More

    ದೇಶದ್ರೋಹದ ಘೋಷಣೆ ಕೂಗಲು ಕಾಂಗ್ರೆಸ್​ ಸರ್ಕಾರ ನೀಡಿರುವ ಪ್ರೋತ್ಸಾಹವೇ ಕಾರಣ: ಬಸವರಾಜ್ ಬೊಮ್ಮಾಯಿ

    ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ದೇಶದ್ರೋಹಿಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದ್ದು, ವಿಧಾನಸೌಧದೊಳಗೆ ದೇಶದ್ರೋಹದ ಘೋಷಣೆ ಕೂಗಲು ಕಾಂಗ್ರೆಸ್​ ಸರ್ಕಾರ ನೀಡಿರುವ ಪ್ರೋತ್ಸಾಹವೇ ಕಾರಣ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕೇವಲ ಮತಕ್ಕಾಗಿ ದೇಶದ ಭದ್ರತೆಯನ್ನು ಅಡ ಇಡುವಂತಹ ಕೆಲಸವನ್ನು ರಾಜ್ಯ‌‌ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿ ಅವರು ಮತ ಬ್ಯಾಂಕ್ ಓಲೈಕೆ ರಾಜಕಾರಣದ ಮುಸುಕು ಹಾಕಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬೇರೆ ಏನೂ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ‌ ನಂತರ ದೇಶದ್ರೋಹಿಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದ್ದು, ಅವರಿಗೆ ಧೈರ್ಯ ಬಂದಿದೆ. ವಿಧಾನಸೌಧಕ್ಕೆ ಬಂದು ದೇಶದ್ರೋಹದ ಘೋಷಣೆ ಕೂಗಲು ಈ ಸರ್ಕಾರ ನೀಡಿರುವ ಪ್ರೋತ್ಸಾಹವೇ ಕಾರಣ. ನಮ್ಮ ಸರ್ಕಾರ ಇದ್ದಾಗ ಇಂತಹ ಶಕ್ತಿಗಳನ್ನು ಸದೆಬಡಿದಿದ್ದೆವು. ಕಾಂಗ್ರೆಸ್‌ನವರು ಒಂದು ಕಡೆ ದೇಶವನ್ನು ಒಡೆಯುವ ಮಾತನಾಡುತ್ತಾರೆ, ಇನ್ನೊಂದೆಡೆ ದೇಶದ್ರೋಹಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಾರೆ.

    ಇದನ್ನೂ ಓದಿ: ವಯನಾಡು ಕಾಡಾನೆ ದಾಳಿ ಪ್ರಕರಣ; ಕರ್ನಾಟಕದ ಪರಿಹಾರ ಬೇಡ ಎಂದ ಮೃತನ ಕುಟುಂಬಸ್ಥರು, ಕಾರಣ ಹೀಗಿದೆ?

    ಕಾಂಗ್ರೆಸ್ ಪಕ್ಷದಿಂದ ಈ ದೇಶ, ನಾಡನ್ನು ಸುರಕ್ಷಿತವಾಗಿ ಇಡಲು ಸಾಧ್ಯವಿಲ್ಲ. ಅವರು ನೈತಿಕತೆ ಕಳೆದುಕೊಂಡಿದ್ದಾರೆ. ಜನ ಎಚ್ಚೆತ್ತುಕೊಂಡು ಎಷ್ಟು ಬೇಗ ಈ ಸರ್ಕಾರವನ್ನು ಕಿತ್ತೊಗೆಯುತ್ತಾರೋ ಅಷ್ಟು ಬೇಗ ಈ ನಾಡು ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ ಎಂದಿದ್ದಾರೆ.

    ಭಯೋತ್ಪಾದಕ ಚಟುವಟಿಕೆ ಮಾಡುತ್ತಿದ್ದ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ‌‌. ಅದು ಈಗ ಬೇರೆ ಬೇರೆ ರೂಪದಲ್ಲಿ ಕೆಲಸ ಮಾಡುತ್ತಿದೆ. ಈಚೆಗೆ ಹಾನಗಲ್ ನಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ. ನಮ್ಮ ಸರ್ಕಾರ ಇದ್ದಾಗ 15 ಕ್ಕೂ ಹೆಚ್ಚು ಸ್ಲೀಪರ್ ಸೆಲ್‌ಗಳನ್ನು ಜೈಲಿಗಟ್ಟಿದ್ದೆವು. ಡಿಜೆ ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ಮತ್ತು ಮಂಗಳೂರು ಘಟನೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಈಗ ಅಂತಹ ವಾತಾವರಣ ಇಲ್ಲ. ಬಿಲದಲ್ಲಿ ಅಡಗಿ ಕುಳಿತಿದ್ದವರು ಈಗ ಧೈರ್ಯವಾಗಿ ಹೊರಗೆ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts