More

    ವಳಲೆ ಮಾವಿನಕಾಡು ಸಂಪರ್ಕ ಬಹು ಕಠಿಣ

    ವಳಲೆ ಮಾವಿನಕಾಡು ಸಂಪರ್ಕ ಬಹು ಕಠಿಣ

    ಶೃಂಗೇರಿ: ಪಟ್ಟಣದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಗಡಿಯಲ್ಲಿರುವ ವಳಲೆ ಮಾವಿನಕಾಡಿನಲ್ಲಿ ಮೂಲ ಸೌಲಭ್ಯಗಳೇ ಇಲ್ಲ. ಕೃಷಿಯನ್ನೇ ನಂಬಿ ಬದುಕುತ್ತಿರುವ ಇಲ್ಲಿನ ಏಳೆಂಟು ಕುಟುಂಬಗಳ ಬದುಕು ಅತಂತ್ರವಾಗಿದೆ. ಬದುಕಿನ ವಿಶ್ವಾಸವನ್ನೇ ಕಳೆದುಕೊಂಡು ಇದೀಗ ಒಬ್ಬೊಬ್ಬರೇ ಗ್ರಾಮವನ್ನು ತೊರೆಯುತ್ತಿದ್ದಾರೆ.

    ಹಲವು ವರ್ಷದಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಈಗ ಹತ್ತಾರು ಸಮಸ್ಯೆಗಳೊಂದಿಗೆ ಅನಿವಾರ್ಯವಾಗಿ ಜೀವನ ನಡೆಸುತ್ತಿದ್ದಾರೆ. ಸ್ವಚ್ಛಂದ ಪರಿಸರ, ಸುತ್ತಲೂ ಹಸಿರು ಕಾಡು, ಸ್ವಾಭಾವಿಕವಾಗಿ ಹರಿದುಬರುವ ನೀರು ಎಲ್ಲವೂ ಸಮೃದ್ಧವಾಗಿದೆ. ಆದರೆ ಬದುಕು ಮಾತ್ರ ದಿನೇದಿನೆ ಕಠಿಣವಾಗುತ್ತಿದೆ.

    ಈ ಊರಿನಲ್ಲಿ ಆಸ್ಪತ್ರೆ, ಶಾಲೆ, ಬಸ್ ಸಂಪರ್ಕ ಯಾವುದೂ ಇಲ್ಲ. ಹದಗೆಟ್ಟ ರಸ್ತೆ, ಸಂಜೆಯಾದರೆ ಗ್ರಾಮಕ್ಕೆ ಯಾರೂ ಬರುವುದಿಲ್ಲ. ಕಾಡು ಪ್ರಾಣಿಗಳ ಸಂಚಾರದಿಂದ ಸಂಜೆ ಆಗುವಷ್ಟರಲ್ಲಿ ಮನೆ ಸೇರಬೇಕು. ಒಂದು ಬೆಂಕಿಪೊಟ್ಟಣ ಬೇಕಾದರೂ 4-5 ಕಿ.ಮೀ ದೂರದ ಬುಕುಡಿಬೈಲಿಗೆ ಬರಬೇಕು. ಮಲೆನಾಡಲ್ಲಿ ಎಲ್ಲ ಕಡೆ ಇದ್ದಂತೆ ಇಲ್ಲಿಯೂ ಬಹು ದೂರಕ್ಕೊಂದು ಮನೆ. ಬಹುತೇಕ ಎಲ್ಲ ಮನೆಯಲ್ಲಿ ಮಕ್ಕಳು ಉದ್ಯೋಗ, ಶಿಕ್ಷಣಕ್ಕಾಗಿ ನಗರ ಸೇರಿದ್ದಾರೆ. ಮನೆಯಲ್ಲಿ ಪತಿ-ಪತ್ನಿ ಇರುವ ಕುಟುಂಬಗಳೇ ಹೆಚ್ಚು.

    ಮಿತಿಮೀರಿದ ಕಾಡು ಪ್ರಾಣಿಗಳ ಕಾಟ: ಕೃಷಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಮೂಲ ಸೌಲಭ್ಯಗಳ ಕೊರತೆ ಒಂದೆಡೆಯಾದರೆ, ಬೆಳೆಗಳಿಗೆ ವನ್ಯಜೀವಿಗಳ ಕಾಟ ಮತ್ತೊಂದೆಡೆ ಬೆಳೆಗಳನ್ನು ಉಳಿಸಿಕೊಳ್ಳುವುದೇ ಸವಾಲಿನ ಸಂಗತಿ. ಎಲ್ಲ ಸಮಸ್ಯೆಗಳಿಂದ ಬೇಸತ್ತು ಜಮೀನು, ಮನೆ ಬಿಟ್ಟು ಜನವಸತಿ ಪ್ರದೇಶ ಇರುವ ಕಡೆ ಸ್ಥಳಾಂತರವಾಗುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಎಂಟು ಕುಟುಂಬ ಗ್ರಾಮವನ್ನು ತೊರೆದಿವೆ. ಕಾಡುಕೋಣ, ಹಂದಿ ಮತ್ತಿತರ ಕಾಡು ಪ್ರಾಣಿಗಳಿಂದ ಅಡಕೆ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲವಾಗಿದೆ. ಹಳದಿ ಎಲೆ ರೋಗದ ಜತೆಗೆ ಮಳೆಗಾಲದಲ್ಲಿ ತೋಟಗಾರಿಕೆ ಬೆಳೆಗೆ ಕೊಳೆರೋಗ ಸಾಮಾನ್ಯ. ಜಮೀನು ಕೆಲಸಕ್ಕೆ ಕಾರ್ವಿುಕರ ಕೊರತೆ. ಕಾರ್ವಿುಕರನ್ನು 5 ಕಿ.ಮೀ ದೂರದಿಂದ ಕರೆತಂದು, ಕೆಲಸವಾದ ನಂತರ ವಾಪಸ್ ಬಿಡಬೇಕು. ಹೆಚ್ಚುವರಿ ಕೆಲಸಕ್ಕೆ 15-20 ಕಿ.ಮೀ ದೂರದಿಂದ ಕಾರ್ವಿುಕರನ್ನು ಕರೆ ತರಬೇಕು.

    ಪಡಿತರ, ಬ್ಯಾಂಕು, ಅಂಚೆ , ಆರೋಗ್ಯ ಸೇವೆಗಾಗಿ ಹತ್ತು ಕಿ.ಮೀ ದೂರದ ನೆಮ್ಮಾರಿಗೆ ಬರಬೇಕು. ಜಮೀನು, ಮನೆ ಮಾರಾಟ ಮಾಡಿ ಬೇರೆಡೆ ಹೋಗಲು ಖರೀದಿ ಮಾಡುವವರೇ ಇಲ್ಲ. ಒಟ್ಟಾರೆ ಮಾವಿನಕಾಡು ಗ್ರಾಮಸ್ಥರ ಬದುಕು ಅಯೋಮಯವಾಗಿದೆ. ಸರ್ಕಾರ ಉದ್ಯಾನ ಪ್ರದೇಶದ ಗಡಿ ಭಾಗದವರಿಗೂ ಪರಿಹಾರ ನೀಡಿದರೆ ಬಹುತೇಕ ಕುಟುಂಬಗಳು ಇಂತಹ ಸಮಸ್ಯೆಯಿಂದ ಹೊರಬರುತ್ತವೆ ಎಂಬುದು ನಿವಾಸಿಗಳ ಅಭಿಪ್ರಾಯ.

    ನಮ್ಮ ಹಳ್ಳಿ ರಾಷ್ಟ್ರೀಯ ಉದ್ಯಾನದ ಸಮೀಪ ಇರುವುದರಿಂದ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಕಾರ್ವಿುಕರಿಗೆ ದುಬಾರಿ ಸಂಬಳ, ಊಟ, ಕಾಫಿ ನೀಡಿ ಕೆಲಸ ಮಾಡಿಸಬೇಕು. ಹಳದಿ ಎಲೆ ರೋಗ, ಕಾಡು ಪ್ರಾಣಿಗಳ ಉಪಟಳದಿಂದ ಕೃಷಿ ಸಾಕೆನಿಸಿದೆ. ಈ ವರ್ಷ ನಿರಂತರ ಹೋರಾಟದ ಫಲವಾಗಿ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ನಮ್ಮ ಗ್ರಾಮದ ಪ್ರತಿ ಕುಟುಂಬಕ್ಕೂ ಸರ್ಕಾರ ಪರಿಹಾರ ಘೊಷಿಸಬೇಕು ಎನ್ನುತ್ತಾರೆ ಕೃಷಿಕ ಮಾವಿನಕಾಡು ರಂಗನಾಥ್.

    ಗ್ರಾಮ ಉದ್ಯಾನ ವ್ಯಾಪ್ತಿಯ ಗಡಿಯಲ್ಲಿದೆ. ಗ್ರಾಮಸ್ಥರು ಪಟ್ಟಣವನ್ನು ಸಂರ್ಪಸಬೇಕಾದರೆ 20 ಕಿ.ಮೀ ಕಠಿಣ ಹಾದಿಯನ್ನು ಕ್ರಮಿಸಬೇಕು. ಸರ್ಕಾರ ಇಲ್ಲಿನ ನಿವಾಸಿಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು ಎಂಬುದು ಜಿಪಂ ಸದಸ್ಯ ಬಿ.ಶಿವಶಂಕರ್ ಅಭಿಪ್ರಾಯ.

    ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನದ ಅವಶ್ಯವಿದೆ. ಅನುದಾನ ಬಂದಲ್ಲಿ ವಳಲೆ ರಸ್ತೆ ಕುರಿತು ಕೂಡಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎನ್ನುತ್ತಾರೆ ಶೃಂಗೇರಿ ತಾಪಂ ಇಒ ಸುದೀಪ್​ಕುಮಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts