More

    ಕಮ್ಯೂನಿಷ್ಟರಾಗಿ ಪರಿಷ್ಕರಣೆ ಮಾಡಿಲ್ಲ: ಸರ್ಕಾರಕ್ಕೆ ಬರಗೂರು ಉತ್ತರ; ಸಾಹಿತಿಗಳನ್ನು ಮಾತುಕತೆಗೆ ಆಹ್ವಾನಿಸಲು ಆಗ್ರಹ

    ಬೆಂಗಳೂರು: ಪಠ್ಯ ಪುಸ್ತಕ ವಿವಾದ ಮುಗಿಯದ ಅಧ್ಯಾಯವಾಗಿ ಪರಿಣಮಿಸಿದೆ. ಆರೋಪ- ಪ್ರತ್ಯಾರೋಪದ ಟೀಕೆಗಳು ಇನ್ನೂ ಮುಂದುವರಿದಿದೆ. ನಾವು ಕಮ್ಯೂನಿಸ್ಟರಾಗಿ ಪರಿಷ್ಕರಣೆ ಮಾಡಿಲ್ಲ. ಶಿಕ್ಷಣ ನಿಷ್ಠರಾಗಿ ಮಾಡಿದ್ದೆವು. ಸಚಿವರು ಪಠ್ಯಪುಸ್ತಕದ ಬಗ್ಗೆ ಮಿಥ್ಯಾರೋಪ ಮಾಡುವುದನ್ನು ನಿಲ್ಲಿಸಿ, ಪಠ್ಯ ಪರಿಷ್ಕರಣೆ ವಿರೋಧಿಸುತ್ತಿರುವ ಸಾಹಿತಿ ಮತ್ತು ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸುವ ಮೂಲಕ ಪ್ರಜಾಸತ್ತಾತ್ಮಕ ನಡೆಗೆ ಮುಂದಾಗಲಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಕಂದಾಯ ಸಚಿವ ಆರ್.ಅಶೋಕ ಪಠ್ಯಪರಿಷ್ಕರಣೆ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿ, ಬರಗೂರು ರಾಮಚಂದ್ರಪ್ಪ ಸಮಿತಿ ಅಧ್ಯಕ್ಷರಾಗಿದ್ದ ವೇಳೆಯಲ್ಲೇ ಪಠ್ಯಪುಸ್ತಕದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅವರು ಕಮ್ಯೂನಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಉತ್ತರ ನೀಡಿರುವ ಬರಗೂರು ರಾಮಚಂದ್ರಪ್ಪ, ನಾವು ಹೊಸದಾಗಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ಡಾ.ರಾಜ್​ಕುಮಾರ್ ಬಗ್ಗೆ ಪಾಠ ಸೇರಿಸಿದರೆ, ಅದು ಕಮ್ಯೂನಿಸ್ಟ್ ಪಠ್ಯವೇ? ಮಾಸ್ತಿ, ಅಡಿಗ, ಗೊರೂರು, ಲಂಕೇಶ್, ಚೆನ್ನಣ್ಣ ವಾಲೀಕಾರ ಸೇರಿ ಹಲವರ ಬರಹಗಳನ್ನು ಹೊಸದಾಗಿ ಸೇರಿಸಿ ಸಮತೋಲನ ಸಾಧಿಸಿದರೆ, ಅದು ಕಮ್ಯೂನಿಸ್ಟ್ ಸಿದ್ಧಾಂತವೇ? ಪರಿಷ್ಕರಣೆ ಮುಗಿದು 5 ವರ್ಷಗಳ ನಂತರ ಕಮ್ಯೂನಿಸ್ಟ್ ಎಂದು ಆರೋಪಿಸುತ್ತಿರುವುದು ಮೂಲಭೂತವಾದಿ ಸಿದ್ಧಾಂತದ ಪಠ್ಯ ಪರಿಷ್ಕರಣೆಯ ಅನ್ಯಾಯಗಳನ್ನು ಮರೆಮಾಚುವುದಕ್ಕೆ ಎನ್ನುವುದು ಸ್ಪಷ್ಟವಾಗಲಿದೆ. ಇನ್ನಾದರೂ ಮಿಥ್ಯಾರೋಪಗಳು ನಿಲ್ಲಲಿ ಎಂದು ಹೇಳಿದ್ದಾರೆ.

    ಯಾರೇ ಪಠ್ಯಪರಿಷ್ಕರಣೆ ಮಾಡಿದರೂ, ಕೆಲವು ಪಾಠಗಳನ್ನು ಬಿಡುವ ಮತ್ತು ಸೇರಿಸುವ ಪ್ರಕ್ರಿಯೆ ನಡೆಯುತ್ತದೆ. ಸಕಾರಣ ಮತ್ತು ಸೂಕ್ತ ಮಾನದಂಡಗಳ ಮೂಲಕ ಈ ಪ್ರಕ್ರಿಯೆ ನಡೆಯಬೇಕು. ನಮ್ಮ ಅವಧಿಯ ಪರಿಷ್ಕರಣೆಯಲ್ಲಿ ಪ್ರತಿಯೊಂದಕ್ಕೂ ಕಾರಣಗಳನ್ನು ದಾಖಲಿಸಿದ್ದೇವೆ. ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನಾತ್ಮಕ ಆಶಯಗಳನ್ನು ಪಾಲಿಸಿದ್ದೇವೆ. ಇನ್ನೂ ಮೈಸೂರು ಒಡೆಯರ ಕಾಲದ ವಿವರಗಳನ್ನು ನಾವು ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಆದರೆ ಇದು ವಾಸ್ತವವಾಗಿ 6ನೇ ತರಗತಿಯ ಸಮಾಜ ವಿಜ್ಙಾನದಲ್ಲಿದ್ದ ಪಾಠವನ್ನು ಹೆಚ್ಚು ವಿವರಗಳೊಂದಿಗೆ 7ನೇ ತರಗತಿಗೆ ವರ್ಗಾಯಿಸಿದ್ದೇವೆ. ಇದೀಗ 7ನೇ ತರಗತಿಯಿಂದ ಪಠ್ಯವನ್ನು ಮುಕ್ಕಾಲು ಪಠ್ಯದಷ್ಟು ಮಾತ್ರ ಮೈಸೂರು ಒಡೆಯರ ವಿವರ ಕೊಟ್ಟು ಅನ್ಯಾಯ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ತಂದ ಮೀಸಲಾತಿ, ಮಹಿಳೆಯರಿಗೆ ಮತದಾನದ ಹಕ್ಕಿನ ಮಹತ್ವದ ವಿವರಗಳೇ ಇಲ್ಲ. ಕೆಂಪೇಗೌಡರ ಪಾಠ ನಮ್ಮ ಪರಿಷ್ಕರಣೆ ಪಠ್ಯದಲ್ಲಿ ಇರಲಿಲ್ಲ ಎಂಬುದು ಇನ್ನೊಂದು ಮಿಥ್ಯಾರೋಪ. 7ನೇ ತರಗತಿಯ ಸಮಾಜ ವಿಜ್ಞಾನ (ಭಾಗ-1)ರಲ್ಲಿ ಎರಡು ಪುಟಗಳ ವಿವರಗಳನ್ನು ಕೊಡಲಾಗಿದೆ. ಮರುಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಿದ್ದಲ್ಲದೆ, ಕೆಂಪೇಗೌಡರ ಆಡಳಿತಕ್ಕೆ ರಾಮನಗರ, ಕೋಲಾರ ಮತ್ತು ತುಮಕೂರು ಭಾಗಗಳು ಒಳಪಟ್ಟಿದ್ದವೆಂದು ನಾವು ಕೊಟ್ಟಿದ್ದ ವಿವರವನ್ನು ತೆಗೆದು ಕೆಂಪೇಗೌಡರ ಮಹತ್ವವನ್ನು ಇವರೇ ಕುಗ್ಗಿಸಿದ್ದಾರೆ ಎಂದು ಬರಗೂರು ಆರೋಪಿಸಿದ್ದಾರೆ.

    ಬರಗೂರು ಆರೋಪಗಳು

    • ರಾಣಿ ಅಬ್ಬಕ್ಕ ಪಾಠ ತೆಗೆಯಲಾಗಿದೆ
    • 7ನೇ ತರಗತಿ ಸಮಾಜದಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಹೊರಗಿಡಲಾಗಿದೆ
    • 7ನೇ ತರಗತಿ ಸಮಾಜ ಪಠ್ಯದಲ್ಲಿ ಅಕ್ಕಮಹಾದೇವಿ, ಶಿಶುನಾಳ ಶರೀಫರ ಪಠ್ಯವಿಲ್ಲ
    • ಕನ್ನಡ ಭಾಷಾ ಪಠ್ಯದಲ್ಲಿದ್ದ ಎಲ್ಲ ದಲಿತ ಸಾಹಿತಿಗಳನ್ನು ಕೈ ಬಿಟ್ಟಿದ್ದಾರೆ
    • ಕುವೆಂಪು, ದೇವೇಗೌಡರ ಭಾವಚಿತ್ರವನ್ನು ಹಾಕಿಲ್ಲ
    • ವೇದ ಕಾಲದ ಸಂಸ್ಕೃತಿ ಎಂಬ ಪಠ್ಯ ತೆಗೆದು ಹಾಕಿದ್ದಾರೆ.
    • ಅಂಬೇಡ್ಕರ್, ಬುದ್ಧ ಗದ್ಯ ತೆಗೆದಿದ್ದಾರೆ.

    ಪುಸ್ತಕದಲ್ಲಿ ಕನಕನ ಪಠ್ಯಕ್ಕೆ ಕತ್ತರಿ

    ಹೊಸದುರ್ಗ(ಚಿತ್ರದುರ್ಗ): ಪಠ್ಯ ಪುಸ್ತಕದಲ್ಲಿ ಕನಕದಾಸರ ಕುರಿತ ಪಠ್ಯವನ್ನು ಕಡಿತಗೊಳಿಸಿರುವುದು ಸರಿಯಲ್ಲ ಎಂದು ಬೆಂಗಳೂರು ವಿಭಾಗದ ಕನಕ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಬೇಸರಿಸಿದ್ದಾರೆ. ಕೆಲ್ಲೋಡಿನ ಮಠದಲ್ಲಿ ಶುಕ್ರವಾರ ಭಕ್ತರ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿದ್ದು, ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯಪುಸ್ತಕವನ್ನೇ ಮರು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದೇನೆ ಎಂದರು. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಕ್ತಿ ಪಂಥದಲ್ಲಿದ್ದ ದಾಸ ಶ್ರೇಷ್ಠ ಕನಕದಾಸರ ಕುರಿತ ಒಂದು ಪುಟದ ಪಾಠವನ್ನು ಕೇವಲ ಒಂದು ಸಾಲಿಗೆ ಕಡಿತಗೊಳಿಸಿದ ಉದ್ದೇಶ ತಿಳಿಯುತ್ತಿಲ್ಲ ಎಂದು ಹೇಳಿದರು. ಕನಕದಾಸರು 16ನೇ ಶತಮಾನದಲ್ಲಿ ಸಾಮಾಜಿಕ ಸಮಸ್ಯೆ, ಕಂದಾಚಾರಗಳ ವಿರುದ್ಧ ಹೋರಾಟ ನಡೆಸುವ ಜತೆಗೆ ಜಾತೀಯತೆ ನಾಶಕ್ಕೆ ಹಾಗೂ ಸಾಮಾಜಿಕ ನ್ಯಾಯ ದೊರಕಿಸಲು ಶ್ರಮಿಸಿದ್ದಾರೆ. ಕೀರ್ತನೆಗಳ ಮೂಲಕ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬಗ್ಗೆ ವಿಸõತ ಮಾಹಿತಿ ಇಲ್ಲದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ಲೋಪದಿಂದ ಅವರ ಅನುಯಾಯಿಗಳು ಹಾಗೂ ಶೋಷಿತ ಸಮುದಾಯಕ್ಕೆ ಬಹಳ ನೋವಾಗಿದೆ. ಕೂಡಲೇ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಇದನ್ನು ಸರಿಪಡಿಸಬೇಕು. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿನ ಲೋಪದೋಷ ಸರಿಪಡಿಸಿ ಬಳಿಕ ಶಾಲೆಗಳಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.

    ಮಕ್ಕಳ ಮನಸ್ಸಿಗೆ ಸಂಘಟಿತ ವಿಷ

    ಬೆಂಗಳೂರು: ಪಠ್ಯ ಪುಸ್ತಕ ವಿವಾದ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದರೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳೇನು ಎಂದು ಪರಿಶೀಲಿಸುವ ಬದಲಿಗೆ ರೋಹಿತ್ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ಧಾರಿತನವನ್ನು ಸರ್ಕಾರ ತೋರಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ಎಳೆಯ ಮಕ್ಕಳ ಮನಸ್ಸುಗಳಿಗೆ ಸರ್ಕಾರ ಮತ್ತು ಸರ್ಕಾರದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘ ಪರಿವಾರ ವಿಷ ಹಾಕಲು ಹೊರಟಿವೆ ಎಂದವರು ಆರೋಪಿಸಿದ್ದಾರೆ. ವಾಸ್ತವವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿ ಸತ್ಯ ಸಂಗತಿಗಳನ್ನು ವಿವರಿಸಬೇಕಾಗಿದ್ದುದು ಸಂಬಂಧಿತ ಶಿಕ್ಷಣ ಸಚಿವರು. ಆದರೆ ಅಶೋಕ್ ಸೇರಿ ನಾಲ್ಕು ಜನರು ಕೂಡ ಶಿಕ್ಷಣ ಇಲಾಖೆ ಬಗ್ಗೆ ಮಾಹಿತಿಯೆ ಇಲ್ಲದವರು ಮತ್ತು ಅದರಲ್ಲಿ ಮೂವರು ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರು ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ಮಾಡಿರುವ ಪಠ್ಯ ಪರಿಷ್ಕರಣೆಯಲ್ಲಿ ಕನ್ನಡ ಭಾಷೆಯ ಪಠ್ಯ ಪುಸ್ತಕದಲ್ಲಿ 21 ಶೂದ್ರ ಕವಿ, ಲೇಖಕರ ಬರಹಗಳನ್ನು ಕೈ ಬಿಡಲಾಗಿದೆ. ಅದರಲ್ಲಿ 6ಕ್ಕೂ ಹೆಚ್ಚು ದಲಿತ ಸಮುದಾಯಗಳ ಬರಹಗಾರರ ಬರಹಗಳು, 8ಕ್ಕೂ ಹೆಚ್ಚು ಲಿಂಗಾಯತ ಸಮುದಾಯಗಳ ಬರಹಗಳನ್ನು ಕೈ ಬಿಡಲಾಗಿದೆ ಎಂದು ವಿವರಿಸಿದ್ದಾರೆ. ಸುಳ್ಳು ಹೇಳುವುದಿಲ್ಲವೆಂದು, ಪಕ್ಷ ಪಾತ ಮಾಡುವುದಿಲ್ಲವೆಂದು ಹೇಳಿ ಅಧಿಕಾರ ಸ್ವೀಕರಿಸಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ನಾಡಿನ ಜನರಿಗೆ ಸುಳ್ಳು ಹೇಳಿರುವ ಸಚಿವರನ್ನು ವಜಾ ಮಾಡಬೇಕು. ಸರ್ಕಾರ ಬೇಷರತ್ತಾಗಿ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ಶೂದ್ರ, ದಲಿತ ಬರಹಗಾರರ ಪದ್ಯ-ಗದ್ಯ ಕೈ ಬಿಟ್ಟು 28 ಜನರ ಬರಹಗಳನ್ನು ಸೇರಿಸಿದ್ದಾರೆ. ಸೇರ್ಪಡೆಗೊಂಡ ಶೇ.95 ಲೇಖಕರು ಒಂದೇ ಸಮುದಾಯದವರೆ ಆಗಿದ್ದಾರೆ. ಅವರೆಲ್ಲರೂ ಬ್ರಾಹ್ಮಣರಾಗಿದ್ದಾರೆ. ಬಹುಪಾಲು ಆರ್​ಎಸ್​ಎಸ್​ಗೆ ಸೇರಿದವರ ಪಾಠಗಳನ್ನು ಸೇರಿಸಲಾಗಿದೆ. ಇವರಲ್ಲಿ ಬಹಳಷ್ಟು ಜನ ಲೇಖಕರೇ ಅಲ್ಲ. ಮನುವಾದಿ ಅಜೆಂಡಾವನ್ನು ಪ್ರಚಾರ ಮಾಡುವ ವಕ್ತಾರರು.

    | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts