More

    ಸಮಸ್ಯೆ ಎದುರಿಸುವ ಆತ್ಮಸ್ಥೈರ್ಯ ಮಕ್ಕಳಲ್ಲಿರಲಿ

    ಚಿತ್ರದುರ್ಗ: ಎಂತಹ ಸಮಸ್ಯೆ ಎದುರಾದರೂ ಅದನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಮಕ್ಕಳಲ್ಲಿರಬೇಕು. ಆ ನಿಟ್ಟಿನಲ್ಲಿ ತಯಾರು ಮಾಡಬೇಕು ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಶಿಕ್ಷಕರಿಗೆ ಸಲಹೆ ನೀಡಿದರು.

    ನೀಲಕಂಠೇಶ್ವರ ಸಮುದಾಯ ಭವನದಲ್ಲಿ ವೀರಶೈವ ಸಮಾಜದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ

    ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

    ಪ್ರಸ್ತುತ ದಿನಗಳಲ್ಲಿ ಚಿಕ್ಕ ವಿಷಯಕ್ಕೂ ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಕಂಡುಕೊಳ್ಳುತ್ತಿದ್ದಾರೆ. ಇದು ಖಂಡಿತ ಪರಿಹಾರವಲ್ಲ.

    ಆ ಮನಸ್ಥಿತಿಯಿಂದ ಹೊರಬರಲು ಮಕ್ಕಳಲ್ಲಿ ಗಟ್ಟಿತನ ಬೆಳೆಸಬೇಕಿದೆ ಎಂದು ಕಿವಿಮಾತು ಹೇಳಿದರು.

    ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಭವಿಷ್ಯ ರೂಪಿಸಿಕೊಳ್ಳುವ ವೇಳೆ ದಾರಿ ತಪ್ಪಿದರೆ, ಬದುಕಿನುದ್ದಕ್ಕೂ ಪಶ್ಚಾತಾಪ ತಪ್ಪಿದ್ದಲ್ಲ. ಪಾಲಕರ ಶ್ರಮ ಅರಿತು ಗುರಿ ಸಾಧನೆಯತ್ತ ದಾಪುಗಾಲಿಡಬೇಕು.

    ಮೊಬೈಲ್‌ನಿಂದಾಗಿಯೂ ಚುರುಕುತನ ಕಡಿಮೆಯಾಗುತ್ತಿದೆ. ಇದನ್ನು ಮಕ್ಕಳ ಕೈಗೆ ಕೊಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.

    ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿದೆ. ಅದನ್ನು ಹೊರತೆಗೆಯಲು ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದ್ದು, ಪಾಲಕರು, ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು.

    ಉತ್ತಮ ಪ್ರಜೆಗಳನ್ನಾಗಿ ರೂಪಿಸಿ, ಭವ್ಯ ಭಾರತ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಲ್ಲುವಂತೆ ತಯಾರು ಮಾಡಬೇಕಿದೆ ಎಂದು ಸಲಹೆ ನೀಡಿದರು.

    ಮುಖಂಡ ಕೆ.ಸಿ.ನಾಗರಾಜ್ ಮಾತನಾಡಿ, ಪ್ರತಿಭೆ ಯಾರ ಸ್ವತ್ತಲ್ಲ. ಆಳ ಅಧ್ಯಯನ ಜ್ಞಾನ ವೃದ್ಧಿಗೆ, ಅಧಿಕ ಶ್ರಮ ದುಡಿಮೆಗೆ ಸಹಕಾರಿಯಾಗಿದೆ. ಕೌಶಲ ಇದ್ದೆಡೆ ಬೇಡಿಕೆ ಅಧಿಕ.

    ಆದ್ದರಿಂದ ಮಕ್ಕಳು ಚಿಕ್ಕಂದಿನಿಂದಲೇ ನೈಪುಣ್ಯ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
    ಕೋಟೆನಗರಿಯಲ್ಲಿ ಹಲವು ಪುತ್ಥಳಿ, ಪ್ರತಿಮೆಗಳಿವೆ. ಆದರೆ, ಮಹಾ ದಾರ್ಶನಿಕ ಬಸವಣ್ಣ ಅವರ ಪ್ರತಿಮೆ ಇಲ್ಲ.

    ಈ ಕುರಿತು ಶಾಸಕರ ಜೊತೆಗೆ ಸಮಾಜದ ಮುಖಂಡರು ಚರ್ಚಿಸಿ ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

    ಸಮಾಜದ ಉಪಾಧ್ಯಕ್ಷ ಎಸ್.ವಿ.ನಾಗರಾಜಪ್ಪ, ಕಾರ್ಯದರ್ಶಿ ಎನ್.ಬಿ.ವಿಶ್ವನಾಥ್, ಕೋಕಿಲಾ, ಮೋಕ್ಷಾ, ಪ್ರಕಾಶ್, ಷಡಾಕ್ಷರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts