More

    ಅಬುಧಾಬಿಯಲ್ಲಿ ಕರೊನಾ ಕಾಟ, ಎರಡು ಚರಣಗಳಲ್ಲಿ ಐಪಿಎಲ್?

    ದುಬೈ/ನವದೆಹಲಿ: ಅಬುಧಾಬಿಯಲ್ಲಿ ಕರೊನಾ ಪ್ರಕರಣಗಳ ಏರಿಕೆಯಿಂದ ಯುಎಇಯಲ್ಲೂ ಐಪಿಎಲ್ 13ನೇ ಆವತ್ತಿ ಆಯೋಜಿಸಲು ಸವಾಲು ಎದುರಾಗಿರುವ ನಡುವೆ, ಟೂರ್ನಿಯನ್ನು 2 ಚರಣಗಳಲ್ಲಿ ಆಯೋಜಿಸುವ ಹೊಸ ಚಿಂತನೆ ನಡೆದಿದೆ.

    ದುಬೈ ಮತ್ತು ಅಬುಧಾಬಿಯಲ್ಲಿ ಪ್ರತ್ಯೇಕವಾದ ಕರೊನಾ ಮಾರ್ಗಸೂಚಿಗಳಿವೆ. ಹೀಗಾಗಿ ಇವೆರಡು ನಗರಗಳ ನಡುವಿನ ಓಡಾಟವೂ ಸುಲಭವಾಗಿಲ್ಲ. ಅಬುಧಾಬಿ ನಗರ ಪ್ರವೇಶಿಸುವ ವೇಳೆ ಕರೊನಾ ಪರೀಕ್ಷೆ ಎದುರಿಸುವುದು ಕಡ್ಡಾಯವಾಗಿದೆ. ಇದು ಟೂರ್ನಿಯ ವೇಳೆ ತಂಡಗಳ ಓಡಾಟಕ್ಕೆ ಅಡಚಣೆ ಎದುರಾಗುವಂತೆ ಮಾಡಿದೆ.

    ದುಬೈ-ಶಾರ್ಜಾ ನಗರಗಳ ನಡುವೆ ಓಡಾಟಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಅಲ್ಲದೆ ಇವೆರಡು ನಗರಗಳ ನಡುವೆ ಕೇವಲ 31 ಕಿಲೋಮೀಟರ್ ಅಂತರವಿದೆ. ಹೀಗಾಗಿ ಟೂರ್ನಿಯ ಮೊದಲ ಚರಣವನ್ನು ಇವೆರಡು ನಗರಗಳಲ್ಲಿ ಆಯೋಜಿಸಲು ಸಿದ್ಧತೆ ನಡೆದಿದೆ. ಲೀಗ್ ಹಂತದ 56 ಪಂದ್ಯಗಳ ಪೈಕಿ ದುಬೈನಲ್ಲಿ 21 ಮತ್ತು ಶಾರ್ಜಾದಲ್ಲಿ 14 ಪಂದ್ಯಗಳು ನಡೆಯುವ ನಿರೀಕ್ಷೆ ಇದೆ.

    ಇದನ್ನೂ ಓದಿ: ರೊನಾಲ್ಡೊ-ಮೆಸ್ಸಿ ಒಂದೇ ತಂಡದಲ್ಲಿ ಆಡ್ತಾರಾ? ಜುವೆಂಟಸ್ ಕ್ಲಬ್​ ಹೇಳೋದೇನು?

    ದುಬೈನಿಂದ 130 ಕಿಲೋಮೀಟರ್ ದೂರದ ಅಬುಧಾಬಿಯಲ್ಲಿ 2ನೇ ಚರಣದ 21 ಪಂದ್ಯಗಳು ನಡೆಯುವ ಸಾಧ್ಯತೆ ಇದೆ. 2ನೇ ಚರಣದಲ್ಲಿ ಸತತ 21 ಪಂದ್ಯಗಳೂ ಅಬುಧಾಬಿಯಲ್ಲೇ ನಡೆಯಲಿವೆ ಎನ್ನಲಾಗಿದೆ. ಮೊದಲ ಚರಣದಲ್ಲಿ ದುಬೈ-ಶಾರ್ಜಾದಲ್ಲೇ ಪಂದ್ಯಗಳು ನಡೆದರೆ, ಪ್ರಸಕ್ತ ಅಬುಧಾಬಿಯಲ್ಲಿ ಉಳಿದುಕೊಂಡಿರುವ ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ದುಬೈನಲ್ಲಿ ವಾಸ್ತವ್ಯ ಹೂಡಲಿವೆ ಎನ್ನಲಾಗಿದೆ. ಟೂರ್ನಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಿಗದಿಯಾಗಿದೆ.

    ದುಬೈನಲ್ಲಿ ಪ್ಲೇಆಫ್​, ಫೈನಲ್?
    ಟೂರ್ನಿಯ ಕೊನೆಯ ಹಂತದಲ್ಲಿ ಪ್ಲೇಆಫ್​ ಮತ್ತು ಫೈನಲ್ ಪಂದ್ಯ ದುಬೈನಲ್ಲಿ ನಡೆಯುವ ನಿರೀಕ್ಷೆ ಇದೆ. ಟೂರ್ನಿಯ ಉದ್ಘಾಟನಾ ಪಂದ್ಯ ಕೂಡ ದುಬೈನಲ್ಲೇ ನಡೆಯುವ ಸಾಧ್ಯತೆ ಇದೆ.

    ಬಿಸಿಲಿನಿಂದ ಸಮಯ ಬದಲು?
    ದಿನಕ್ಕೆ 2 ಪಂದ್ಯಗಳು ಇದ್ದ ವೇಳೆ ಮೊದಲ ಪಂದ್ಯವನ್ನು ಭಾರತೀಯ ಕಾಲಮಾನದಂತೆ ಮಧ್ಯಾಹ್ನ 3.30ಕ್ಕೆ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಇದರಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಯಿಂದಲೇ ಪಂದ್ಯ ಆರಂಭವಾಗಲಿದ್ದು, ಇದು ಬಿಸಿಲಿನ ಸವಾಲು ಸೃಷ್ಟಿಸಿದೆ. ಹೀಗಾಗಿ ದಿನದ ಮೊದಲ ಪಂದ್ಯವನ್ನು ಭಾರತೀಯ ಕಾಲಮಾನ ಸಂಜೆ 5 ಗಂಟೆಯ ವೇಳೆಗೆ ಆರಂಭಿಸುವ ಚಿಂತನೆಯೂ ನಡೆದಿದೆ.

    ಶನಿವಾರ ವೇಳಾಪಟ್ಟಿ ಪ್ರಕಟ ನಿರೀಕ್ಷೆ
    ಐಪಿಎಲ್ ವೇಳಾಪಟ್ಟಿಗೆ ಸಂಬಂಧಿಸಿದ ಎಲ್ಲ ಸವಾಲುಗಳನ್ನು ಬಿಸಿಸಿಐ ಮತ್ತು ಯುಎಇ ಕ್ರಿಕೆಟ್ ಮಂಡಳಿ ನಿವಾರಿಸಿಕೊಂಡಿದ್ದು, ಶನಿವಾರ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ ಎನ್ನಲಾಗಿದೆ.

    ಖೇಲ್ ರತ್ನ ಪ್ರಶಸ್ತಿ ಪುರಸ್ಕೃತೆ, ಕುಸ್ತಿ ಪಟು ವಿನೇಶ್​ ಪೋಗಟ್​ಗೆ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts