More

    ನ್ಯಾಯಾಲಯ ಕಟ್ಟಡವನ್ನು ಪಾಲಿಕೆಗೆ ಹಸ್ತಾಂತರಿಸಲು ಮಾಜಿ ಎಂಎಲ್ಸಿ ಕೆ.ಸಿ.ಕೊಂಡಯ್ಯ ಮನವಿ

    ಬಳ್ಳಾರಿ: ಹಳೆಯ ನ್ಯಾಯಾಲಯ ಕಟ್ಟಡವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಎಂದು ಮಾಜಿ ಎಂಎಲ್ಸಿ ಕೆ.ಸಿ.ಕೊಂಡಯ್ಯ ಆಗ್ರಹಿಸಿದ್ದಾರೆ.

    ಮುಖ್ಯಮಂತ್ರಿಗೆ, ಸಚಿವರಿಗೆ, ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದು, ಬಳ್ಳಾರಿ ನಗರಸಭೆಯು 1867 (155 ವರ್ಷಗಳ ಹಿಂದೆ)ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 28 ಸೆಪ್ಟೆಂಬರ್ 2004 ರಂದು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿತು. ನಗರದ ಜನಸಂಖ್ಯೆ 2001ರ ಜನಗಣತಿ ಪ್ರಕಾರ 3.17 ಲಕ್ಷ ಹಾಗೂ 2011ರ ಜನಗಣತಿ ಪ್ರಕಾರ 4.1 ಲಕ್ಷ ಜನಸಂಖ್ಯೆ ಇದ್ದು, ಇಂದಿನ ಜನಸಂಖ್ಯೆ ಸುಮಾರು 5-6 ಲಕ್ಷವಾಗಿದೆ. ನಗರದ ವಿಸ್ತೀರ್ಣ 81.95 ಚದರ ಕಿ.ಮೀ ಇರುತ್ತದೆ. ಆಂಧ್ರದ ಗಡಿ ಜಿಲ್ಲೆಗಳಾದ ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳು ಬಳ್ಳಾರಿಗೆ ಹೊಂದಿಕೊಂಡಿದ್ದು, ಈ ಜಿಲ್ಲೆಗಳಿಂದ ನಿತ್ಯ ಸಾವಿರಾರು ಜನರು ತಮ್ಮ ದೈನಂದಿನ ವ್ಯವಹಾರ, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ವ್ಯಾಪಾರಕ್ಕಾಗಿ ಬಳ್ಳಾರಿಗೆ ಬರುತ್ತಾರೆ. ಜಿಂದಾಲ್ ಉಕ್ಕು ಕಾರ್ಖಾನೆ ಸೇರಿದಂತೆ ಹಲವಾರು ಕಾರ್ಖಾನೆಗಳು ಬಳ್ಳಾರಿಯ ಸುತ್ತ ಇದ್ದು, ಬಹುಪಾಲು ಜನರು ಬಳ್ಳಾರಿಯಲ್ಲೆ ವಾಸವಾಗಿದ್ದಾರೆ. ಇವರಿಗೆಲ್ಲ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ಮಹಾನಗರ ಪಾಲಿಕೆಯದಾಗಿರುತ್ತದೆ.

    ಮಹಾನಗರ ಪಾಲಿಕೆಗೆ ತನ್ನದೇ ಆದ ಸ್ವಂತ ಕಟ್ಟಡ ಇಲ್ಲ. ಎಸ್‌ಡಿಎಂಟಿ ಯೋಜನೆ ಅಡಿ ವಾಣಿಜ್ಯ ಸಂಕೀರ್ಣವಾಗಿ ಕಟ್ಟಿದ ಕಟ್ಟಡದಲ್ಲೆ ಆಡಳಿತ ಕಚೇರಿ ಇದೆ. ಇದು ನಗರದ ಹೃದಯ ಭಾಗದಲ್ಲಿದ್ದರೂ ಅತ್ಯಂತ ಚಿಕ್ಕದಾಗಿದೆ. ಆದ್ದರಿಂದ, ಮುಂದಿನ 10 ವರ್ಷಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ಕಚೇರಿಯ ವಿಸ್ತರಣೆ ಮಾಡುವ ಅಗತ್ಯತೆ ಇದೆ. ಹೀಗಾಗಿ, ಈಗಿರುವ ಜಿಲ್ಲಾ ನ್ಯಾಯಾಲಯವು ತಾಳೂರು ರಸ್ತೆಯಲ್ಲಿ ರೂ.150.00 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿತವಾದ ಸುಸಜ್ಜಿತ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳುವುದರಿಂದ, ಹಳೆಯ ನ್ಯಾಯಾಲಯ ಆವರಣದಲ್ಲಿ ಹೆಚ್ಚುವರಿ ಕಟ್ಟಡಗಳನ್ನು ಕಟ್ಟಿಸಲು ಅನುಕೂಲವಾಗುತ್ತದೆ. ಬಳ್ಳಾರಿ ನಗರವು ವೇಗವಾಗಿ ಬೆಳೆಯುತ್ತಿರುವುದರಿಂದ ಮಹಾನಗರ ಪಾಲಿಕೆಗೆ ವಿಶಾಲವಾದ ಕಟ್ಟಡದ ಅಗತ್ಯತೆ ಇದೆ. ಹಳೇ ನ್ಯಾಯಾಲಯ ಅವರಣವು ನಗರದ ಹೃದಯ ಭಾಗದಲ್ಲಿದ್ದು, ಹಳೇ ನ್ಯಾಯಾಲಯದ ಕಟ್ಟಡವನ್ನು ಮಹಾನಗರಪಾಲಿಕೆಗೆ ಹಸ್ತಾಂತರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುವುದು ಎಂದು ಮನವಿ ಮಾಡಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts