More

    ಬೆಳಗಾವಿಯಲ್ಲೊಬ್ಬ ಭಜರಂಗಿ ಭಾಯಿಜಾನ್!

    ಬೆಳಗಾವಿ: ಮಾತು ಬಾರದ ಬಾಲಕಿಯೊಬ್ಬಳನ್ನು ನೆರೆಯ ಪಾಕಿಸ್ತಾನಕ್ಕೆ ಸೇರಿಸಲು ಹರ ಸಾಹಸಪಡುವ ಭಾವುಕ ಕಥಾನಕ ಒಳಗೊಂಡಿದ್ದ ‘ಭಜರಂಗಿ ಭಾಯಿಜಾನ್’ ಹಿಂದಿ ಸಿನಿಮಾ ಸಿನಿಪ್ರೇಮಿಗಳ ಮನಗೆದ್ದು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ನಟ ಸಲ್ಮಾನ್‌ಖಾನ್ ರೀಲ್‌ನಲ್ಲಿ ಮಾಡಿದ್ದ ಸಾಹಸವನ್ನು ಬೆಳಗಾವಿ ಸಮೀಪದ ಕಾಕತಿ ಗ್ರಾಮದ ಯುವಕನೊಬ್ಬ ರಿಯಲ್ ಆಗಿಯೇ ಮಾಡಿದ್ದಾನೆ.

    ಮಾತು ಬಾರದ ನೇಪಾಳಿ ಯುವಕನನ್ನು ಆತನ ಸ್ವರಾಷ್ಟ್ರಕ್ಕೆ ಸೇರಿಸುವ ಮೂಲಕ ವಿನಾಯಕ ಕೇಸರಕರ್ ಸುದ್ದಿಯಾಗಿದ್ದಾನೆ. ನೇಪಾಳದ ಆ ಯುವಕನ ಹೆಸರು ಏನೆಂಬುದು ಗೊತ್ತಿಲ್ಲ. ಕೇಳಿ ತಿಳಿದುಕೊಳ್ಳೋಣವೆಂದರೆ, ಆತನಿಗೆ ಮಾತು ಬರುವುದಿಲ್ಲ. ಕರ್ನಾಟಕಕ್ಕೆ ಆತ ಹೇಗೆ ಬಂದ ಎಂಬುದು ಕೂಡ ನಿಗೂಢ. ಅನಕ್ಷರಸ್ಥನಾಗಿರುವ ಸುಮಾರು 32 ವರ್ಷದ ಆ ಯುವಕ ಡಿಸೆಂಬರ್ 31ರಂದು ಮಧ್ಯಾಹ್ನ 2 ಗಂಟೆಗೆ ಬೆಳಗಾವಿ ಹೊರವಲಯದ ದಾಬಾವೊಂದರ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ದಾರಿಯಲ್ಲಿ ನಡೆದು ನಡೆದು ನಿತ್ರಾಣವಾಗಿದ್ದ ಈ ನೇಪಾಳಿಯನ್ನು ಗಮನಿಸಿ ಆತನಿಗೆ ಪ್ರಕಾಕತಿ ಗ್ರಾಮದ ಯುವಕ ವಿನಾಯಕ ಕೇಸರಕರ್ ಪ್ರಥಮೋಪಚಾರ ಮಾಡಿದ್ದಾನೆ.

    ಮನೆಗೆ ಕರೆತಂದು ಉಪಚಾರ: ರಸ್ತೆ ಪಕ್ಕ ಬಿದ್ದಿದ್ದ ನೇಪಾಳಿಯನ್ನು ಮಾತನಾಡಿಸಲು ಹೋದರೆ ಆತ ಮಾತನಾಡಿಲ್ಲ. ಆಗ ಆತನಿಗೆ ನೀರು ಕುಡಿಸಿ ಅಕ್ಕ-ಪಕ್ಕದವರ ಸಹಾಯದಿಂದ ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಮನೆಯ ಒಂದು ಕೋಣೆಯಲ್ಲಿರಿಸಿ ಸ್ನಾನ ಮಾಡಿಸಿ, ವೈದ್ಯರಿಂದ ಉಪಚರಿಸಿದ್ದಾನೆ. ನೋಡಲು ನೇಪಾಳಿ ತರಹ ಕಂಡದ್ದರಿಂದ ಮೊಬೈಲ್‌ನಲ್ಲಿ ನೇಪಾಳ ದೇಶದ ಕೆಲ ಚಿತ್ರಗಳನ್ನು ತೋರಿಸಿದ್ದಾನೆ. ದೇವಸ್ಥಾನಗಳ ಚಿತ್ರ ನೋಡಿದ ನೇಪಾಳಿ, ನಮ್ಮ ದೇವರು, ನಮ್ಮ ದೇಶ ಎಂಬಂತೆ ಸನ್ನೆ ಮಾಡಿದ್ದಾನೆ. ಈತ ನೇಪಾಳದವನೇ ಎಂಬ ತೀರ್ಮಾನಕ್ಕೆ ಬಂದ ವಿನಾಯಕ, ಆತನನ್ನು ನೇಪಾಳಕ್ಕೆ ಸೇರಿಸುವ ಪ್ರಯತ್ನಕ್ಕೆ ಕೈ ಹಾಕುತ್ತಾನೆ.

    ಬೆಳಗಾವಿ ಟು ದೆಹಲಿ ಪ್ರಯಾಣ: ದೆಹಲಿಯಲ್ಲಿರುವ ನೇಪಾಳದ ತನ್ನ ಸ್ನೇಹಿತ ಆಶೀಸ್ ಎಂಬಾತನಿಗೆ ಕರೆ ಮಾಡಿದ ವಿನಾಯಕ, ಬೆಳಗಾವಿಯಿಂದ ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತಿದ್ದೇನೆ. ಅವನನ್ನು ನೇಪಾಳದ ಗಡಿವರೆಗೆ ಮುಟ್ಟಿಸಿ, ಸಾಧ್ಯವಾದರೆ ಆತನ ಮನೆಗೆ ಮುಟ್ಟಿಸುವ ಕೆಲಸ ಮಾಡು ಎಂದು ಮನವಿ ಮಾಡುತ್ತಾನೆ.

    ಜ. 1ರಂದು ಬೆಳಗಾವಿಯಿಂದ ಹೊರಡುವ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲ್‌ನಲ್ಲಿ ನೇಪಾಳಿಯ ಮೂಗ ಯುವಕನನ್ನು ಕಳುಹಿಸಿಕೊಡುತ್ತಾನೆ. ಎರಡು ದಿನಗಳ ನಂತರ ಜ. 3ರಂದು ದೆಹಲಿ ತಲುಪಿದ ನೇಪಾಳಿಯನ್ನು ಬರಮಾಡಿಕೊಂಡ ಆಶೀಸ್, ನೇಪಾಳದ ಗಡಿಯತ್ತ ತೆರಳುತ್ತಾನೆ. ಜ. 4ರಂದು ಬೆಳಗ್ಗೆ 7.30ಕ್ಕೆ ನೇಪಾಳ ಗಡಿ ತಲುಪಿಸಿ, ಅಲ್ಲಿನ ಪೊಲೀಸರಿಗೆ ಒಪ್ಪಿಸುತ್ತಾನೆ.ಪೋಲಿಸರು ಎನ್‌ಜಿಒ ಮೂಲಕ ನೇಪಾಳಿಯನ್ನು ಮೂಗರ ಕೇಂದ್ರದಲ್ಲಿರಿಸಿದ್ದು, ಆತನನ್ನು ಕುಟುಂಬಕ್ಕೆ ಒಪ್ಪಿಸುವ ಭರವಸೆ ನೀಡಿದ್ದಾರೆ. ಮಾತು ಬಾರದ ಅನ್ಯದೇಸಿ ಯುವಕನ್ನು ಆತನ ರಾಷ್ಟ್ರಕ್ಕೆ ಕಳುಹಿಸಿದ ಕಾಕತಿಯ ವಿನಾಯಕನನ್ನು ಸ್ಥಳೀಯರು ಪ್ರೀತಿಯಿಂದ ‘ಭಜರಂಗಿ ಭಾಯಿಜಾನ್’ ಎಂದು ಕರೆಯುತ್ತಿದ್ದಾರೆ.

    | ಜಿತೇಂದ್ರ ಕಾಂಬಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts