More

    ರಾಜ್ಯ ಮಟ್ಟದ ವಚನ ಕಂಠಪಾಠ ಸ್ಪರ್ಧೆ

    ಬಸವಕಲ್ಯಾಣ: ಶರಣ ಕಮ್ಮಟ ಅನುಭವ ಮಂಟಪ ಉತ್ಸವ ನಿಮಿತ್ತ ಅನುಭವ ಮಂಟಪದಲ್ಲಿ ರಾಜ್ಯ ಮಟ್ಟದ ಬಸವಣ್ಣನವರ ವಚನ ಕಂಠಪಾಠ ಹಾಗೂ ಜಿಲ್ಲಾ ಮಟ್ಟದ ವಚನ ಗಾಯನ, ವಚನ ಭಾಷಣ, ವಚನ ಭಾವಾರ್ಥ ಬರವಣಿಗೆ ಸ್ಪರ್ಧೆಗೆ ಭಾನುವಾರ ಬೆಳಗ್ಗೆ ಚಾಲನೆ ನೀಡಲಾಯಿತು.

    ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರು ೧೨ನೇ ಶತಮಾನದಲ್ಲಿ ವಚನ ಸಾಹಿತ್ಯ ರಚನೆಯಾದ ಕಲ್ಯಾಣದ ನೆಲದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಮಾರ್ಗದರ್ಶನದಲ್ಲಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಲ್ಲಿ ಬಸವಾದಿ ಶರಣರ ವಚನ ಮೌಲ್ಯ ಬಿತ್ತಬೇಕು ಎಂಬುದೇ ಪೂಜ್ಯರ ಆಶಯ ಎಂದರು.

    ಹಲವು ವರ್ಷಗಳಿಂದ ರಾಜ್ಯ ಮಟ್ಟದ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಬೆಳಗಾವಿ, ರಾಯಚೂರು, ಧಾರವಾಡ, ಕಲಬುರಗಿ, ಬಾಗಲಕೋಟೆ, ಬೀದರ್ ಸೇರಿ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳ ಜತೆಗೆ ಹಿರಿಯರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
    ಉದ್ಯಮಿ, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಮಾತನಾಡಿ, ವಿಶ್ವಗುರು ಬಸವಣ್ಣನವರು ಶ್ರೇಷ್ಠ ದಾರ್ಶನಿಕರು, ಕ್ರಾಂತಿ ಪುರುಷರು. ಅವರ ಕಾಯಕ ಭೂಮಿ ಕಲ್ಯಾಣ ನಾಡಿನ ನೆಲದಲ್ಲಿ ಜನ್ಮ ತಾಳಿರುವುದೇ ನಮ್ಮೆಲ್ಲರ ಪುಣ್ಯ ಎಂದರು.

    ಬಿ.ಕಾಂತಾಮಣಿ, ಮರಿಸ್ವಾಮಿ ಬಸವ ಗುರುಪೂಜೆ ನೆರವೇರಿಸಿದರು. ಅಧ್ಯಕ್ಷ ಶಶಿಕಾಂತ ದುರ್ಗೆ, ಅನುಭವ ಮಂಟಪ ಟ್ರಸ್ಟ್ ಉಪಾಧ್ಯಕ್ಷ ವೈಜನಾಥ ಕಾಮಶೆಟಿ,್ಟ ಭಂಡಾರಿ ಶರಣರು, ಶಿವರಾಜ ನೀಲಕಂಠೆ, ವಿಶ್ವನಾಥಪ್ಪ ಬಿರಾದಾರ, ಮಲ್ಲಮ್ಮ ಆರ್.ಪಾಟೀಲ್, ಸುವರ್ಣಾ ಚಿಮಕೋಡೆ, ಮಹಾದೇವಪ್ಪ ಇಜಾರೆ, ಜಗನ್ನಾಥ ಕುಶನೂರೆ, ನೀಲಕಂಠ ಇತರರಿದ್ದರು.

    ಬಾಬು ಸ್ವಾಗತಿಸಿದರು. ಸವಿತಾ ಭೂರೆ ವಂದಿಸಿದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ಕವಿತಾ ಶಿವದಾಸ ಸ್ವಾಮಿ ವಚನ ಪ್ರಾರ್ಥನೆ ಮಾಡಿದರು.

    ಜಾಗತಿಕ ಸಮಸ್ಯೆಗೆ ಪರಿಹಾರ ಮತ್ತು ಆದರ್ಶ ಬದುಕಿನ ಮೌಲ್ಯ ವಚನ ಸಾಹಿತ್ಯದಲ್ಲಿದೆ. ಶರಣರ ವಚನ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಯತ್ನಿಸಿದಾಗ ಜೀವನದಲ್ಲಿ ಶಾಂತಿ-ನೆಮ್ಮದಿ, ಸಾರ್ಥಕತೆ ಕಾಣಲು ಸಾಧ್ಯ. ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲು ವಚನ ಕಂಠಪಾಠ ಸೇರಿ ವಚನ ಕುರಿತ ವಿವಿಧ ಸ್ಪರ್ಧೆ ಆಯೋಜಿಸಿ ಪೂಜ್ಯರು ಮಹತ್ವದ ಕಾರ್ಯ ಮಾಡುತ್ತಿದ್ದಾರೆ.
    | ಧನರಾಜ ತಾಳಂಪಳ್ಳಿ ಕಾಂಗ್ರೆಸ್ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts