More

    ಮನುಕುಲಕ್ಕಾಗಿ ಬಸವಧರ್ಮ ಸ್ಥಾಪನೆ: ಕೋಡಿಮಠದ ಶ್ರೀ ಅಭಿಮತ

    ಹೊಸದುರ್ಗ: ಮನುಕುಲದ ಒಳಿತಿಗಾಗಿ ಬಸವಧರ್ಮ ಸ್ಥಾಪನೆ ಮಾಡಲಾಗಿದ್ದು, ಜಾತಿ ರಹಿತ ಏಕೈಕ ಧರ್ಮವಾಗಿದೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

    ಅರಸೀಕೆರೆ ತಾಲೂಕು ಹಾರನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಭಕ್ತ ಮತ್ತು ಭವಿ ಎನ್ನುವ ಎರಡು ಜಾತಿಗಳನ್ನು ಹೊಂದಿರುವ ಲಿಂಗಾಯತ ಜಾತಿಯಲ್ಲ. ಬದಲಾಗಿ ಜಗತ್ತಿನ ಸಮಾನತೆಯ ಸಂಕೇತವಾಗಿದೆ. ಗುರು-ಲಿಂಗ-ಜಂಗಮಗಳ ಸಂಗಮವೇ ಲಿಂಗಾಯತ ಧರ್ಮ. ಜಾತಿ, ವರ್ಗ, ಶೋಷಣೆ ರಹಿತ ಸಮಾಜ ನಿರ್ವಣವೇ ಲಿಂಗಾಯಿತ ಧರ್ಮದ ಮೂಲ ಆಶಯ ಎಂದರು.

    12ನೇ ಶತಮಾನದಲ್ಲಿ ಹೆಣ್ಣು ಮಕ್ಕಳನ್ನು ದಾಸಿಯರನ್ನಾಗಿ ಕಾಣುತ್ತಿದ್ದರು, ಶ್ರಮಿಕರನ್ನು ಅಸ್ಪಶ್ಯರೆಂದು ದೂರ ಇಟ್ಟಿದ್ದರು. ಇದನ್ನು ಗಮನಿಸಿದ ಬಸವಣ್ಣ ಚಿಂತನ-ಮಂಥನ ನಡೆಸಿ ಸಮಸಮಾಜ ನಿರ್ವಣದ ಸಾಮಾಜಿಕ ಪರಿವರ್ತನೆಗೆ ಮಂದಡಿಯಿಟ್ಟರು ಎಂದು ಹೇಳಿದರು.

    ಬಸವಣ್ಣ ಮತ್ತು ಬುದ್ಧ ಇಬ್ಬರು ಮಾತ್ರ ನುಡಿದಂತೆ ನಡೆದವರು. ವಿಲೋಮ ವಿವಾಹದಿಂದಾಗಿ ಬಸವಣ್ಣನ ಕಲ್ಯಾಣದಲ್ಲಿ ಕ್ರಾಂತಿಯಾಯಿತು. ಬಸವಣ್ಣ ಮತಾಂತರ ಮಾಡಲಿಲ್ಲ, ರೂಪಾಂತರ ಮಾಡಿದರು. ಬಸವಣ್ಣ ಕಲ್ಯಾಣ ಪ್ರಧಾನ ಮಂತ್ರಿಯಾಗಿದ್ದರೂ ಶರಣ ಧರ್ಮಕ್ಕಾಗಿ ಪದವಿಯನ್ನೇ ಬಿಟ್ಟುಕೊಟ್ಟು ಮನುಕುಲಕ್ಕೆ ಬೆಳಕು ನೀಡಲು ಶ್ರಮಿಸಿದರು ಎಂದರು.

    ಮಾಜಿ ಶಾಸಕ ವೈಎಸ್​ವಿ ದತ್ತ ಮಾತನಾಡಿ, ನಾಡು ಮತ್ತೆ ಕಲ್ಯಾಣವಾಗಬೇಕಾದರೆ ಬಸವಣ್ಣ ತಂದ ರಾಜಕೀಯ ಪರಿವರ್ತನೆ ತುರ್ತಾಗಿ ಆಗಬೇಕಿದೆ. ರಾಜಕೀಯ ಕೆಟ್ಟುಹೋಗಿದೆ. ಜನರಲ್ಲಿ ರಾಜಕಾರಣಿಗಳ ಬಗ್ಗೆ ಬೇಸರ, ಸಿಟ್ಟು, ಅಸಹ್ಯವಿದೆ ಎಂದು ಬೇಸರಿಸಿದರು.

    ಬಸವಣ್ಣ ಜನರನ್ನು ಕೂಡಲಸಂಗಮದೇವ ಎಂದು ಭಾವಿಸಿದ್ದರು. ಈ ಭಾವನೆ ಇಂದಿನ ಜನಪ್ರತಿನಿಧಿಗಳಲ್ಲಿ ಬಂದರೆ ಕಲ್ಯಾಣ ತನ್ನಿಂದ ತಾನೇ ಆಗುವುದು. ಬಸವಣ್ಣನ ಪರಿಕಲ್ಪನೆಯೇ ಗಾಂಧಿ ಮತ್ತು ಅಂಬೇಡ್ಕರ್ ಚಿಂತನೆಗಳಲ್ಲಿ ಕಾಣಬಹುದು. ಗಾಂಧೀಜಿಯ ಅಪವರ್ಗೀಕರಣ, ಅಂಬೇಡ್ಕರ್ ಅವರ ಆತ್ಮವಿಶ್ವಾಸದ ನಡೆ ಇದನ್ನು ಸಾಕ್ಷೀಕರಿಸುತ್ತದೆ ಎಂದು ತಿಳಿಸಿದರು.

    ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ, ಬಸವಲಿಂಗಪ್ಪ, ಸಿದ್ದೇಶ್, ಎಚ್.ಎಂ.ಉಮೇಶ್ ಮತ್ತಿತರಿದ್ದರು.

    ನಾಡಿನಲ್ಲಿ ಪ್ರಜೆಗಳೇ ಪ್ರಭುಗಳು, ಪ್ರಜಾಪ್ರತಿನಿಧಿಗಳು ಸೇವಕರು. ಆದರೆ, ಇಂದು ಸೇವಕರು ಪ್ರಭುಗಳಾಗಿದ್ದಾರೆ, ಪ್ರಭುಗಳು ಸೇವಕರಾಗಿದ್ದಾರೆ. ಜನಪ್ರತಿನಿಧಿ ಭ್ರಷ್ಟನಾಗಲು ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಕಡೆಗಣಿಸಿ ಉದಾತ್ತ ಗುಣಗಳನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡಬೇಕು. ಮತದಾರರು ಎಚ್ಚರಗೊಳ್ಳದಿದ್ದರೆ ಒಳ್ಳೆಯ ಪ್ರಜಾಪ್ರತಿನಿಧಿ ಆಯ್ಕೆ ಸಾಧ್ಯವಿಲ್ಲ.

    | ಶ್ರೀ ಪಂಡಿತಾರಾಧ್ಯ ಸ್ವಾಮೀಜಿ, ಸಾಣೇಹಳ್ಳಿ ಮಠ, ಹೊಸದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts