More

    ವಚನ ಸಂರಕ್ಷಿಸುವಲ್ಲಿ ಅಂಬಿಗರ ಕೊಡುಗೆ ಅಪಾರ

    ಬಸವಕಲ್ಯಾಣ: ಅನುಭವ ಮಂಟಪದಲ್ಲಿ ಅಂದು ನಿಜಶರಣ ಅಂಬಿಗರ ಚೌಡಯ್ಯನವರಿಗೆ ವಿಶಿಷ್ಟ ಸ್ಥಾನವಿತ್ತು. ನಿಜಶರಣ ಬಿರುದು ನೀಡಲಾಗಿತ್ತು. ಕಲ್ಯಾಣದಲ್ಲಿ ಅವರಿಗೆ ಸರಿಯಾದ ಗೌರವ, ಪ್ರಾಧ್ಯಾನ್ಯ ನೀಡಲು ತ್ರಿಪುರಾಂತ ಕೆರೆಯಲ್ಲಿ ಬೃಹತ್ ಮೂರ್ತಿ ಸ್ಥಾಪಿಸುವಂತೆ ಹಾವೇರಿ ಜಿಲ್ಲೆ ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಜಗದ್ಗುರುಗಳು ಒತ್ತಾಸೆ ವ್ಯಕ್ತಪಡಿಸಿದರು.

    ಸಸ್ತಾಪುರ ಬಂಗ್ಲಾದ ಬಿ.ನಾರಾಯಣರಾವ ಲೇಔಟ್‌ನಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಅಂಬಿಗರ ಚೌಡಯ್ಯ ಮತ್ತು ಶ್ರೀ ಸಮರ್ಥ ಸದ್ಗುರು ಭೀಮಾಶಂಕರ ಮಹಾಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ವಚನಗಳನ್ನು ಸಂರಕ್ಷಿಸುವಲ್ಲಿ ಅಂಬಿಗರ ಚೌಡಯ್ಯ ಕೊಡುಗೆ ದೊಡ್ಡದು ಎಂದು ಬಣ್ಣಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಅನುಭವ ಮಂಟಪ ಮೂಲಕ ಬಸವಾದಿ ಶರಣರು ಸಮಸಮಾಜ ನಿರ್ಮಿಸಿ ಸಾಮಾಜಿಕ ನ್ಯಾಯ ಕಲ್ಪಿಸಿದ್ದರು. ಇದರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರಮುಖ ಪಾತ್ರ ವಹಿಸಿದ್ದರು. ಮಹಾತ್ಮರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಆಳವಡಿಕೊಳ್ಳಬೇಕು ಎಂಬುದು ಮೂರ್ತಿ ಸ್ಥಾಪನೆ ಹಿಂದಿನ ಆಶಯ ಎಂದರು.

    ಶಾಸಕ ಶರಣು ಸಲಗರ ಮಾತನಾಡಿ, ದಿ. ಬಿ.ನಾರಾಯಣರಾವ ಸುದೀರ್ಘ ಸಂಘರ್ಷದ ಮೂಲಕ ಶಾಸಕರಾಗಿದ್ದರು. ನಾಯಕತ್ವದ ಗುಣ ಅವರಲ್ಲಿತ್ತು. ಹಿಂದುಳಿದ ಬಡವರ ಧ್ವನಿಯಾಗಿದ್ದರು. ಕೋಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾ ಬದ್ಧ. ಯಾವುದೇ ಕೆಲಸವಿದ್ದರೂ ನನ್ನ ಮನೆಗೆ ಬನ್ನಿ. ೨೪ ಗಂಟೆ ನಿಮ್ಮ ಸೇವೆಗೆ ಸಿದ್ಧ ಎಂದು ಹೇಳಿದರು.

    ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಬಿ.ನಾರಾಯಣರಾವ ಸಮಾಧಿ ಸ್ಥಳ ಅಭಿವೃದ್ಧಿಗೆ ೧೦ ಲಕ್ಷ ಅನುದಾನ ಕಲ್ಪಿಸಿದ್ದೇನೆ. ಮೂರು ವರ್ಷವೂ ೧೦ ಲಕ್ಷ ಅನುದಾನ ಕೊಡುವೆ. ಸಮಾಜದ ಸಮಸ್ಯೆಗಳಿಗೆ ಸ್ಥಳೀಯ ಶಾಸಕರು ಸ್ಪಂದಿಸಬೇಕು. ಸಮಾಜದ ಜನರಿಗೆ ಎಸ್‌ಟಿ ಪ್ರಮಾಣಪತ್ರ ಕೊಡಿಸಬೇಕು ಎಂದು ಸಲಹೆ ನೀಡಿದರು.

    ಮಾಜಿ ಶಾಸಕ ಎಂ.ಜಿ. ಮುಳೆ ಮಾತನಾಡಿ, ಅಸ್ಮಿತೆ ಮತ್ತು ಸ್ವಾಭಿಮಾನದಲ್ಲಿ ಕೋಲಿ ಸಮಾಜ ಅತ್ಯಂತ ಶ್ರೀಮಂತವಾಗಿದೆ. ಸಣ್ಣ-ಪುಟ್ಟ ಭೀನ್ನಾಭಿಪ್ರಾಯಗಳನ್ನು ಮರೆತು ಸಮಾಜದ ಜನರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

    ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ೫೦೦ ಕೋಟಿ ಅನುದಾನ ಕಲ್ಪಿಸಬೇಕು ಎಂದು ಕೋರಿದರು.

    ಪೌರಾಡಳಿತ ಸಚಿವ ರಹೀಮ್ ಖಾನ್, ಗುಣತೀರ್ಥ ವಾಡಿಯ ಶ್ರೀ ಬಸವಪ್ರಭು ಸ್ವಾಮೀಜಿ, ಸಮಾಜದ ಮುಖಂಡ ಶಿವಾಜಿ ಮೇಟಕರ ಹಾಗೂ ಸೊಲ್ಲಾಪುರದ ಮುಖಂಡ ಶರತ್ ದಾದಾ ಮಾತನಾಡಿದರು.

    ಸಾನ್ನಿಧ್ಯ ವಹಿಸಿದ್ದ ತೊನಸನಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಶ್ರೀ ಮಲ್ಲಣ್ಣಪ್ಪ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಗುರು ರತ್ನಕಾಂತ ಶಿವಯೋಗಿಗಳು ಅಧ್ಯಕ್ಷತೆ, ಸಸ್ತಾಪುರ ಯಲ್ಲಾಲಿಂಗ ಆಶ್ರಮದ ಮಾತಾ ಮಹಾದೇವಿ, ತ್ರಿಪುರಾಂತ ಗವಿ ಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಹಾಪುರದ ಶ್ರೀ ರಾಜು ಗುರು, ಉರಿಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ವಾಲ್ಮೀಕಿ ರಾಮ ಮಹಾರಾಜ ಹಳ್ಳಿಖೇಡ(ಕೆ), ಮಾತೋಶ್ರೀ ವನಮಾಲಾ ತಾಯಿ ಸಮ್ಮುಖ ವಹಿಸಿದ್ದರು.

    ಪ್ರಮುಖರಾದ ಶಾಂತಪ್ಪ ಜಿ.ಪಾಟೀಲ್, ನೀಲಕಂಠ ರಾಠೋಡ್, ರಾಮಣ್ಣ ಮಂಠಾಳೆ, ಜಗನ್ನಾಥ ಜಮಾದಾರ, ಶಂಕರರಾವ ಜಮಾದಾರ, ಸೋಮನಾಥರಾವ, ದಿಲೀಪ ಸಿಂಧೆ, ಬಸವರಾಜ ಸ್ವಾಮಿ, ಗೋವಿಂದ ಚಾಮಾಲೆ, ವಾಲ್ಮೀಕಿ ಖನಕೂರೆ, ನಿರ್ಮಲಾ ಶಿವಣಕರ, ರಾಮ ಜಾಧವ್, ಜಯಶ್ರೀ ಕಟ್ಟಿಮನಿ, ಬಸವರಾಜ ಹೇಡೆ, ಅಮೃತರಾವ ಚಿಮಕೋಡ, ಇಇ ರಾಜಕುಮಾರ ಸಾಹುಕಾರ, ಮಾಣಿಕ ನೇಳಗಿ, ಚನ್ನವೀರ ಜಮಾದಾರ, ದತ್ತು ಪದ್ಮೆ, ಮಲ್ಲಿಕಾರ್ಜುನ ಬೊಕ್ಕೆ, ಚಂದ್ರಕಾಂತ ಮೇತ್ರೆ, ಯುವರಾಜ ಭಂಡೆ, ಸಂಜು ಗಾಯಕವಾಡ, ಪಿಂಟು ಕಾಂಬಳೆ, ಸಮಿತಿ ಪ್ರಮುಖರಾದ ಗೋವಿಂದ ಚಾಮಲ್ಲೆ, ರಾಜು ಇರಲೆ, ರಾಜಕುಮಾರ ಹೊಸಮನಿ, ರೇಖಾ ಹೊಸಮನಿ, ನಾಗನಾಥ ಚಾಮಲ್ಲೆ, ದತ್ತು ಪದ್ಮೆ, ಷಣ್ಮುಖಪ್ಪ ಬೊಕ್ಕೆ ಇತರರಿದ್ದರು. ಕಲಾವಿದ ನವಲಿಂಗ ಪಾಟೀಲ್, ಶಿಕ್ಷಕ ಮಲ್ಲಪ್ಪ ಕೋಟೆ ನಿರೂಪಣೆ ಮಾಡಿದರು.

    ರಾಜ್ಯದಲ್ಲಿ ಇತಿಹಾಸ ನಿರ್ಮಿಸುವ ಶಕ್ತಿ ಕೋಲಿ ಸಮಾಜಕ್ಕಿದೆ. ಇದು ಗುಲಾಮಗಿರಿ ಮಾಡುವ ಸಮಾಜಅಲ್ಲ, ಆಳುವ ಸಮಾಜ. ಶ್ರೇಷ್ಠ ಇತಿಹಾಸ ಮತ್ತು ಪರಂಪರೆ ಸಮಾಜಕ್ಕಿದೆ. ಸಮಾಜದ ಜನರು ಜಾಗೃತರಾಗಿ ಇತಿಹಾಸ ತಿಳಿದುಕೊಳ್ಳಬೇಕು
    | ಶ್ರೀ ಮಲ್ಲಣಪ್ಪ ಸ್ವಾಮೀಜಿ ತೊನಸನಳ್ಳಿ

    ಟೋಕರಿ-ಕೋಲಿ, ಕುರುಬ ಸಮುದಾಯದವರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ನೀಡುವ ಕುರಿತು ೨೦೧೪ರಲ್ಲೇ ನಮ್ಮ ಸರ್ಕಾರವಿದ್ದಾಗ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಎಂಟು ವರ್ಷವಾದರೂ ಕ್ರಮ ಕೈಗೊಂಡಿಲ್ಲ. ಈ ಸಮುದಾಯದ ಜನರಿಗೆ ಎಸ್‌ಟಿ ಪ್ರಮಾಣಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮಾಜದ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಬಿ.ನಾರಾಯಣರಾವ ಸಮಾಧಿ ಸ್ಥಳ ಅಭಿವೃದ್ಧಿಗೆ ಅನುದಾನ ಕಲ್ಪಿಸಲಾಗುವುದು.
    | ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts