More

    2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆಕೈಗೊಳ್ಳಲು ಜಿಪಂ ಸಿಇಒ ಜಿ.ಲಿಂಗಮೂರ್ತಿ ಸೂಚನೆ

    ಬಳ್ಳಾರಿ: ಬರುವ 2023ರ ವಿಧಾನಸಭೆ ಚುನಾವಣೆ ನಿಮಿತ್ತ ಜಿಲ್ಲಾ ಮಟ್ಟದ ಸಮಿತಿ ಹಾಗೂ ತಾಲೂಕು ಹಂತದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರಲ್ಲಿ ನೈತಿಕ ಮತದಾನದ ಕುರಿತು ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಲಿಂಗಮೂರ್ತಿ ಹೇಳಿದರು.

    ನಗರದ ಜಿಪಂನ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ 2023ರ ವಿಧಾನಸಭೆ ಸುಗಮ ಚುನಾವಣೆಯ ಸಂಬಂಧ ಸ್ವೀಪ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಬುಧವಾರ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ಮಾತನಾಡಿದರು.

    ಚುನಾವಣೆಗೆ ಸಂಬಂಧಿಸಿದ ಸ್ವೀಪ್ ಚಟುವಟಿಕೆಗಳನ್ನು ಜಿಲ್ಲಾದ್ಯಂತ ಸಮರ್ಪಕವಾಗಿ ಹಮ್ಮಿಕೊಂಡು ಮಾಹಿತಿ ಹಾಗೂ ಪತ್ರಿಕಾ ತುಣುಕುಗಳನ್ನು, ಛಾಯಾಚಿತ್ರ ವಿಡಿಯೋಗಳನ್ನು ಜಿಪಂ ಕಚೇರಿಗೆ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಸಮಿತಿ, ತಾಲೂಕು ಹಂತದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ, ತಾಲೂಕು ಹಂತದ ಸ್ವೀಪ್ ಸಮಿತಿ ಮತ್ತು ಗ್ರಾಮ ಮಟ್ಟದ ಸ್ವೀಪ್ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

    ಡಿಡಿಪಿಐ ಹಂತದಲ್ಲಿ ಇನ್ನು ಅನುದಾನಿತ/ಖಾಸಗಿ ಶಾಲೆಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ಗಳನ್ನು ರಚನೆ ಮಾಡಿ ಮಾಹಿತಿ ಸಲ್ಲಿಸಿಲ್ಲ. ಈ ವರ್ಷವೂ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಚುನಾವಣಾ ಆಯೋಗದಿಂದ ಕಳುಹಿಸಿದ ಸುತ್ತೋಲೆಯ ಪ್ರಕಾರ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
    ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಾಕ್ಷರತಾ ಕ್ಲಬ್ ರಚನೆ ಕಡ್ಡಾಯ
    ಚುನಾವಣೆಗಳಲ್ಲಿ ಮತದಾನ ಮಾಡುವ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಚುನಾವಣೆಗೆ ಸಂಬಂಧಿಸಿದಂತೆ ಸಂಜ್ಞಾ ಭಾಷಿಕರು ಹಾಗೂ ಚುನಾವಣಾ ಸಹಾಯಕರ ಪಟ್ಟಿಯನ್ನು ಸಲ್ಲಿಸಬೇಕು. ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜು ಹಂತದಲ್ಲಿ ಮತ್ತು ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಹಂತದಲ್ಲಿ ಪ್ರತಿಯೊಂದು ಶಾಲಾ-ಕಾಲೇಜು ಹಂತದಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ರಚನೆ ಮಾಡುವುದು ಕಡ್ಡಾಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಕಳುಹಿಸಿದ ಸ್ಪ್ರೇಡ್‌ಶಿಟ್‌ಗಳನ್ನು ಶೀಘ್ರದಲ್ಲಿ ಭರ್ತಿ ಮಾಡಿ ಮಾಹಿತಿಯನ್ನು ಜಿಪಂ ಕಚೇರಿಗೆ ಕಳುಹಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts