More

    ಏಕದಿನ ನಾಯಕತ್ವದಿಂದ ಕೊಹ್ಲಿ ವಜಾಗೊಳಿಸಲು 4 ತಿಂಗಳಿನಿಂದ ಕಾದಿತ್ತು ಬಿಸಿಸಿಐ!

    ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸುವ ವೇಳೆ ಬಿಸಿಸಿಐ, ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ನಿರ್ಧಾರ ಪ್ರಕಟಿಸಿತ್ತು. ರೋಹಿತ್ ಶರ್ಮ ಅವರನ್ನು ಸೀಮಿತ ಓವರ್ ತಂಡದ ಹೊಸ ನಾಯಕನನ್ನಾಗಿ ಹೆಸರಿಸಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ಕೇಳಿಕೊಂಡಿದ್ದೆವು ಎಂದಿದ್ದರು. ಆದರೆ ಕೊಹ್ಲಿ ಇದೆಲ್ಲವನ್ನೂ ತಳ್ಳಿ ಹಾಕಿ, ‘ಟಿ20 ತಂಡದ ನಾಯಕತ್ವ ತ್ಯಜಿಸದಂತೆ ನನ್ನನ್ನು ಯಾರೂ ಕೇಳಿರಲಿಲ್ಲ. ಏಕದಿನ ತಂಡದ ನಾಯಕತ್ವ ಕಳೆದುಕೊಳ್ಳುವ ಬಗ್ಗೆಯೂ ಆಯ್ಕೆ ಸಮಿತಿ ಸಭೆಗೆ ಒಂದೂವರೆ ಗಂಟೆ ಮೊದಲಷ್ಟೇ ಗೊತ್ತಾಗಿತ್ತು’ ಎಂದಿದ್ದರು. ಬಿಸಿಸಿಐ ಅಧ್ಯಕ್ಷರು ಮತ್ತು ಟೆಸ್ಟ್ ತಂಡದ ನಾಯಕನ ಈ ಹೇಳಿಕೆ-ಪ್ರತಿಹೇಳಿಕೆಗಳು ಸಾಕಷ್ಟು ವಿವಾದ ಎಬ್ಬಿಸಿದವು. ಈ ನಡುವೆ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಲು ಬಿಸಿಸಿಐ ಕಳೆದ 4 ತಿಂಗಳಿನಿಂದ ಯೋಜನೆ ಹಾಕಿಕೊಂಡಿತ್ತು ಎಂದು ವರದಿಯಾಗಿದೆ.

    ಕೊಹ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಐಪಿಎಲ್ 2ನೇ ಭಾಗದ ಆರಂಭಕ್ಕೆ ಮುನ್ನ, ಟಿ20 ವಿಶ್ವಕಪ್ ಬಳಿಕ ರಾಷ್ಟ್ರೀಯ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದಾದ ಬಳಿಕ ಏಕದಿನ ತಂಡದ ನಾಯಕತ್ವದಿಂದಲೂ ಕೊಹ್ಲಿಯನ್ನು ಕೆಳಗಿಳಿಸಲು ಒಲವು ತೋರಿದ್ದ ಬಿಸಿಸಿಐ, ನಂತರದ ಬೆಳವಣಿಗೆಗಳನ್ನು ಯಾವ ರೀತಿ ನಿಭಾಯಿಸುವುದು ಎಂಬ ಕಾರ್ಯತಂತ್ರಗಳನ್ನೂ ಹೆಣೆಯುತ್ತಿತ್ತು ಎನ್ನಲಾಗಿದೆ.

    ಬಿಸಿಸಿಐನ ಈ ಯೋಜನೆಯ ಅನ್ವಯವೇ ಗಂಗೂಲಿ, ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ಮನವಿ ಮಾಡಿದ್ದೆವು. ಆದರೆ ಅವರು ಒಪ್ಪದ ಕಾರಣ, ಟಿ20-ಏಕದಿನಕ್ಕೆ ಪ್ರತ್ಯೇಕ ನಾಯಕರು ಬೇಡವೆಂದು ಎರಡಕ್ಕೂ ಒಬ್ಬರೇ ನಾಯಕನನ್ನು ನೇಮಿಸಿದ್ದೆವು ಎಂದಿದ್ದರು ಎನ್ನಲಾಗಿದೆ. ಈ ಮೂಲಕ, ಕೊಹ್ಲಿ ಅವರ ನಾಯಕತ್ವದ ಬಗ್ಗೆ ಯಾವುದೇ ದೂರುಗಳನ್ನು ಹೇಳದೆ, ಅವರಿಗೆ ಏಕದಿನ ತಂಡದ ನಾಯಕತ್ವದಿಂದ ಗೌರವಪೂರ್ಣ ನಿರ್ಗಮನವನ್ನೇ ನೀಡುವುದು ಬಿಸಿಸಿಐ ಉದ್ದೇಶವಾಗಿತ್ತು ಎನ್ನಲಾಗಿದೆ. ಇದು ಗೊತ್ತಿಲ್ಲದೆ ಕೊಹ್ಲಿ, ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಕೆಡಿಸಿಬಿಟ್ಟಂತಿದೆ.

    ಕೊಹ್ಲಿ ಸ್ಫೋಟಕ ಸುದ್ದಿಗೋಷ್ಠಿಯನ್ನೂ ಬಿಸಿಸಿಐ ಸದ್ಯಕ್ಕೆ ನಿರ್ಲಕ್ಷಿಸಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡದ ನಿರ್ವಹಣೆಯ ಮೇಲೆ ಈ ವಿವಾದ ಪರಿಣಾಮ ಬೀರಬಾರದು ಎಂಬುದು ಬಿಸಿಸಿಐ ಎಚ್ಚರಿಕೆಯ ನಡೆಯಾಗಿದೆ. ಇಲ್ಲದಿದ್ದರೆ ಕೊಹ್ಲಿ ಇಷ್ಟರಲ್ಲಾಗಲೇ ಶೋಕಾಸ್ ನೋಟಿಸ್ ಜಾರಿಯಾಗಿರುತ್ತಿತ್ತು ಎನ್ನಲಾಗಿದೆ.

    VIDEO: ಆಶಸ್ ಪಂದ್ಯದ ನಡುವೆ ಸ್ಪಿನ್ನರ್ ಆದ ಇಂಗ್ಲೆಂಡ್ ವೇಗಿ ರಾಬಿನ್‌ಸನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts