More

    ಎಚ್ಚರಿಕೆ ವಹಿಸಿ; ಲಸಿಕೆ ಹೆಸರಲ್ಲಿ ಮೋಸಕ್ಕೆ ಒಳಗಾಗದಿರಿ…

    ಎಂಥದ್ದೇ ಸ್ಥಿತಿ ಅಂದರೆ ಸಂಕಷ್ಟ ಅಥವಾ ಪ್ರತಿಕೂಲದ ವೇಳೆ ಇದ್ದರೂ ಅದರಲ್ಲೂ ಲಾಭ ಮಾಡಿಕೊಳ್ಳುವ, ಜನರಿಗೆ ಮೋಸ ಮಾಡುವ ಜನರಿರುತ್ತಾರೆ. ಒಂದು ವ್ಯವಸ್ಥೆ ಜನರಿಗೆ ಸೌಲಭ್ಯಗಳನ್ನು ನೀಡಲು ಶ್ರಮಿಸಿದರೆ, ಮತ್ತೊಂದು ವ್ಯವಸ್ಥೆ ಆ ಮೂಲಕ ಜನರನ್ನು ಮೋಸ ಮಾಡಲು ಯತ್ನಿಸುತ್ತದೆ. ಇಂಥ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸುವುದನ್ನು ಬಿಟ್ಟು, ಮೋಸದ ಜಾಲಗಳಿಗೆ ಬಲಿಯಾದರೆ ಅದರಿಂದ ಆಗುವ ನಷ್ಟ ಅಷ್ಟಿಷ್ಟಲ್ಲ. ಹೆಚ್ಚು ಬಡ್ಡಿ ನೀಡುತ್ತೇವೆಂದು ಹಣ ಕೀಳುವ, ಸುಲಭದಲ್ಲಿ ಸಾಲ ಮಾಡಿಸಿಕೊಡುತ್ತೇವೆಂದು ದಾಖಲೆಗಳನ್ನು ಪಡೆದು ಮೋಸ ಮಾಡುವ, ಅಗ್ಗದ ದರದಲ್ಲಿ ಚಿನ್ನ ನೀಡುತ್ತೇವೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಲಪಟಾಯಿಸುವ ಪ್ರಕರಣಗಳನ್ನು ಆಗಾಗ ಗಮನಿಸುತ್ತೇವೆ. ಕರೊನಾ ಹಾವಳಿ ಶುರುವಾದ ಮೇಲೆ ‘ಸಂಕಷ್ಟದಲ್ಲಿ ಇರುವವರಿಗೆ ನೆರವಾಗುತ್ತೇವೆ’ ಎಂಬ ನೆಪದಲ್ಲಿ ನಕಲಿ ವೆಬ್​ಸೈಟ್​ಗಳ ಮೂಲಕ ಹಲವರು ಮೋಸಕ್ಕೆ ಯತ್ನಿಸಿದ್ದು ಇತ್ತೀಚಿನ ನಿದರ್ಶನ. ಇದರ ಬೆನ್ನಲ್ಲೇ ಈಗ ಲಸಿಕೆ ಹೆಸರಲ್ಲಿ ಮೋಸ ಮಾಡಲು ಸೈಬರ್ ವಂಚಕ ಜಾಲಗಳು ಯತ್ನಿಸುತ್ತಿವೆ.

    ಕರೊನಾ ಸೋಂಕಿನ ಆತಂಕದಿಂದ ಜನರು ಬಸವಳಿದಿದ್ದು, ಯಾವಾಗ ಲಸಿಕೆ ಲಭ್ಯವಾಗಲಿದೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಲಸಿಕೆ ತಯಾರಿಯ ಪ್ರಕ್ರಿಯೆ ಅಂತಿಮ ಘಟ್ಟದಲ್ಲಿದ್ದು, ವಿತರಣೆಯನ್ನು ಸರ್ಕಾರ ಯಾವುದೇ ಸಮಯದಲ್ಲೂ ಆರಂಭಿಸಬಹುದು. ಆ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧಗೊಳಿಸಲಾಗುತ್ತಿದೆ. ಮೊದಲು ಕರೊನಾ ಸೇನಾನಿಗಳಾದ ವೈದ್ಯರು, ನರ್ಸ್ ಗಳು, ಇತರ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ದೊರೆಯಲಿದೆ. ಆ ಬಳಿಕದ ಆದ್ಯತೆ 50 ವರ್ಷ ಮೇಲ್ಪಟ್ಟವರು ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಜನರ ಆತಂಕ ಮತ್ತು ಬೇಗ ಲಸಿಕೆ ಪಡೆಯಬೇಕೆಂಬ ಧಾವಂತದ ಸ್ಥಿತಿಯನ್ನು ಸೈಬರ್ ವಂಚಕರ ಜಾಲ ದುರುಪಯೋಗ ಮಾಡಿಕೊಳ್ಳುತ್ತಿದೆ. ‘ಕರೊನಾ ಲಸಿಕೆ ಕಾಯ್ದಿರಿಸಿ’ ಎಂದು ಕರೆ ಮಾಡುವ ವಂಚಕರು ಜನರಿಂದ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು, ಹಣ ಲಪಟಾಯಿಸುತ್ತಿದ್ದಾರೆ. ಭೋಪಾಲ್ ನಗರವೊಂದರಲ್ಲೇ ಈ ಸಂಬಂಧ ಅರ್ಧ ಡಜನ್​ಗೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು, ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಡಾರ್ಕ್ ವೆಬ್​ಸೈಟ್​ಗಳ ಮೂಲಕವೂ ಇಂಥ ವಂಚನೆ ನಡೆಯುತ್ತಿದೆ. ಇಲ್ಲಿ ಮುಖ್ಯವಾಗಿ ಜನರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ. ಲಸಿಕೆ ವಿಷಯದಲ್ಲಿ ಸರ್ಕಾರವೇ ಅಧಿಕೃತ ಹೇಳಿಕೆಗಳನ್ನು ನೀಡುತ್ತಿದೆ. ಕಾಲಕಾಲಕ್ಕೆ ಮಾಧ್ಯಮಗಳೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ. ಅಲ್ಲದೆ, ಲಸಿಕೆ ವಿತರಣೆಯ ಗುತ್ತಿಗೆಯನ್ನು ಸರ್ಕಾರ ಯಾವುದೇ ಸಂಸ್ಥೆಗೆ ವಹಿಸಿಲ್ಲ. ಈ ಎಲ್ಲ ವಾಸ್ತವಗಳನ್ನು ಮನಗಾಣದೆ ಸೈಬರ್ ವಂಚಕರ ಜಾಲಗಳಿಗೆ ಸಿಲುಕುತ್ತಿರುವುದು ನಿಜಕ್ಕೂ ದುರದೃಷ್ಟಕರ. ಮುಂದಿನ ದಿನಗಳಲ್ಲಿ ಇಂಥ ಮೋಸದ ಪ್ರಯತ್ನಗಳು ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ. ಜನರು ಎಚ್ಚರಿಕೆ ವಹಿಸುವ ಜತೆಗೆ ಸರ್ಕಾರದ ಮಾಹಿತಿಯನ್ನು ಅವಲಂಬಿಸಿ, ಅನುಸರಿಸಬೇಕು. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋಗಿ, ಮತ್ತೊಂದು ಸಮಸ್ಯೆ ಸೃಷ್ಟಿ ಮಾಡಿಕೊಳ್ಳಬಾರದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts