More

    ಸುಂದರ ನಗರ ನಿರ್ಮಾಣಕ್ಕೆ ಒತ್ತು- ಬಳ್ಳಾರಿ ಮಹಾನಗರ ಪಾಲಿಕೆ ಬಜೆಟ್ ಮಂಡನೆ

    ಬಳ್ಳಾರಿ: ಗಣಿನಾಡು ಬಳ್ಳಾರಿ ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯುಡು ಗುರುವಾರ ಬೃಹತ್ ಗಾತ್ರದ ಆಯವ್ಯಯ ಮಂಡಿಸಿದರು.

    ಒಟ್ಟು 491.54 ಕೋಟಿ ರೂ. ಗಾತ್ರದ ಬಜೆಟ್ ಇದಾಗಿದ್ದು, ಅದರಲ್ಲಿ 408.88 ಕೋಟಿ ರೂ. ವೆಚ್ಚ ಹಾಗೂ 82.66 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದ್ದು ವಿಶೇಷವಾಗಿತ್ತು.

    ಉದ್ಯಾನ, ರಸ್ತೆ, ಬೀದಿದೀಪ, ಕುಡಿವ ನೀರಿನ ಸೌಲಭ್ಯ, ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಬಜೆಟ್‌ನಲ್ಲಿ ಪೂರಕ ಅನುದಾನ ಮೀಸಲಿಡಲಾಯಿತು. ನಗರದ ಹಸಿರೀಕರಣ, ಪುನರ್ವಸತಿ ಕೇಂದ್ರಗಳ ನಿರ್ವಹಣೆ, ಬೀದಿ ನಾಯಿಗಳ ನಿಯಂತ್ರಣ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

    ಮೂಲ ಸೌಕರ್ಯಗಳಿಗೆ ಆದ್ಯತೆ: ಬಳ್ಳಾರಿ ನಗರದ ರಸ್ತೆಗಳನ್ನು ಗುಂಡಿಮುಕ್ತವಾಗಿಸುವ ನಿಟ್ಟಿನಲ್ಲಿ 2 ಕೋಟಿ ರೂ. ಬಜೆಟ್‌ನಲ್ಲಿ ಕಾಯ್ದಿಸಲಾಯಿತು. ಸುಗಮ ಸಂಚಾರ ವ್ಯವಸ್ಥೆಗೆ ಪಾಲಿಕೆ ಪಣತೊಟ್ಟಿದ್ದು, ರಸ್ತೆ ನಿರ್ಮಾಣ, ಪಾದಚಾರಿ ರಸ್ತೆ ಅಭಿವೃದ್ಧಿಗೆ 3.25 ಕೋಟಿ ರೂ., ಉದ್ಯಾನಗಳ ಅಭಿವೃದ್ಧಿಗೆ 3.20 ಕೋಟಿ ರೂ. ಮೀಸಲಿಡಲಾಗಿದೆ.

    ನೀರಿನ ಕೊರತೆಯಾಗದಂತೆ ಕ್ರಮ: ಬೇಸಿಗೆಯಲ್ಲಿ ಪಾಲಿಕೆ ವ್ಯಾಪ್ತಿ ನೀರಿನ ಕೊರತೆ ಆಗದಂತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು 20 ಲಕ್ಷ ರೂ., ಬೋರ್‌ವೆಲ್‌ಗಳ ಪುನಶ್ಚೇತನ, ದುರಸ್ತಿಗಾಗಿ 50 ಲಕ್ಷ ರೂ., ರಸ್ತೆ ಬದಿ ಚರಂಡಿಗಳ ನಿರ್ವಹಣೆ ಹಾಗೂ ದುರಸ್ತಿ, ಅಭಿವೃದ್ಧಿಗೆ 10.90 ಕೋಟಿ ರೂ. ಹಾಗೂ ಮಳೆ ಹಾನಿ ನಷ್ಟ ಭರಿಸಲು 39 ಲಕ್ಷ ರೂ. ಕಾಯ್ದಿರಿಸಲಾಗಿದೆ.

    ಅತಿವೃಷ್ಟಿ ವೇಳೆ ತುರ್ತು ಕಾಮಗಾರಿಗಾಗಿ 80 ಲಕ್ಷ ರೂ., ಕುಡಿವ ನೀರು ಸರಬರಾಜು ನೂತನ ಪೈಪ್‌ಲೈನ್ ಅಳವಡಿಕೆಗೆ 3.25 ಕೋಟಿ ರೂ., ಶುದ್ಧ ನೀರಿನ ಘಟಕಗಳ ನಿರ್ವಹಣೆ ಹಾಗೂ ದುರಸ್ತಿಗೆ 60 ಲಕ್ಷ ರೂ. ನೀಡಲಾಗಿದೆ.

    ಪರಿಶಿಷ್ಟರ ಕಲ್ಯಾಣಕ್ಕೂ ಅನುದಾನ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಶೇ.24.10 ಯೋಜನೆಯಡಿ 4 ಕೋಟಿ ರೂ. ಮೀಸಲಿಡಲಾಗಿದೆ. ಇದೇ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ, ಲಾಪ್‌ಟ್ಯಾಪ್, ಎಸ್‌ಸಿ, ಎಸ್‌ಟಿ ಕಾಲನಿಗಳಲ್ಲಿ ರಸ್ತೆ, ಚರಂಡಿ, ಶೌಚಗೃಹ ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿದೆ.

    ಹಸಿರೀಕರಣಕ್ಕೆ 2.30 ಕೋಟಿ ರೂ.: ನಗರದಲ್ಲಿ ಹಸಿರೀಕರಣ ಹಾಗೂ ಸೌಂದರೀಕರಣಕ್ಕಾಗಿ 2.30 ಕೋಟಿ ರೂ., ಪುನರ್ವಸತಿ ಕೇಂದ್ರಗಳ ನಿರ್ವಹಣೆಗೆ 10 ಲಕ್ಷ ರೂ.ನೀಡಲಾಗುತ್ತಿದೆ. ಬೀದಿನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗಾಗಿ 1 ಕೋಟಿ ರೂ. ಕಾಯ್ದಿರಿಸಲಾಗಿದೆ.

    ಹೊಸ ಯೋಜನೆಗಳ ಘೋಷಣೆ: ಪ್ರಸ್ತುತ ಪಾಲಿಕೆ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಯಿತು. ಮಾದರಿ ಆಟೋ ನಿಲ್ದಾಣಗಳ ಸ್ಥಾಪನೆ ಹಾಗೂ ವಿದ್ಯುತ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳ ಅಭಿವೃದ್ಧಿಗೆ 60 ಲಕ್ಷ ರೂ., ನಗರ ಪ್ರದೇಶದಲ್ಲಿ ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆಗೆ 10 ಲಕ್ಷ ರೂ., ಪ್ರಮುಖ ರಸ್ತೆಗಳಿಗೆ ನಾಮಫಲಕ ಅಳವಡಿಕೆಗೆ

    1.20 ಕೋಟಿ ರೂ. ವಿಮ್ಸ್‌ನಲ್ಲಿ ವುಮೆನ್ ಮಿಲ್ಕ್ ಬ್ಯಾಂಕ್‌ಗೆ 25 ಲಕ್ಷ ರೂ., ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ರಾಜ್ಯ ಹಣಕಾಸು ಸಂಸ್ಥೆಯ ಎಸ್‌ಎಫ್‌ಸಿ ಯೋಜನೆಯಡಿ 7.11 ಕೋಟಿ ರೂ. 15ನೇ ಹಣಕಾಸು ಯೋಜನೆಯಡಿ 19.32 ರೂ., ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 20 ಕೋಟಿ ರೂ. ಅಮೃತ್ 2.0 ಯೋಜನೆಯಡಿ 10 ಕೋಟಿ ರೂ. ಮೀಸಲಿಡಲಾಗಿದೆ.

    ಉಪ ಮೇಯರ್ ಮಾಲಾನ್ ಬೀ, ಶಾಸಕ ಜಿ.ಸೋಮಶೇಖರ ರೆಡ್ಡಿ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಚ್.ರಾಜಶೇಖರ್, ರಾಮಾಂಜನೇಯಲು, ಗಾದಿಯಪ್ಪ, ಸುಕುಮ್, ಪಾಲಿಕೆ ಆಯುಕ್ತ ರುದ್ರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts