More

    ಕಲ್ಯಾಣದಲ್ಲಿ ಕಣ್ಮನ ಸೆಳೆಯಲಿದೆ ಸಂಗೀತ ಕಾರಂಜಿ

    ಬಸವಕಲ್ಯಾಣ: ಐತಿಹಾಸಿಕ ತ್ರಿಪುರಾಂತ ಕೆರೆ ದಡದಲ್ಲಿ ಬಣ್ಣ-ಬಣ್ಣದ ಕಾರಂಜಿಯೊಂದಿಗೆ ಸಂಗೀತ ಅಲೆ ತೇಲಿ ಬರಲಿದ್ದು, ಕೆರೆಯ ಸೊಬಗು ಹೆಚ್ಚಿಸುವ ಜತೆಗೆ ಕಣ್ಮನ ಸೆಳೆಯಲಿದೆ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಆಯುಕ್ತ ರಮೇಶ ಕೋಲಾರ ತಿಳಿಸಿದರು.

    ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬಿಕೆಡಿಬಿ ಮತ್ತು ಸರ್ಕಾರದಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಮಂಡಳಿ ೩.೩೫ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮಕ್ಕಳ ಉದ್ಯಾನ ಮತ್ತು ಸಂಗೀತ ಕಾರಂಜಿ ಬುಧವಾರ ಲೋಕಾರ್ಪಣೆ ಆಗಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಲಿದ್ದು, ಧ್ವನಿ ಬೆಳಕಿನ ಸಂಗೀತ ಕಾರಂಜಿ ವೀಕ್ಷಣೆಗೆ ೪೦೦ ಆಸನ ವ್ಯವಸ್ಥೆ ಮಾಡಲಾಗಿದೆ. ಪ್ಲಾಂಟೇಶನ್, ಮೆಕ್ಸಿಕನ್ ಲಾನ್, ಪಾದಚಾರಿ ರಸ್ತೆ ಬದಿಯಲ್ಲಿ ಹೆಡ್ಜ್, ಸ್ಟ್ರಿಂಕ್ಲರ್ ಸಿಸ್ಟಮ್ ಇತರ ವ್ಯವಸ್ಥೆ ಮಾಡಲಾಗಿದೆ. ಪರಿಸರ, ಜಾಗತಿಕ ತಾಪಮಾನ ಅರಿವು, ಹಸಿರು ಮನೆ ಪರಿಣಾಮ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಲಾಗಿದೆ ಎಂದರು.

    ಬಿಕೆಡಿಬಿಯಿಂದ ಬಂದವರ ಓಣಿಯಲ್ಲಿ ನಿರ್ಮಿಸಿದ ಕಲ್ಯಾಣ ಮಂಟಪ ಹಾಗೂ ಮಕ್ಕಳ ಉದ್ಯಾನವನ ಮತ್ತು ಸಂಗೀತ ಕಾರಂಜಿ ಲೋಕಾರ್ಪಣೆ ಬುಧವಾರ ಸಂಜೆ ೭ಕ್ಕೆ ನಡೆಯಲಿದೆ. ಎಲ್ಲ ಪೂಜ್ಯರ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ರಹೀಮ್ ಖಾನ್, ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ರಘುನಾಥರಾವ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್, ಶಶೀಲ್ ನಮೋಶಿ, ಭೀಮರಾವ ಪಾಟೀಲ್ ಮುಖ್ಯ ಅತಿಥಿಗಳಾಗಿರುವರು. ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ, ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಎಸಿ ಪ್ರಕಾಶ ಕುದರಿ ಭಾಗವಹಿಸುವರು ಎಂದು ವಿವರಿಸಿದರು.

    ಬಿಕೆಡಿಬಿಯಿಂದ ೪.೫೭ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಂದವರ ಓಣಿ ಕಲ್ಯಾಣ ಮಂಟಪವೂ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಒಂದು ಸಾವಿರ ಆಸನ, ಬೃಹತ್ ವೇದಿಕೆ, ೨ ಡ್ರೆಸ್ಸಿಂಗ್ ರೂಂ, ಊಟ, ಅಡುಗೆ ಕೋಣೆ, ಪಾರ್ಕಿಂಗ್, ಮಹಿಳೆ, ಪುರುಷರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ.
    | ರಮೇಶ ಕೋಲಾರ ಬಿಕೆಡಿಬಿ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts