ ಸಿಡಿಮದ್ದು : ಬಳ್ಳಾರಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಪೂಜೆ ವೇಳೆ ದುಬಾರಿ ಹಣದ ಪಟಾಕಿಗಳನ್ನು ಸಿಡಿಸಿ ಜನ ಸಂಭ್ರಮಿಸಿದರು. ಮಕ್ಕಳು, ಯುವಕರು ಹಾಗೂ ಹಿರಿಯರು ಕುಟುಂಬ ಸಮೇತ ಪೂಜೆಯಲ್ಲಿ ಪಾಲ್ಗೂಂಡರು. ವಿವಿಧ ಸಿಡಿಮದ್ದುಗಳು ಗಗನ ಬೆಳಗಿದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.

    ಭಕ್ತರ ಆಗಮನ ಕ್ಷೀಣ: ದೇಶಾದ್ಯಂತ ಮಂಗಳವಾರ ಸಂಜೆ ಸೂರ್ಯಗ್ರಹಣ ಸಂಭವಿಸಿದ್ದರಿಂದ ವಿವಿಧ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆ ಕ್ಷೀಣಿಸಿತ್ತು. ನಗರದ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಜನರ ಆಗಮನ ಕಡಿಮೆ ಇರುವುದು ಕಂಡು ಬಂತು. ಕೆಲವೆಡೆಯ ದೇವಸ್ಥಾನಗಳ ಬಾಗಿಲು ಮುಚ್ಚಿದ್ದು ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts