More

    ಬಸ್ರೂರು ಶ್ರೀ ಶಾರದಾ ಕಾಲೇಜು ಸುವರ್ಣ ಸಂಭ್ರಮ: ಸಮಾಜಕ್ಕೆ ಅನೇಕ ಗಣ್ಯರ ನೀಡಿದ ಗ್ರಾಮೀಣ ಭಾಗದ ವಿದ್ಯಾದೇಗುಲ

    ಕುಂದಾಪುರ: ಶೈಕ್ಷಣಿಕವಾಗಿ ಅಷ್ಟೇನೂ ಪ್ರಗತಿ ಕಾಣದ ಕಾಲಘಟ್ಟದಲ್ಲಿ ಐದು ದಶಕದ ಹಿಂದೆ ಕುಂದಾಪುರ ಪದವಿ ಪೂರ್ವ ಕಾಲೇಜ್ ಬಿಟ್ಟರೆ ಮತ್ಯಾವುದೇ ಕಾಲೇಜ್ ಇರಲಿಲ್ಲ. ಕಲಿಕೆ ತುಡಿತವಿರುವ ಯುವ ಸಮಾಜಕ್ಕೆ ಶಿಕ್ಷಣ ಕೈಗೆಟುಕದ ಕಾಲದಲ್ಲಿ ಆರಂಭವಾದ ಬಸ್ರೂರು ಶ್ರೀ ಶಾರದಾ ಕಾಲೇಜ್ ಸಮಾಜಕ್ಕೆ ಅದೆಷ್ಟೋ ಪ್ರತಿಭಾನ್ವಿತರನ್ನು ನೀಡಿದ ಹೆಗ್ಗಳಿಕೆ ಹೊಂದಿದೆ.
    ಗ್ರಾಮೀಣ ಪರಿಸರದ ಶಿಕ್ಷಣಾರ್ಥಿಗಳ ಆಶಾಕಿರಣವಾಗಿ 1972ರಲ್ಲಿ ಹಿಂದೂ ಸ್ಕೂಲ್ ಅಸೋಸಿಯೇಶನ್ ಪ್ರಾಯೋಜಕತ್ವದಲ್ಲಿ ಸಂಸ್ಥೆ ರೂಪುಗೊಂಡು 1972ರಲ್ಲಿ ಪದವಿಪೂರ್ವ ಹಾಗೂ 1973ರಲ್ಲಿ ಪ್ರಥಮ ದರ್ಜೆ ಕಾಲೇಜ್ ಆರಂಭವಾಗಿ ಐವತ್ತು ವರ್ಷದಿಂದ ಮೌಲ್ಯಯುತ ಶಿಕ್ಷಣ ನೀಡುತ್ತಾ ಬಂದಿದೆ.

    ಬಸ್ರೂರು ಶ್ರೀ ಶಾರದಾ ಕಾಲೇಜ್ ಏಳು ಎಕರೆಗೂ ಮಿಕ್ಕ ಜಾಗದಲ್ಲಿ ಭವ್ಯ ಕಟ್ಟಡದಲ್ಲಿ ಇದೆ. ಸುಸಜ್ಜಿತ ಕೊಠಡಿಗಳು , ಒಳಾಂಗಣ ಹೊರಾಂಗಣ ಕ್ರೀಡಾಂಗಣ, ಸುಸಜ್ಜಿತ ರಂಗ ಮಂದಿರ ಹೊಂದಿದ್ದು, ದೇಹದಾರ್ಢ್ಯ ಸ್ಪರ್ಧೆ, ವಾಲಿಬಾಲ್, ಕಬಡ್ಡಿ, ಕುಸ್ತಿ ಮೂಲಕ ವಿಶೇಷ ಹೆಸರು ಗಳಿಸಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಇದೆ.

    ಹಳೇ ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಸುವರ್ಣ ನಿಧಿ ಸಂಗ್ರಹ ಕಾಯಕದಲ್ಲಿ ನಿರತರಾಗಿದ್ದಾರೆ. ಕಾಲೇಜ್ ಆರಂಭದಲ್ಲಿ ಬಿ.ವಿ.ಆರ್.ಹೆಗ್ಡೆ ಸಂಚಾಲಕರಾಗಿದ್ದು, ಪ್ರಸಕ್ತ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಸಂಚಾಲಕತ್ವದಲ್ಲಿ ಕಾಲೇಜ್ ಮತ್ತಷ್ಟು ಪ್ರಗತಿಯತ್ತ ಸಾಗುತ್ತಿದೆ. ಪದವಿಪೂರ್ವ ಕಾಲೇಜ್ ಪ್ರಾಂಶುಪಾಲರಾಗಿ ನಾರಾಯಣ ಪೈ ಹಾಗೂ ಪದವಿ ಕಾಲೇಜ್ ಪ್ರಾಂಶುಪಾಲರಾಗಿ ಡಾ. ಚಂದ್ರಾವತಿ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಕ್ ಮೌಲ್ಯಾಂಕದಲ್ಲಿ ಬಿ ಗ್ರೇಡ್ ಪಡೆದಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ 2022 ಜಾರಿಯ ಹೊತ್ತಿನಲ್ಲಿ ವರ್ತಮಾನದ ಅವಶ್ಯಕತೆಗೆ ಅನುಗುಣವಾಗಿ ಹೊಸ ಕೋರ್ಸ್, ಅಧ್ಯಯನ ವಿಭಾಗ ಆರಂಭಿಸುವ ಯೋಜನೆಗಳೊಂದಿಗೆ ಸುವರ್ಣ ಸಂಭ್ರಮ ಆಚರಿಸಲು ಶ್ರೀ ಶಾರದಾ ಕಾಲೇಜ್ ಅರ್ಥಪೂರ್ಣ ಹೆಜ್ಜೆಯಿಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts