More

    ಎಲ್ಲ ವರ್ಗಕ್ಕೂ ಸಮಾನ ಅವಕಾಶ ಸಿಗಲಿ: ಬಸವಧಾಮದ ಶರಣೆ ಬಸವರಾಜೇಶ್ವರಿ ಮಾತಾಜಿ ಅಭಿಮತ

    ಮಂಡ್ಯ: ಬಸವಣ್ಣ ಅವರು ಜಗತ್ತನ್ನು ನೋಡಿದ ಪರಿಯೇ ಬೇರೆ. ನಾವು ನೋಡುವ ದೃಷ್ಟಿಯೇ ಬೇರೆ. ನಮಗೆ ಸಿಗುವ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕು ಎನ್ನುವುದು ಅವರ ಧ್ಯೇಯವಾಗಿತ್ತು. ಎಲ್ಲ ವರ್ಗದವರಿಗೂ ಸಮಾನ ಅವಕಾಶಗಳು ಸಿಗಬೇಕೆಂಬುದು ಅವರ ವಿಚಾರಧಾರೆಯಾಗಿತ್ತು ಎಂದು ಮುಂಡಗೋಡು ಅತ್ತಿವೇರಿ ಬಸವಧಾಮದ ಶರಣೆ ಬಸವರಾಜೇಶ್ವರಿ ಮಾತಾಜಿ ತಿಳಿಸಿದರು.
    ನಗರದ ವೀರಶೈವ ವಿದ್ಯಾರ್ಥಿ ನಿಲಯ ಆವರಣದಲ್ಲಿ ಜಿಲ್ಲಾ ಬಸವ ಸಮಿತಿ, ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಜಿಲ್ಲಾ ಬಸವ ಸಮಿತಿಯ ಆಜೀವ ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.
    ತಾಯಿ ಗರ್ಭಿಣಿಯಾಗಿದ್ದಾಗಲೇ ಮಕ್ಕಳಿಗೆ ಸಂಸ್ಕಾರ ಕಲಿಯುವ ಗುಣವಿರುತ್ತದೆ. ಧರ್ಮ ಸಂಸ್ಕಾರವಿಲ್ಲದೆ ಮಕ್ಕಳನ್ನು ಬೆಳೆಸಿದರೆ ನಮ್ಮೆದುರಿಗೇ ಅವರು ಕಳೆದುಹೋಗುತ್ತಾರೆ. ಧರ್ಮವನ್ನು ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕು. ಲಿಂಗಾಯಿತ ಧರ್ಮಕ್ಕೆ ಜಗತ್ತಿಗೆ ಮಾರ್ಗದರ್ಶನ ಮಾಡುವ ಶಕ್ತಿಯಿದೆ ಎಂದು ಅಭಿಪ್ರಾಯಪಟ್ಟರು.
    ಬೇಬಿಬೆಟ್ಟ ಬೆಟ್ಟದ ಶ್ರೀರಾಮ ಯೋಗೀಶ್ವರ ಮಠದ ಶಿವಬಸವಸ್ವಾಮೀಜಿ ಮಾತನಾಡಿ, ಬಸವಣ್ಣ ಅವರನ್ನು ದೇವರ ಸಮಾನವಾಗಿ ಪೂಜಿಸುತ್ತೇವೆ. ಆದರೆ ಅವರ ತತ್ವ ಆದರ್ಶಗಳನ್ನು ಆಚರಿಸುತ್ತಿಲ್ಲ. ಬಸವಣ್ಣ ಹೇಳಿದಂತೆ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ ಎಂಬ ವಚನದ ಸಾರವನ್ನು ಮಕ್ಕಳಿಗೆ ಕಲಿಸುತ್ತಿಲ್ಲ. ವಿದ್ಯೆ ಕಡಿಮೆಯಾದರೂ ನಡತೆ ಶುದ್ಧವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
    ಮಕ್ಕಳಿಗೆ ನಾವು ಯಾವ ಸಂಸ್ಕಾರವನ್ನು ಕಲಿಸುತ್ತಿದ್ದೇವೆ. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ ಎಂಬ ತತ್ವದಂತೆ ಚಿಕ್ಕಂದಿನಲ್ಲೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ವಿಭೂತಿ ಧರಿಸಿದರೆ ಮನಸ್ಸು ನಿಷ್ಕಲ್ಮಶವಾಗುತ್ತದೆ. ಇಷ್ಟಲಿಂಗದ ನಿಷ್ಠೆ ಪಾಲಿಸಬೇಕು. ಇಂದು ಶಿವಕುಮಾರಸ್ವಾಮೀಜಿಗಳು ನಮಗೆಲ್ಲ ಆದರ್ಶ. ಅವರು ತಮಗಾಗಿ ಏನನ್ನು ಮಾಡಿಕೊಳ್ಳದೆ ತಮ್ಮದನ್ನೆಲ್ಲ ಜಗತ್ತಿಗೆ ನೀಡಿದ ತ್ಯಾಗಮಯಿ. ಮಕ್ಕಳಿಗೆ ಅನ್ನ, ವಿದ್ಯೆ, ಜ್ಞಾನ, ಆಶ್ರಯ ದಾಸೋಹ ನೀಡಿದವರು ಎಂದು ಬಣ್ಣಿಸಿದರು.
    ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಳವಳ್ಳಿ ತಾಲೂಕು ಬಿ.ಜಿ ಪುರ ಹೊರಮಠದ ಚಂದ್ರಶೇಖರ ಸ್ವಾಮೀಜಿ, ಮಕ್ಕಳು ವಿದ್ಯಾವಂತರಾಗದಿದ್ದರೂ ಸುಸಂಸ್ಕೃತವಂತರಾಗಬೇಕು. ಲಕ್ಷಾಂತರ ರೂ ಕೊಟ್ಟು ಒಳ್ಳೆಯ ಶಾಲೆಯಲ್ಲಿ ಓದಿಸಬೇಕು ಎಂಬುದಷ್ಟೇ ತಾಯಿಯ ಗುರಿಯಾಗಿರುತ್ತದೆ. ಆದರೆ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡಬೇಕು. ಒಳ್ಳೆಯ ಸ್ಕೂಲಲ್ಲಿ ಶಿಕ್ಷಣ ಕೊಡಿಸಿದರೆ ಹಾಗೂ ವಿದ್ಯಾವಂತನಾದರೆ ಸಾಲದು. ಸುಸಂಸ್ಕೃತರಾಗುವಂತೆ ನೋಡಿಕೊಳ್ಳಬೇಕು. ಧರ್ಮದ ಬಗ್ಗೆ ಅರಿವು ಮೂಡಿಸಬೇಕು. ಕಾಯಕದ ಮಹತ್ವ ಹೇಳಿಕೊಡಬೇಕು. ಮಕ್ಕಳಿಗೆ ಬುದ್ದಿ ಹೇಳಿದರೆ ಏನಾಗುತ್ತದೆಯೋ ಎಂಬ ಭಯ ತಾಯಂದಿರಲ್ಲಿ ಆವರಿಸಿದೆ. ಬಸವಣ್ಣನ ಚಿಂತನೆ ಆಚರಣೆಗೆ ಬರಬೇಕು.ಆಗ ಬದುಕು ಸಾರ್ಥಕವಾಗುತ್ತದೆ. ಎಂದರು.
    ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ವಕೀಲ ಎಂ.ಬಿ.ರಾಜಶೇಖರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಕೆಂಪಯ್ಯ, ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟ್ ಕಾರ್ಯದರ್ಶಿ ಎಂ.ಎಸ್.ಶಿವಪ್ರಕಾಶ್, ಶರಣ ಸಿ.ಬಸವಣ್ಣ ಇತರರಿದ್ದರು.
    ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಸವೇಶ್ವರರ ಪುತ್ಥಳಿ ಮತ್ತು ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನವೀಕರಣಗೊಂಡ ಅತಿಥಿಗೃಹ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts