More

    ಸಹಕಾರಿ ರಂಗ ಬಲವರ್ಧನೆಗೆ ಶ್ರಮಿಸಿ

    ಬೀಳಗಿ: ಸಹಕಾರಿ ಕ್ಷೇತ್ರ ದೇಶದ ಹೆಬ್ಬಾಗಿಲು ಇದ್ದಂತೆ. ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಗ್ರಾಹಕರು ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಇನ್ನು ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಹೇಳಿದರು.

    ಸಮೀಪದ ಕೊರ್ತಿ ಸಮುದಾಯ ಭವನದಲ್ಲಿ ಬೆಂಗಳೂರು ಸಹಕಾರ ಮಹಾಮಂಡಳ, ಜಿಲ್ಲೆಯ ಎಲ್ಲ ಪಿಕೆಪಿಎಸ್ ಪತ್ತಿನ ಸಹಕಾರಿ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ 67ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಕೃಷಿ, ಶಿಕ್ಷಣ, ಆರ್ಥಿಕ ರಂಗಗಳ ಬಲವರ್ಧನೆ ಮಾಡುವುದರ ಮೂಲಕ ಸಹಕಾರಿ ಕ್ಷೇತ್ರವು ದೇಶದ ಅಭಿವೃದ್ಧಿ ವಿಷಯದಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ಒಂದರ್ಥದಲ್ಲಿ ಅದು ಸಮಾನಾಂತರ ಸರ್ಕಾರದಂತೆ ಕೆಲಸ ಮಾಡುತ್ತದೆ. ಈ ಕ್ಷೇತ್ರವನ್ನು ಬಲವರ್ಧನೆ ಮಾಡಲು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಶ್ರಮಿಸಬೇಕು ಎಂದರು.

    ಸಾಮಾಜಿಕ ಸೇವೆ ಮಾಡಲು ರಾಜಕಾರಣಕ್ಕಿಂತ ಸಹಕಾರಿ ರಂಗವು ಹೆಚ್ಚು ಅವಕಾಶಗಳಿರುವ ಕ್ಷೇತ್ರವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಜೀವನ ಮಟ್ಟವನ್ನು ಸುಧಾರಿಸಲು ಸಹಕಾರಿ ಕ್ಷೇತ್ರವು ಪ್ರಯತ್ನಿಸಬೇಕು. ರಾಜಕೀಯ ಕ್ಷೇತ್ರದಲ್ಲಿ ತಾವು ನಿರ್ವಹಿಸಿದ ದೊಡ್ಡ ದೊಡ್ಡ ಹುದ್ದೆ ಅಧಿಕಾರಗಳಿಗಿಂತ ತಾವೊಬ್ಬ ಸಹಕಾರಿ ಎಂದು ಹೇಳಿಕೊಳ್ಳುವುದರಲ್ಲಿ ತಮಗೆ ತೃಪ್ತಿ ಇದೆ. ಸಹಕಾರಿ ಕ್ಷೇತ್ರದಲ್ಲಿ ನಂಬಿಕೆ, ಪ್ರಾಮಾಣಿಕತೆಗಳೇ ಜೀವಾಳವಾಗಿರಬೇಕು. ಸಹಕಾರಿ ಆರ್ಥಿಕ ಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ಠೇವಣಿ ಇಡುವುದರತ್ತ ಜನತೆ ಮನಸ್ಸು ಮಾಡಬೇಕು ಎಂದರು.

    ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ, ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಕ್ಷೇತ್ರವು ಸಾಮಾಜಿಕ ಬೆಳವಣಿಗೆಗಳಿಗೆ ಪೋಷಕ ಶಕ್ತಿಯಾಗಿ ನಿಲ್ಲುತ್ತದೆ. ವಿಶ್ವಾಸ ಮತ್ತು ನಂಬಿಕೆ ಈ ಕ್ಷೇತ್ರದ ಜೀವಾಳಗಳಾಗಿವೆ ಎಂದ ಅವರು, ಸಹಕಾರಿ ಕ್ಷೇತ್ರದಲ್ಲಿ ತಮ್ಮಯಾದ ಕೊಡುಗೆ ನೀಡಿದ ವಿ.ಪ. ವಿರೋಧ ಪಕ್ಷದ ನಾಯಕರಿಗೆ ಸಹಕಾರ ರತ್ನ ಪ್ರಶಸ್ತಿ ದೊರತಿದ್ದು ನಮ್ಮಗೆಲ್ಲರಿಗೂ ಸಂತಸ ತಂದಿದೆ ಎಂದರು.

    ಸಹಕಾರಿ ಯೂನಿಯನ್‌ನ ಜಿಲ್ಲಾ ಅಧ್ಯಕ್ಷ ಕಾಶೀನಾಥ ಹುಡೇದ ಮಾತನಾಡಿದರು. ಶ್ರೀ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಸಹಕಾರಿ ಯೂನಿಯನ್ ನಿರ್ದೇಶಕರಾದ ಸಿದ್ದು ಗಿರಿಗಾಂವಿ, ನಿಂಗಣ್ಣ ಗೋಡಿ, ತಾಪಂ ಅಧ್ಯಕ್ಷ ರಾಮಣ್ಣ ಬಿರಾದಾರ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಿರಾದಾರ, ಅವಳಿ ಜಿಲ್ಲೆಯ ಹಾಲು ಒಕ್ಕೂಟದ ನಿರ್ದೇಶಕ ಸಿದ್ದಪ್ಪ ಕಡಪಟ್ಟಿ, ಪ.ಪಂ. ಅಧ್ಯಕ್ಷ ಸಿದ್ದಲಿಂಗೇಶ ನಾಗರಾಳ, ಸಹಕಾರ ಸಂಘಗಳ ಉಪನಿಬಂಧಕ ಕಲ್ಲಪ್ಪ ಓಬಣ್ಣಗೋಳ, ಸಹಾಯಕ ನಿಬಂಧಕ ಎಂ.ಎನ್.ಮಣಿ, ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಆರ್. ಬಟಕುರ್ಕಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts