More

  ರಾಮ ಭಕ್ತರ ಸೈಕಲ್ ಯಾತ್ರೆ ಸಂಪನ್ನ

  ಹೊಸದುರ್ಗ: ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ಬಾಲರಾಮನ ದರ್ಶನ ಪಡೆಯಲು ಹೊಸದುರ್ಗದಿಂದ ಸೈಕಲ್‌ನಲ್ಲಿ ತೆರಳಿದ್ದ ಯುವಕರಿಬ್ಬರು ಶುಕ್ರವಾರ ತಲುಪಿ ಪ್ರಭು ರಾಮಚಂದ್ರರ ದರ್ಶನ ಪಡೆದಿದ್ದಾರೆ.

  ಜ.10 ರಂದು ಬುಧವಾರ ಸಂಜೆ 5 ಗಂಟೆಗೆ ದಯಾನಿಧಿ ಹಾಗೂ ಶರಣಪ್ಪ ಹೊಸದುರ್ಗದಿಂದ ಸೈಕಲ್ ಮೂಲಕ ಅಯೋಧ್ಯೆಗೆ ತೆರಳಿದ್ದರು. 17 ದಿನಗಳಲ್ಲಿ 2 ಸಾವಿರ ಕಿ.ಮೀ ದೂರ ಕ್ರಮಿಸಿ ಬಾಲರಾಮನ ದರ್ಶನ ಪಡೆದು ಯಾತ್ರೆ ಸಂಕಲ್ಪ ಪೂರ್ಣಗೊಳಿಸಿದ್ದಾರೆ.

  ಪ್ರತಿ ದಿನ ಸರಾಸರಿ 130 ಕಿ.ಮೀ ಸೈಕಲ್ ಪ್ರಯಾಣ ಕ್ರಮಿಸಿರುವ ಯುವಕರು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದ ಮೂಲಕ ಅಯೋಧ್ಯೆ ತಲುಪಿದ್ದಾರೆ. ಕೊನೆಯ ದಿನ 195 ಕಿ.ಮೀ ಸೈಕಲ್ ತುಳಿಯುವ ಮೂಲಕ ಕೊರೆಯುವ ಚಳಿಯನ್ನು ಲೆಕ್ಕಿಸದೆ ಯಾತ್ರೆಯನ್ನು ಪೂರೈಸಿದ್ದಾರೆ.

  ಆರಂಭದ ದಿನದಿಂದ ಪ್ರತಿ ದಿನವೂ ಜಾಲತಾಣದ ಮೂಲಕ ಯಾತ್ರೆಯ ವಿವರವನ್ನು ಹಂಚಿಕೊಳ್ಳುತ್ತಿದ್ದ ಯುವಕರು ಮಾರ್ಗ ಮಧ್ಯೆ ಮಂತ್ರಾಲಯ, ಉತ್ತರ ಪ್ರದೇಶದ ಪ್ರಯಾಗ್ ರಾಜ್, ತ್ರಿವೇಣಿ ಸಂಗಮ ಇತರ ಧಾರ್ಮಿಕ ಸ್ಥಳಗಳನ್ನು ಸಂದರ್ಶಿಸಿದ್ದಾರೆ.

  ಶೀತಗಾಳಿ ಹಾಗೂ ಕೊರೆಯುವ ಚಳಿ ಯಾತ್ರೆಗೆ ತೊಡಕಾದರೂ ಲೆಕ್ಕಿಸದೆ ಸೈಕಲ್ ತುಳಿದಿದ್ದಾರೆ. ಮಹಾರಾಷ್ಟ್ರದಲ್ಲಿ ಮಾತ್ರ ಒಂದು ದಿನ ಮಲಗಲು ತೊಂದರೆಯಾಗಿದೆ. ರಾತ್ರಿ ಅರಣ್ಯದ ಮೂಲಕ ಸಾಗಿ ಆಂಜನೇಯ ದೇವಾಲಯದಲ್ಲಿ ಉಳಿದಿದ್ದಾರೆ. ಸೈಕಲ್ ಕೂಡ ಒಮ್ಮೆ ಕೈಕೊಟ್ಟಿದೆ. ಸರಿಪಡಿಸಿಕೊಂಡು ಯಾತ್ರೆ ಮುಗಿಸಿದ್ದಾರೆ.

  ಯುವಕರ ಸೈಕಲ್ ಯಾತ್ರೆ ಸಂಕಲ್ಪ ಪೂರ್ಣಗೊಂಡ ಸುದ್ದಿ ಹೊಸದುರ್ಗದ ರಾಮಭಕ್ತರಿಗೆ ಸಂತಸ ತಂದಿದೆ. ಯುವಕರನ್ನು ಮೆರವಣಿಗೆ ಮೂಲಕ ಬಿಳ್ಕೋಟ್ಟಿದ ರಾಮಭಕ್ತರು ಮತ್ತೆ ಯುವಕರನ್ನು ಮೆರವಣಿಗೆಯಲ್ಲಿ ಪುರಪ್ರವೇಶ ಮಾಡಿಸಲು ಸಜ್ಜಾಗಿ ಬರುವಿಕೆಗಾಗಿ ಕಾಯುತ್ತಿದ್ದಾರೆ.

  ಯಾತ್ರೆಯುದಕ್ಕೂ ರಾಮಭಕ್ತರ ಸಹಕಾರ: ಪ್ರಭು ಶ್ರೀರಾಮಚಂದ್ರನ ಆಶೀರ್ವಾದದಿಂದ ಯಾತ್ರೆ ಸಂಪನ್ನವಾಗಿದೆ. ಶುಕ್ರವಾರ ಬೆಳಗ್ಗೆ ಅಯೋಧ್ಯೆಗೆ ಬಂದ ನಾವು ಮೂರು ಬಾರಿ ಬಾಲರಾಮನ ದರ್ಶನ ಪಡೆದಿದ್ದೇವೆ. ಯಾವುದೇ ತೊಂದರೆ ಇಲ್ಲದೆ ಅಯೋಧ್ಯೆ ತಲುಪಿದ್ದೆವೆ. ಯಾತ್ರೆಯುದ್ದಕ್ಕೂ ರಾಮಭಕ್ತರು ಸಹಕಾರ ನೀಡಿದರು ಎಂದು ದಯಾನಿಧಿ ಹಾಗೂ ಶರಣಪ್ಪ ಪತ್ರಿಕೆಗೆ ಮಾಹಿತಿ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts