More

    ಮೆಣಸಿನಕಾಯಿ ಬೀಜ ಖರೀದಿಗೆ ನೂಕುನುಗ್ಗಲು: ಬಳ್ಳಾರಿ ತೋಟಗಾರಿಕೆ ಇಲಾಖೆ ಕಚೇರಿ ಗೇಟ್ ಬೀಗ ಮುರಿದ ರೈತರು

    ಬಳ್ಳಾರಿ: ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ ಮುಂದುವರಿದಿದೆ. ಸೋಮವಾರ ಬೆಳಗ್ಗೆಯೇ ನಗರದ ತೋಟಗಾರಿಕೆ ಇಲಾಖೆ ಕಚೇರಿಗೆ ಬಂದ ನೂರಾರು ರೈತರು ಕಚೇರಿ ಮುಂದಿನ ಗೇಟ್ ಬೀಗ ಮುರಿದು ಒಳನುಗ್ಗಿದರು. ಸರದಿಯಲ್ಲಿ ನಿಲ್ಲುವಾಗ ನೂಕುನುಗ್ಗಲು ಉಂಟಾಗಿ ರೈತ ಮಹಿಳೆ ಅಸ್ವಸ್ಥಗೊಂಡರು.

    ಅಧಿಕಾರಿಗಳು ಬರುವುದಕ್ಕೂ ಮುಂಚೆಯೇ ನೂರಾರು ಸಂಖ್ಯೆಯಲ್ಲಿ ರೈತರು ಸೇರಿದ್ದರು. ಸ್ಥಳಕ್ಕೆ ಬಂದ ಪೊಲೀಸರು, ಮೆಣಸಿನಕಾಯಿ ಬಿತ್ತನೆ ಬೀಜ ಖಾಲಿಯಾಗಿದ್ದು, ದಯವಿಟ್ಟು ಎಲ್ಲರೂ ಹೋಗಿ ಎಂದು ಮನವಿ ಮಾಡಿದರು. ಆದರೆ, ರೈತರು ಕ್ಯಾರೇ ಎನ್ನಲಿಲ್ಲ. ನೂಕುನುಗ್ಗಲು ಉಂಟಾಗಿ ರೈತ ಮಹಿಳೆ ಅಸ್ವಸ್ಥಗೊಂಡರು. ಸ್ವಲ್ಪ ಹೊತ್ತಿನ ಬಳಿಕ ಅವರು ಚೇತರಿಸಿಕೊಂಡರು.

    ಸ್ಥಳದಲ್ಲಿ ಬಿಗುವಿನ ವಾತವಾರಣ ಏರ್ಪಡುತ್ತಿದ್ದಂತೆಯೆ ಧಾವಿಸಿದ ಕೃಷಿ ಅಧಿಕಾರಿಗಳಿಗೆ ರೈತರು ಮುತ್ತಿಗೆ ಹಾಕಿದರು. ಈ ವೇಳೆ ಕೃಷಿ ಮಾತನಾಡಿದ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ಬೋಗಿ, ಸಿಜೆಂಟಾ ಕಂಪನಿಯ 5503, 2043 ತಳಿಯ ಬೀಜಗಳು ಖಾಲಿಯಾಗಿವೆ ಎಂದು ಕಂಪನಿಯವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಕೂಡ ಹೊರಡಿಸಿದ್ದೇವೆ. ಇದೇ ಕಂಪನಿಯ ಪರ್ಯಾಯ ತಳಿ ಹಾಗೂ ಇಳುವರಿ ಹೆಚ್ಚಿರುವ ಇತರ ತಳಿಯ ಬೀಜಗಳನ್ನು ತೆಗೆದುಕೊಳ್ಳಲು ರೈತರು ಮುಂದಾಗಬೇಕು ಎಂದರು.

    ಕಳೆದ ವಾರ ಸೋಮವಾರ ಬನ್ನಿ, ಬಿತ್ತನೆ ಬೀಜ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಿರಿ. ಹೀಗಾಗಿ ಬೇರೆ ಊರುಗಳಿಂದ ಇಲ್ಲಿಗೆ ಬಂದಿದ್ದೇವೆ. ಈಗ ಮೆಣಸಿನಕಾಯಿ ಬೀಜ ಇಲ್ಲ ಎಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಹೊಸ ತಳಿಯ ಬೀಜ ಖರೀದಿಸದೆ ಸ್ಥಳದಿಂದ ಹೊರಟು ಹೋದರು. ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮೆಣಸಿನಕಾಯಿ ಬಿತ್ತನೆ ಬೀಜದ ಸಲುವಾಗಿ ರೈತರು ಮತ್ತು ಅಧಿಕಾರಿಗಳ ನಡುವೆ ಹಗ್ಗಾಜಗ್ಗಾಟ ನಡೆಯುತ್ತಿದ್ದು, ಸಮಸ್ಯೆ ಇತ್ಯರ್ಥವಾಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts