More

    ಪ್ರಖರ ಬಿಸಿಲಿಗೆ ಜನರು ಹೈರಾಣ

    40 ಡಿಗ್ರಿಗೂ ಅಧಿಕ ಉಷ್ಣಾಂಶ > ಮನೆಯಿಂದ ಹೊರಬರಲು ಹೆದರಿಕೆ

    ತಾಳೂರು ಎಸ್.ಎರ‌್ರಿಸ್ವಾಮಿ

    ಬಳ್ಳಾರಿ: ಕೆಲ ದಿನಗಳಿಂದ ಗಣಿನಾಡಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ.
    ಕಳೆದ ಎರಡು ವರ್ಷ ಮಾರ್ಚ್‌ನಲ್ಲಿ ಬಿಸಿಲಿನ ಪ್ರಖರತೆ ಇಷ್ಟೊಂದು ಇರಲಿಲ್ಲ. ಆದರೆ, ಈ ವರ್ಷ ಒಂದೂವರೆಯಿಂದ ಎರಡು ಡಿಗ್ರಿಯಷ್ಟು ಉಷ್ಣಾಂಶದ ಪ್ರಮಾಣ ಹೆಚ್ಚಿದೆ.

    ಪ್ರಖರ ಬಿಸಿಲಿಗೆ ಜನರು ಹೈರಾಣ

    ಬಿಸಿಲಿನ ತಾಪ, ಧಗೆಯಿಂದಾಗಿ ಜನರು ಹೈರಾಣಗಿದ್ದು ಫ್ಯಾನ್, ಎಸಿಗಳ ಮೊರೆ ಹೋಗಿದ್ದಾರೆ. ವಿದ್ಯುತ್ ಕಡಿತಗೊಂಡರೆ ಮನೆಯಲ್ಲಿ ಕುಳಿತುಕೊಳ್ಳಲೂ ಆಗದಷ್ಟು ಸೆಕೆ ಇದೆ. ನಗರ, ಗ್ರಾಮಾಂತರ ವ್ಯಾಪ್ತಿಯಲ್ಲಿ ದುರಸ್ತಿ ಹಾಗೂ ಇತರೆ ಕಾರಣಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸ್ಥಗಿತ ಮಾಡುತ್ತಿರುವುದು ಜನರನ್ನು ಸುಸ್ತು ಮಾಡುತ್ತಿದೆ. ಮಕ್ಕಳು, ಯುವಕರು ನದಿ, ಕೆರೆಗಳಲ್ಲಿ ಈಜಾಡುವ ಮೂಲಕ ದಣಿವಾರಿಸಿಕೊಳ್ಳುತ್ತಿದ್ದಾರೆ.
    ಒಂದೆಡೆ ಬಿಸಿಲಿನ ತಾಪ ಹೆಚ್ಚುತ್ತಿದ್ದರೆ, ನೀರಿನ ಅಭಾವವೂ ಮತ್ತೊಂದು ಸಮಸ್ಯೆ ಸೃಷ್ಟಿಸುತ್ತಿದೆ. ಬೇಸಿಗೆಯಲ್ಲಿ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಕೊಳೆವೆಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಕೆಲವು ಕಡೆಗಳಲ್ಲಿ ನೀರು ಬತ್ತಿ ಹೋಗಿದ್ದು ಸಮಸ್ಯೆ ಉಲ್ಬಣಗೊಂಡಿದೆ. ಹೊಸ ಕೊಳವೆಬಾವಿಗಳನ್ನು ಕೊರೆದರೂ ನೀರು ಸಿಗುತ್ತಿಲ್ಲ. ಬಳ್ಳಾರಿಯಲ್ಲಿ ಕೆಲ ವರ್ಷಗಳ ಹಿಂದೆ 200 ಅಡಿಗಳಿಗೆ ಸಿಗುತ್ತಿದ್ದ ಅಂತರ್ಜಲ, ಸದ್ಯ 300 ರಿಂದ 350 ಅಡಿ ಕೊರೆದರೂ ನೀರು ಚಿಮ್ಮುತ್ತಿಲ್ಲ.


    ತಾಪಮಾನ ಏರುತ್ತಿರುವ ಪರಿಣಾಮವಾಗಿ ಜಿಲ್ಲಾದ್ಯಂತ ಸಂಘ ಸಂಸ್ಥೆಗಳು ಅರವಟಿಗೆ, ನೆರಳಿನ ವ್ಯವಸ್ಥೆ ಮಾಡಿವೆ. ಕೆಲ ಸಂಸ್ಥೆಗಳು ಉಚಿತವಾಗಿ ಟ್ಯಾಂಕರ್ ನೀರು ಪೂರೈಕೆ ಮಾಡುವ ಮೂಲಕ ಜನರ ಸೇವೆಯಲ್ಲಿ ತೊಡಗಿವೆ. ಜಾನುವಾರುಗಳಿಗೂ ನೀರಿನ ವ್ಯವಸ್ಥೆ ಮಾಡುತ್ತಿವೆ. ರಸ್ತೆ ಬದಿಗಳಲ್ಲಿ ಕಬ್ಬಿನ ಹಾಲು, ಕಲ್ಲಂಗಡಿ, ಎಳನೀರು,ಹಣ್ಣಿನ ರಸದ ಅಂಗಡಿಗಳು ತಲೆ ಎತ್ತಿದ್ದು, ಬೇಡಿಕೆ ಹೆಚ್ಚಿದೆ.

    ಪ್ರಖರ ಬಿಸಿಲಿಗೆ ಜನರು ಹೈರಾಣ
    ಬಳ್ಳಾರಿಯಲ್ಲಿ ಬಿಸಿಲಿನ ತಾಪಕ್ಕೆ ವ್ಯಕ್ತಿಯೊಬ್ಬರು ಪತ್ರಿಕೆಯಿಂದ ತಲೆಗೆ ರಕ್ಷಣೆ ಪಡೆದಿರುವುದು.

    ಉರಿ, ಕಿಡ್ನಿಸ್ಟೋನ್ ಪ್ರಾಬ್ಲಂ

    ಜಿಲ್ಲೆಯಲ್ಲಿ ವಿಪರೀತ ಬಿಸಿಲಿನಿಂದ ಹಲವು ಜನರಿಗೆ ಕಿಡ್ನಿ ಸ್ಟೋನ್, ಮೂತ್ರ ಮಾಡುವಾಗ ಉರಿಯುವುದು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರು, ಹಿರಿಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಿದೆ. ಬಿಸಿಲಿನಲ್ಲಿ ಓಡಾಟ ಹಾಗೂ ಕಡಿಮೆ ನೀರು ಕುಡಿಯುವುದರಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

    ಬಿಸಿಲು ಹೆಚ್ಚಿದ್ದು, ಮಕ್ಕಳು ಹಾಗೂ ಹಿರಿಯರು ಬೆಳಗ್ಗೆ 11 ಗಂಟೆ ನಂತರ ಹೊರಗಡೆ ಬಾರದಿರು ವುದು ಒಳ್ಳೆಯದು. ಪ್ರತಿಯೊಬ್ಬರೂ ನಿತ್ಯ ನಾಲ್ಕರಿಂದ ಐದು ಲೀಟರ್ ನೀರು ಕುಡಿಯಬೇಕು. ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ಒಆರ್‌ಎಸ್ ಪೊಟ್ಟಣಗಳ ದಾಸ್ತಾನು ಮಾಡಲಾಗಿದೆ.
    ಡಾ.ವೈ.ರಮೇಶ ಬಾಬು ಡಿಎಚ್‌ಒ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts