More

    ಸ್ವಾವಲಂಬನೆಗೆ ಸ್ವಯಂ ಉದ್ಯಮ ಇರಲಿ; ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಸಲಹೆ

    ತುಮಕೂರು: ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ವಿದ್ಯಾವಂತ ಮಹಿಳೆಯರು ಉದ್ಯಮಶೀಲ ಸಾಮರ್ಥ್ಯದಿಂದ ಗಣನೀಯ ಕೊಡುಗೆ ನೀಡಬಲ್ಲರು ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯಪಟ್ಟರು.

    ನಗರದ ಶೃಂಗೇರಿ ಶಂಕರ ಮಠದಲ್ಲಿ ಗುರುವಾರ ಸಂಜೆ ಜಿಲ್ಲಾ ಬ್ರಾಹ್ಮಣ ಸಭಾ ಏರ್ಪಡಿಸಿದ್ದ ಜಿಲ್ಲಾ ವಿಪ್ರ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಕುಟುಂಬದ ಜವಾಬ್ದಾರಿ ಪುರುಷರಿಗಿಂತ ಹೆಚ್ಚು. ಜತೆಗೆ ಕಾರ್ಪೋರೇಟ್ ವಲಯದ ಕೆಲಸದ ಸಂಸ್ಕೃತಿಗೆ ಹೊಂದಿಕೊಂಡು ಮಕ್ಕಳ ಹಾಗೂ ಕುಟುಂಬದ ಜವಾಬ್ದಾರಿ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ ಎಂದರು.

    ಸಾಕಷ್ಟು ಸವಾಲುಗಳ ನಡುವೆ ಸ್ವಯಂ ಉದ್ಯಮ ಪ್ರಾರಂಭಿಸುವುದು ಸ್ವಾವಲಂಬಿಯಾಗಿರಲು ಬಯಸುವ ಮಹಿಳೆಯರಿಗೆ ಸೂಕ್ತ ಆಯ್ಕೆಯಾಗಿದೆ. ಇದಕ್ಕೆ ಪೂರಕವಾಗಿ ವಿವಿಧ ಕೌಶಲಗಳಲ್ಲಿ ಅವರಿಗೆ ತರಬೇತಿ ನೀಡಬೇಕು. ಆರ್ಥಿಕ ನೆರವು ನೀಡಲು ಅವಕಾಶ ಕಲ್ಪಿಸಬೇಕು ಎಂದರು.

    ಯಾವುದೇ ಉದ್ಯಮವನ್ನು ಪ್ರಾರಂಭಿಸಿದರೂ ಅದಕ್ಕೆ ತಕ್ಕ ಯೋಜನೆ ರೂಪಿಸಿಕೊಂಡಿರಬೇಕು, ಸಮಸ್ಯೆಗಳನ್ನು ಶುರುವಿನಲ್ಲಿಯೇ ಅರಿತು ಅದನ್ನು ಪರಿಹರಿಸಿಕೊಳ್ಳಬೇಕು, ನಮ್ಮ ಕಾರ್ಯಗಳ ಬಗ್ಗೆ ಪ್ರತಿಕ್ರಿಯೆ ಪಡೆದುಕೊಳ್ಳಬೇಕು ಹಾಗೂ ಸೂಕ್ತ ಕಾರ್ಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

    ಜಿಲ್ಲಾ ಬ್ರಾಹ್ಮಣ ಸಭಾದ ಮಹಿಳಾ ಘಟಕದ ಅಧ್ಯಕ್ಷೆ ಸುಭಾಷಿಣಿ ರವೀಶ್, ಟೂಡಾ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಜಿಲ್ಲಾ ಬ್ರಾಹ್ಮಣಸಭಾ ಅಧ್ಯಕ್ಷ ಹೆಬ್ಬಳಲು ಚಂದ್ರಶೇಖರ್, ಡಾ.ಚೈತಾಲಿ, ರಮ್ಯಕಲ್ಲೂರು ಮತ್ತಿತರರು ಇದ್ದರು.

    ಪರಿಪೂರ್ಣತೆ ಇರಲಿ: ನಮ್ಮ ಪ್ರತಿ ಕೆಲಸದಲ್ಲೂ ಪರಿಪೂರ್ಣತೆಯಿರಬೇಕು, ಹಿಂದೆ ಪ್ರತಿಯೊಂದು ಕೆಲಸಕ್ಕೂ ಹೋರಾಟ ಮಾಡಬೇಕಿತ್ತು. ಆದರೆ ಇಂದು ಕಾಲ ಸಂಪೂರ್ಣ ಬದಲಾಗಿದ್ದು, ಅವಕಾಶಗಳ ಮಹಾಪೂರವೇ ನಮ್ಮ ಮುಂದಿದೆ ಎಂದು ಬೆಂಗಳೂರಿನ ಅವೇಕ್ ಸಂಸ್ಥೆ ಮಾಜಿ ಅಧ್ಯಕ್ಷೆ ಪದ್ಮಶೇಷಾದ್ರಿ ಹೇಳಿದರು.

    ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಗಾರ್ಮೆಂಟ್ಸ್, ಉತ್ಪಾದನಾ ಘಟಕಗಳು, ಉದ್ದಿಮೆಗಳು, ಸೇವಾ ಕ್ಷೇತ್ರಗಳು- ಸೇರಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಪ್ರಾಧಾನ್ಯತೆ ದೊರೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

    ಹಲವರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಮಹಿಳಾ ಸಮಾಜ ಟ್ರಸ್ಟ್ ಅಧ್ಯಕ್ಷೆ ಶೀಲವತಿ, ಶಕ್ತಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ರತಿ ಪ್ರಹ್ಲಾದರಾವ್, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಜಿ.ಶ್ರೇಯಸ್, ಎಂ.ಪಿ.ನವೀನ್ ಮತ್ತು ಎಚ್.ಸಿ.ನಮ್ರತಾ ಅವರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts