More

    ಸೈಕ್ಲಿಂಗ್ ಸಿಸ್ಟರ್ಸ್! ಬೆಳಗಾವಿಯ ಪೂಜಾ ಮತ್ತು ಭಕ್ತಿ ಯಶೋಗಾಥೆ

    ಇಮಾಮಹುಸೇನ್ ಗೂಡುನವರ ಬೆಳಗಾವಿ

    (‘ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತಿದೆ. ಮಹಿಳೆಯರ ಹೆಗ್ಗಳಿಕೆ ಈಗ ಕಲಿಕೆಗೆ ಸೀಮಿತವಾಗಿ ಉಳಿದಿಲ್ಲ. ಹೆಣ್ಣು ಮನಸ್ಸು ಮಾಡಿದರೆ ಎಲ್ಲ ಕ್ಷೇತ್ರಗಳಲ್ಲೂ ಸಾಧಿಸಬಲ್ಲಳು ಎಂಬುದನ್ನು ಈಗಾಗಲೇ ಬಹಳಷ್ಟು ಮಹಿಳೆಯರು ರುಜುವಾತು ಪಡಿಸಿದ್ದಾರೆ. ಆ ಸಾಲಿಗೆ ಸೇರುವವರಲ್ಲಿ ಬೆಳಗಾವಿಯ ಈ ಸಹೋದರಿಯರದು ಲೇಟೆಸ್ಟ್ ಉದಾಹರಣೆ.)

    ಜಿಮ್ೆ ಹೋಗಿ ವರ್ಕೌಟ್ ಮಾಡುವುದು, ಪ್ರತಿದಿನ ಸೈಕ್ಲಿಂಗ್ ಮಾಡುವುದು ಮುಂತಾದವು ಇತ್ತೀಚೆಗೆ ಯುವಜನರ ಫೇವರಿಟ್ ಕಸರತ್ತುಗಳು. ಓದುವುದನ್ನು ಬಿಟ್ಟರೂ ಬಿಟ್ಟಾರು, ಈ ದೈಹಿಕ ವ್ಯಾಯಾಮಗಳನ್ನು ಮಾತ್ರ ಬಿಡುವುದಿಲ್ಲ. ಆಕರ್ಷಕ ಅಂಗಸೌಷ್ಟವ, ಉತ್ತಮ ಆರೋಗ್ಯ- ಇವೇ ಈ ‘ವ್ಯಾಮೋಹ’ದ ಹಿಂದಿರುವ ಉದ್ದೇಶಗಳು. ಅದು ತಪ್ಪೂ ಅಲ್ಲ. ಇಂತಹ ಯುವಜನರ ಮಧ್ಯೆಯೇ ಈಗ ಗಡಿನಾಡು ಬೆಳಗಾವಿಯ ಪೂಜಾ ಮತ್ತು ಭಕ್ತಿ ಹೆಸರಿನ ಯುವ ಸಹೋದರಿಯರು ಸೈಕ್ಲಿಂಗ್​ನಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಈ ಅವಳಿ ಸಹೋದರಿಯರು ರಾಷ್ಟ್ರ ಮತ್ತು ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಕೆಲವು ವರ್ಷಗಳಿಂದ ಮಿಂಚುತ್ತಿದ್ದಾರೆ.

    ಶಾಲಾ ಹಂತದಿಂದಲೇ ಸಾಧನೆ: ನಾಲ್ಕನೇ ತರಗತಿಯಿಂದ ನಿತ್ಯವೂ ಸೈಕಲ್​ನಲ್ಲೇ ಶಾಲೆಗೆ ಹೋಗುತ್ತಿದ್ದೆವು. ಶಾಲೆ, ಕಾಲೇಜ್ ಹಂತದಲ್ಲಿ ಆಯೋಜಿಸುತ್ತಿದ್ದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆಲ್ಲುತ್ತ ಬಂದಿದ್ದೆವು. ಈ ಮಧ್ಯೆ, ಪಿಯುಸಿ ಹಂತದಲ್ಲಿ ಸೈಕ್ಲಿಂಗ್ ನಮ್ಮನ್ನು ಬಹುವಾಗಿ ಸೆಳೆಯಿತು. ತರಬೇತುದಾರ ಎಂ.ಪಿ. ಮರನೂರ ಅವರು ಮಾರ್ಗದರ್ಶನ ನೀಡಿದರು. ಇದರ ಫಲವಾಗಿ ಇಂದು ರಾಷ್ಟ್ರ, ರಾಜ್ಯಮಟ್ಟದ ಸೈಕ್ಲಿಂಗ್ ಟೂರ್ನಿಗಳಲ್ಲಿ ಸ್ಪರ್ಧಿಸುತ್ತಿದ್ದೇವೆ ಎನ್ನುತ್ತಾರೆ ಈ ಸಹೋದರಿಯರು.

    ಸಾಧನೆಯ ಪಥ: 2017ರಲ್ಲಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಜರುಗಿದ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪೂಜಾ ಮತ್ತು ಭಕ್ತಿ ಕಂಚಿನ ಪದಕ ಗಳಿಸಿದ್ದಾರೆ. 2018ರಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ವಿಭಾಗದ ಸೈಕ್ಲಿಂಗ್​ನಲ್ಲಿ ಪೂಜಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಭಕ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 2017ರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕ್ರಮವಾಗಿ 5 ಮತ್ತು 6ನೇ ಸ್ಥಾನ ಗಳಿಸಿದ ಸಹೋದರಿಯರು, ಉತ್ತರ ಪ್ರದೇಶದ ಇಂದೋರ್​ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ, ಮಹಾರಾಷ್ಟ್ರದ ಪುಣೆಯಲ್ಲಿ ಜರುಗಿದ ಅಂತಾರಾಷ್ಟ್ರೀಯ ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಸಾಧನೆ ಮೆರೆದಿದ್ದಾರೆ. ಇವರು ಪ್ರತಿನಿಧಿಸಿದ ತಂಡ, ಮೈಸೂರು ದಸರಾ ಕ್ರೀಡಾಕೂಟದಲ್ಲಿ ಗುಂಪು ವಿಭಾಗದಲ್ಲಿ ಚಿನ್ನದ ಪದಕವನ್ನೂ ಗಳಿಸಿದೆ.

    ನಿತ್ಯವೂ ತಾಲೀಮು

    ಪೂಜಾ ಬಿ.ಕಾಂ., ಬಿ.ಪಿ.ಇಡಿ. ಓದಿದ್ದರೆ, ಭಕ್ತಿ ಬಿ.ಕಾಂ. ವ್ಯಾಸಂಗ ಕೈಗೊಂಡಿದ್ದಾರೆ. ತಂದೆ ಕೃಷ್ಣಾ ಇಲೆಕ್ಟ್ರಿಷಿಯನ್. ತಾಯಿ ರುಕ್ಮಿಣಿ ಶಿಕ್ಷಕಿ. ಹೆತ್ತವರು ಮಕ್ಕಳ ಅಭಿರುಚಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಸೈಕ್ಲಿಂಗ್​ನಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲದೊಂದಿಗೆ ನಿತ್ಯ ತಾಲೀಮು ನಡೆಸುತ್ತಿದ್ದಾರೆ.

    ಕೋಟ್​

    ಬೆಳಗಾವಿ ಜಿಲ್ಲೆಯಲ್ಲಿ ಸೈಕ್ಲಿಂಗ್ ಕ್ಷೇತ್ರದಲ್ಲಿ ಮಿಂಚಬಲ್ಲ ಸಾಕಷ್ಟು ಯುವಕ, ಯುವತಿಯರು ಇದ್ದಾರೆ. ಅವರಿಗೂ ಸೂಕ್ತ ತರಬೇತಿ ನೀಡಿ, ಅವರನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಶೀಘ್ರದಲ್ಲೇ ತರಬೇತಿ ಕೇಂದ್ರ ತೆರೆಯುವ ಆಸೆ ಇದೆ. ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವುದೇ ನಮ್ಮ ಗುರಿ.

    | ಪೂಜಾ ಮತ್ತು ಭಕ್ತಿ ಮುಚ್ಚಂಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts