More

    ಟೀಮ್ ಇಂಡಿಯಾ ಕಿಟ್‌ಗೆ ಹೊಸ ಪ್ರಾಯೋಜಕರು

    ನವದೆಹಲಿ: ಅಮೆರಿಕ ಮೂಲದ ಕ್ರೀಡಾ ಉಡುಪುಗಳ ಕಂಪನಿ ‘ನೈಕಿ’ ಜತೆಗಿನ 15 ವರ್ಷಗಳ ಸಂಬಂಧವನ್ನು ಬಿಸಿಸಿಐ ಮಂಗಳವಾರ ಅಧಿಕೃತವಾಗಿ ಕಡಿದುಕೊಂಡಿದೆ. ಟೀಮ್ ಇಂಡಿಯಾದ ನೂತನ ಕಿಟ್ ಪ್ರಾಯೋಜಕರಾಗಿ ಆನ್‌ಲೈನ್ ಕ್ರೀಡಾ ಸಂಸ್ಥೆ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಸ್ಪೋರ್ಟ್ಸ್ ಜತೆಗೆ ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ಒಪ್ಪಂದ ಮಾಡಿಕೊಂಡಿರುವುದನ್ನು ಬಿಸಿಸಿಐ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ.

    ರಾಷ್ಟ್ರೀಯ ಪುರುಷರ ತಂಡ ಮಾತ್ರವಲ್ಲದೆ ರಾಷ್ಟ್ರೀಯ ಮಹಿಳಾ ತಂಡ ಮತ್ತು 19 ವಯೋಮಿತಿ ತಂಡಕ್ಕೂ ಎಂಪಿಎಲ್ ಸ್ಪೋರ್ಟ್ಸ್ ಇನ್ನು 2023ರವರೆಗೆ ಕಿಟ್ ಪ್ರಾಯೋಜಕರಾಗಿರಲಿದೆ. ಈ ಮುನ್ನ ಕಳೆದ 5 ವರ್ಷಗಳಿಂದ ನೈಕಿ ಜತೆಗೆ ಬಿಸಿಸಿಐ ಹೊಂದಿದ್ದ 370 ಕೋಟಿ ರೂ. ಮೊತ್ತದ ಒಪ್ಪಂದ ಕಳೆದ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿತ್ತು. ಒಟ್ಟಾರೆಯಾಗಿ 2005ರಿಂದಲೂ ನೈಕಿ, ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕನಾಗಿತ್ತು. ಎಂಪಿಎಲ್ ಸ್ಪೋರ್ಟ್ಸ್ ಜತೆಗಿನ ಒಪ್ಪಂದ 2020ರ ನವೆಂಬರ್‌ನಿಂದ 2023ರ ಡಿಸೆಂಬರ್‌ವರೆಗೆ ಅನ್ವಯಿಸಲಿದೆ.

    ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಎಂಪಿಎಲ್ ಸ್ಪೋರ್ಟ್ಸ್ ಜತೆಗಿನ ಒಪ್ಪಂದ ಆರಂಭಗೊಳ್ಳಲಿದ್ದು, ಆಸೀಸ್ ವಿರುದ್ಧ ಸರಣಿಯಲ್ಲಿ ಭಾರತ ತಂಡ ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲಿದೆ. ಒಪ್ಪಂದದ ಮೊತ್ತದ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ.

    ಎಂಪಿಎಲ್ ಸ್ಪೋರ್ಟ್ಸ್ ಜತೆಗಿನ ಕಿಟ್‌ನೊಂದಿಗೆ ನಾವು ಹೊಸ ಅಧ್ಯಾಯ ಆರಂಭಿಸುವುದನ್ನು ಎದುರು ನೋಡುತ್ತಿದ್ದೇವೆ. ಟೀಮ್ ಇಂಡಿಯಾವನ್ನು ಬೆಂಬಲಿಸುವ ಕೋಟ್ಯಂತರ ಅಭಿಮಾನಿಗಳಿಗೂ ಈ ಸರಕು ಸುಲಭವಾಗಿ ಒದಗಿಸುವಂತೆ ಪರವಾನಗಿ ನೀಡಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಇದರನ್ವಯ ಪಿಎಂಎಲ್ ಸ್ಪೋರ್ಟ್ಸ್ ಕಂಪನಿಯು ಟೀಮ್ ಇಂಡಿಯಾದ ಜೆರ್ಸಿ ಮಾತ್ರವಲ್ಲದೆ ಕಿಟ್‌ನ ಎಲ್ಲ ಸರಕುಗಳನ್ನು ಕ್ರಿಕೆಟ್ ಪ್ರೇಮಿಗಳಿಗೆ ಮಾರಾಟ ಮಾಡಬಹುದಾಗಿದೆ.

    ಆನ್‌ಲೈನ್ ಕ್ರೀಡೆಯ ಜತೆಗೆ ಕ್ರೀಡಾ ಉಡುಪು ಮತ್ತು ಪರಿಕರಗಳ ಅಂಗಸಂಸ್ಥೆಯನ್ನೂ ಹೊಂದಿರುವ ಎಂಪಿಎಲ್ ಸ್ಪೋರ್ಟ್ಸ್ ಕಂಪನಿ, ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ಮತ್ತು ಆರ್‌ಸಿಬಿ ತಂಡಗಳ ಕಿಟ್ ಪ್ರಾಯೋಜಕತ್ವವನ್ನೂ ಹೊಂದಿತ್ತು.

    ಐಪಿಎಲ್‌ಗೆ ಆತಿಥ್ಯ ವಹಿಸಿದ್ದಕ್ಕಾಗಿ ಯುಎಇಗೆ ಬಿಸಿಸಿಐ ಪಾವತಿಸಿರುವ ಮೊತ್ತವೆಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts