More

    ಬಳ್ಳಾರಿ ಜಿಲ್ಲೆಯಲ್ಲಿ ಬಾರದ ಮಳೆ, ಬಾಡುತ್ತಿದೆ ಬೆಳೆ

    ಬಳ್ಳಾರಿ: ಕಳೆದ ತಿಂಗಳು ಸ್ವಲ್ಪಮಟ್ಟಿಗೆ ಕರುಣೆ ತೋರಿದ ವರುಣ ನಂತರ ಮಾಯವಾಗಿದೆ. ಇದರಿಂದ ಒಂದೆಡೆ ಬಿತ್ತನೆ ಮಾಡಿದ ಬೆಳೆ ಬಾಡುತ್ತಿದ್ದರೆ, ಇನ್ನೊಂದೆಡೆ ರೋಗಬಾಧೆ ಕೂಡ ಹೆಚ್ಚಾಗಿದ್ದು ರೈತರು ಚಿಂತೆಗೀಡಾಗಿದ್ದಾರೆ.

    ಇದನ್ನೂ ಓದಿರಿ:ಮಳೆ ಕೊರತೆಯಿಂದ ಬೆಳೆ ಹಾಳು, ಪರಿಹಾರ ನೀಡುವಂತೆ ರೈತರ ಆಗ್ರಹ

    ಜಿಲ್ಲೆಯಲ್ಲಿ ಒಟ್ಟು 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿದ್ದು, ಕಳೆದ ಜೂನ್‌ನಲ್ಲಿ ಮಳೆರಾಯನ ಅವಕೃಪೆಯಿಂದಾಗಿ ಕೃಷಿ ಚಟುವಟಿಕೆ ಕುಂಠಿತಗೊಂಡಿತ್ತು.

    ನಂತರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದಾಗಿ ಶೇ.44.82 ಮಾತ್ರ ಬಿತ್ತನೆಯಾಗಿದೆ.

    ನೀರಾವರಿಗಿಂತ ಮಳೆಯಾಶ್ರಿತ ಪ್ರದೇಶದಲ್ಲಿ ಹೆಚ್ಚು ಬಿತ್ತನೆ ಆಗುತ್ತಿದೆ. ಮಳೆ ಇಲ್ಲದೆ ಇರುವುದರಿಂದ ಬೆಳೆಗಳು ಬಿಸಿಲಿಗೆ ಬಾಡುತ್ತಿವೆ. ಜು.15ರೊಳಗೆ ಜಿಲ್ಲೆಯಲ್ಲಿ 12,492 ಹೆಕ್ಟೇರ್ ಮಾತ್ರ ಬಿತ್ತನೆಯಾಗಿತ್ತು.

    ನಂತರದಲ್ಲಿ ಮಳೆ ಬಿದ್ದ ಕಾರಣ 77,938 ಹೆಕ್ಟೇರ್‌ವರೆಗೆ ಬಿತ್ತನೆಯಾಗಿದೆ.

    ಬಳ್ಳಾರಿ, ಕುರುಗೋಡಲ್ಲಿ ಕಡಿಮೆ

    ಬಳ್ಳಾರಿ ಹಾಗೂ ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ಅತಿಕಡಿಮೆ ಬಿತ್ತನೆಯಾಗಿದೆ.

    ಸಂಡೂರು ತಾಲೂಕಿನಲ್ಲಿ ಶೇ.68.83 ಬಿತ್ತನೆ ಪ್ರಗತಿ ಸಾಧಿಸಿದ್ದರೆ, ಬಳ್ಳಾರಿ ತಾಲೂಕಿನಲ್ಲಿ ಶೇ.9.15 ಹಾಗೂ ಕುರುಗೋಡು ಶೇ.9.10 ಮಾತ್ರ ಬಿತ್ತನೆ ಆಗಿದೆ.

    ಉಳಿದಂತೆ ಸಿರಗುಪ್ಪ ಶೇ.64.09, ಕಂಪ್ಲಿ ಶೇ.43.69 ರಷ್ಟಾಗಿದೆ. ಜಿಲ್ಲೆಯಲ್ಲಿ 33,489 ಹೆಕ್ಟೇರ್ ನೀರಾವರಿ ಹಾಗೂ 44,448 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.

    ಕೆನಾಲ್‌ಗೆ ನೀರು ಹರಿಸುವುದು ತಡವಾದ ಹಿನ್ನೆಲೆಯಲ್ಲಿ 85,100 ಹೆಕ್ಟೇರ್ ಪೈಕಿ ಕೇವಲ 24,846 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಆಗಿದೆ.

    ಉಳಿದಂತೆ ತೊಗರಿ, ಶೇಂಗಾ, ರಾಗಿ, ಜೋಳ, ಸೂರ್ಯಕಾಂತಿ ಬಿತ್ತನೆ ಕುಂಠಿತಗೊಂಡಿದೆ. ಮೆಕ್ಕೆಜೋಳ ಮಾತ್ರ ನಿರೀಕ್ಷೆಗೂ ಮೀರಿ ಹೆಚ್ಚಿನ ಬಿತ್ತನೆಯಾಗಿದೆ.

    15,291 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇತ್ತು. 16,357 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಶೇ.30 ಕೊರತೆ, ಕೃಷಿಕರಿಗೆ ಚಿಂತೆ

    ಜಿಲ್ಲೆಯಲ್ಲಿ ಸರಾಸರಿ ಶೇ.30 ಮಳೆ ಕೊರತೆ ಎದುರಾಗಿದೆ. ಕಳೆದ ಜನವರಿಯಿಂದ ಆ.10ರ ವರೆಗೆ ಜಿಲ್ಲೆಯಲ್ಲಿ 243 ಮಿಮೀ ಮಳೆ ಆಗಬೇಕಿತ್ತು. ಆದರೆ 169 ಮಿಮೀ ಮಾತ್ರ ಮಳೆಯಾಗಿದೆ.

    ಕಳೆದ ವರ್ಷ ಆಗಸ್ಟ್‌ವರೆಗೆ ಶೇ.33 ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿತ್ತು. 599 ಮಿಮೀ ವಾಡಿಕೆಗಿಂತ 795 ಮಿಮೀ ಮಳೆಯಾಗಿದ್ದರಿಂದ ಉತ್ತಮ ಬೆಳೆ ಬೆಳೆಯಲಾಗಿತ್ತು.

    ಪ್ರಸಕ್ತ ಸಾಲಿನಲ್ಲಿ ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ಶೇ.46, ಸಂಡೂರು ಶೇ.51, ಸಿರಗುಪ್ಪ ಶೇ.31, ಕುರುಗೋಡು ಶೇ.11 ಮಳೆ ಕೊರತೆ ಕಾಡುತ್ತಿದ್ದರೆ ಕಂಪ್ಲಿ ತಾಲೂಕಿನಲ್ಲಿ ಮಾತ್ರ ಶೇ.3 ಹೆಚ್ಚು ಮಳೆಯಾಗಿದೆ.

    ಆದರೂ ಬಿತ್ತನೆ ಪ್ರಮಾಣ ಮಾತ್ರ ಶೇ.50 ದಾಟಿಲ್ಲ.

    ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 1.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಈಗಾಗಲೇ ಶೇ.44.82 ಪ್ರಗತಿ ಸಾಧಿಸಲಾಗಿದೆ. ಉಳಿದಂತೆ ಆಗಸ್ಟ್ ಅಂತ್ಯದವರೆಗೆ ಬಿತ್ತನೆ ಕಾರ್ಯ ಮುಂದುವರಿಯಲಿದೆ.
    | ಡಾ.ಮಲ್ಲಿಕಾರ್ಜುನ ಜಂಟಿ ನಿರ್ದೇಶಕ, ಕೃಷಿ ಇಲಾಖೆ

    ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 1.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಈಗಾಗಲೇ ಶೇ.44.82 ಪ್ರಗತಿ ಸಾಧಿಸಲಾಗಿದೆ. ಉಳಿದಂತೆ ಆಗಸ್ಟ್ ಅಂತ್ಯದವರೆಗೆ ಬಿತ್ತನೆ ಕಾರ್ಯ ಮುಂದುವರಿಯಲಿದೆ.
    | ಡಾ.ಮಲ್ಲಿಕಾರ್ಜುನ ಜಂಟಿ ನಿರ್ದೇಶಕ, ಕೃಷಿ ಇಲಾಖೆ,

    ಮಳೆ ಕೊರತೆ ಯಿಂದಾಗಿ 4 ಎಕರೆ ಮೆಕ್ಕೆಜೋಳ ನಾಶ ಮಾಡಲಾಗುತ್ತಿದೆ. ಈ ರೀತಿ ಬಹಳ ರೈತರು ಬೆಳೆ ಹರಗುತ್ತಿದ್ದಾರೆ. ಹಿಂದೆ ಅಕಾಲಿಕ ಮಳೆ ಮತ್ತು ಇದೀಗ ಮಳೆ ಕೊರತೆಯಿಂದ ಬೆಳೆ ಕಳೆದುಕೊಳ್ಳುವಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು.
    | ಕೆ.ರಾಮನಗೌಡ ರೈತ, ಚಿಗಟೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts