More

    ಬರಗೇರಮ್ಮ ಜಾತ್ರಾ ಮಹೋತ್ಸವ

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
    ಬೇಡಿ ಬಂದ ಭಕ್ತರನ್ನು ಪೊರೆವ ಶಕ್ತಿದೇವತೆ ಶ್ರೀ ಬರಗೇರಮ್ಮ ಚಿತ್ರದುರ್ಗಕ್ಕೆ ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳ ಹಲವರ ಮನೆಯ ಆರಾಧ್ಯ ದೇವತೆಯಾಗಿದ್ದಾಳೆ.
    ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿ ವಿರಾಜಮಾನಳಾಗಿರುವ ಈ ತಾಯಿಯ ಅಪ್ಪಣೆ ಬಳಿಕ ಕೆಲಸ-ಕಾರ್ಯ ಕೈಗೊಳ್ಳುವ ಪರಿಪಾಠ ಭಕ್ತರಲ್ಲಿ ಈಗಲೂ ಇದೆ.
    ಹೈಟೆಕ್ ಸ್ಪರ್ಶ: ದೇವಿಯ ದೇಗುಲ ಯಾರ ಕಾಲದಲ್ಲಿ ನಿರ್ಮಿಸಲಾಗಿದೆ ಎಂಬ ನಿಖರತೆ ಇಲ್ಲ. ಆದರೆ, ಚಿತ್ರದುರ್ಗವನ್ನಾಳಿದ ಪಾಳೆಗಾರರು ದೇವಿಯ ಆರಾಧನೆ ಮಾಡುತ್ತ ಬಂದಿದ್ದಾರೆ ಎಂಬುದಾಗಿ ಇತಿಹಾಸಕಾರರ ಅಭಿಪ್ರಾಯ.

    ಸಂಪೂರ್ಣ ಕಲ್ಲಿನಿಂದಲೇ ನಿರ್ಮಾಣವಾಗಿದ್ದ ದೇಗುಲವನ್ನು ದಶಕಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಿದ್ದು ಇತ್ತೀಚೆಗೆ ಬೃಹದಾಕಾರದ ಬಾಗಿಲು ಲೋಕಾರ್ಪಣೆಯಾಗಿದೆ.

    ದೇಗುಲ ಪಕ್ಕದಲ್ಲೇ ಬರಗೇರಿ ಹಳ್ಳವಿದೆ. ಐದಾರು ದಶಕಗಳ ಹಿಂದೆ ನೀರು ಮೈದುಂಬಿ ಹರಿಯುತ್ತಿತ್ತು. ಮಳೆಯಾಗದ ಸಂದರ್ಭದಲ್ಲಿ ದೇವಿಯನ್ನು ಬೇಡಿಕೊಂಡರೆ ವರುಣನ ಕೃಪೆಯಾಗುತ್ತಿತ್ತು. ನೀರಿನ ಬರ ನೀಗಿಸುತ್ತಿದ್ದ ಕಾರಣ ಬರಗೇರಮ್ಮ ಎಂಬ ಹೆಸರು ಬಂದಿದೆ ಎಂಬುದು ಹಿರಿಯರ ಅಭಿಪ್ರಾಯ.

    ಕಂಕಣ, ಸಂತಾನ ಭಾಗ್ಯ, ವ್ಯವಹಾರ, ಆಸ್ತಿ ಖರೀದಿ, ಉದ್ಯೋಗ, ಆರೋಗ್ಯವನ್ನು ಬೇಡಿದವರಿಗೆ ಪುಷ್ಪದ ಮೂಲಕ ವರ ಕರುಣಿಸುತ್ತಾಳೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇಗುಲಕ್ಕೆ ಭೇಟಿ ನೀಡಿ ಭಕ್ತರು ಅಪ್ಪಣೆ ಪಡೆಯುತ್ತಾರೆ.

    ಜಾತ್ರೆ ವಿಶೇಷ:

    ಪ್ರತಿ ವರ್ಷ ಯುಗಾದಿಯಾದ ಮೊದಲ ಮಂಗಳವಾರ ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ಜಾತ್ರೆಗೆ ಸಾರು ಹಾಕಿದ ನಂತರವೇ ಜಿಲ್ಲೆ ಮತ್ತು ತಾಲೂಕಿನ 66 ದೇವಿಯರ ಜಾತ್ರೆ, ರಥೋತ್ಸವಕ್ಕೆ ಚಾಲನೆ ದೊರೆಯುತ್ತದೆ. ಇದೇ ವೇಳೆ ಬರಗೇರಮ್ಮನ ಜಾತ್ರಾ ಮಹೋತ್ಸವವೂ ನಡೆಯುತ್ತದೆ.

    ಬರಗೇರಮ್ಮ ಜಾತ್ರೆ ಮಾ.31ರಂದು ರಾತ್ರಿ 8ಕ್ಕೆ ಕಂಕಣಧಾರಣೆ ಹಾಗೂ ಮಧುವಣಗಿತ್ತಿ ಪೂಜಾ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ. ಏ.4ರಂದು ರಾತ್ರಿ 8ಕ್ಕೆ ದೇವರನ್ನು ಬುರುಜನಹಟ್ಟಿಯ ದೇಗುಲದಿಂದ ಊರ ಹೊರಗಿನ ದೇಗುಲಕ್ಕೆ ಕರೆ ತರುವುದು. ನಂತರ ಕರಿಯಟ್ಟಿಯಲ್ಲಿನ ಭಕ್ತರಿಂದ ಪೂಜೆ ನೆರವೇರಲಿದೆ.

    5 ರಂದು ಬೆಳಗ್ಗೆ 9ಕ್ಕೆ ಚಂದ್ರವಳ್ಳಿಯಲ್ಲಿ ಗಂಗಾಪೂಜೆ, ಕುಂಭಾಭಿಷೇಕ ನಂತರ ದೇಗುಲಕ್ಕೆ ಆಗಮನ. ರಾತ್ರಿ ಈರಜ್ಜನಹಟ್ಟಿ, ನಾಯಕರ ಸೊಲ್ಲಾಪುರದಲ್ಲಿ ಪೂಜೆ. 6ರಂದು ನಾಯಕರ ಸೊಲ್ಲಾಪುರದಿಂದ ಹೊರಟು ಕೆಳಗಿನ ಸೊಲ್ಲಾಪುರ, ಗೊಲ್ಲರಹಟ್ಟಿ, ಟಗರನಹಟ್ಟಿ, ದೇವರಹಟ್ಟಿ, ಜಾಲಿಕಟ್ಟೆ, ಮಾಳಪ್ಪನಹಟ್ಟಿ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ದೇಗುಲಕ್ಕೆ ಮರಳುವುದು. ಅಂದು ಬೆಳಗ್ಗೆ 7ಕ್ಕೆ ಪಿಳ್ಳೇಕೆರನಹಳ್ಳಿ, ಮೆದೇಹಳ್ಳಿ ರಸ್ತೆ, ಬಿವಿಕೆಎಸ್ ಲೇ ಔಟ್, ಚೇಳುಗುಡ್ಡ, ನೆಹರು ನಗರ, ಪಿ ಅಂಡ್ ಟಿ ಕ್ವಾಟ್ರರ್ಸ್,

    ಜ್ಞಾನಭಾರತಿ ಹಿಂಭಾಗದ ಭಕ್ತರ ಮನೆಗಳಲ್ಲಿ ದೇವಿಗೆ ಪೂಜೆ ನಡೆಯಲಿದೆ.

    8ರಂದು ಬೆಳಗ್ಗೆ 8ಕ್ಕೆ ದೇಗುಲದಿಂದ ಹೊರಟು ದರ್ಜಿ ಕಾಲನಿ, ಗೋಪಾಲಪುರ, ಜೆಸಿಆರ್ ಹಾಗೂ ವಿ.ಪಿ.ಬಡಾವಣೆ ಹಾಗೂ 9ರಂದು ಅಗಸನಕಲ್ಲು, ರೈಲ್ವೆ ನಿಲ್ದಾಣ, ಗಾರೆಹಟ್ಟಿ, ಕವಾಡಿಗರಹಟ್ಟಿ, ಮಠದ ಕುರುಬರಹಟ್ಟಿ, ಕೋಡನಹಟ್ಟಿ, ಕರ್ಲ್ಲಹಟ್ಟಿಯ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ ಕಾರ್ಯಕ್ರಮವಿದೆ.

    10 ರಂದು ಬೆಳಗ್ಗೆ 8ಕ್ಕೆ ವಿಶೇಷ ಭಂಡಾರದ ಪೂಜೆ, ರಾತ್ರಿ 8ಕ್ಕೆ ಓಕಳಿ ಸೇವೆ, ಬುರುಜನಹಟ್ಟಿ ಪ್ರವೇಶದ ನಂತರ ಅಲ್ಲಿನ ಭಕ್ತರ ಮನೆಗಳಲ್ಲಿ ಪೂಜೆ. 12ರಂದು ಸುಣ್ಣಗಾರಹಟ್ಟಿ, ಕೋಳಿ ಬುರುಜನ ಹಟ್ಟಿ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ ಸೇರಿ ಸುತ್ತಮುತ್ತ ಭಕ್ತರ ಮನೆಯಲ್ಲಿ ಪೂಜೆ ಸ್ವೀಕಾರ, ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಯ ನಂತರ ಗುಡಿದುಂಬುವ ಕಾರ್ಯಕ್ರಮದ ಮೂಲಕ ದೇವಿಯನ್ನು ಸ್ವಸ್ಥಾನಕ್ಕೆ ಕರೆತರುವುದು. 14ರ ಸಂಜೆ ಜೋಗೂಟ, ಕಂಕಣ ವಿಸರ್ಜನೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

    *ಮಧುವಣಗಿತ್ತಿ ಮೆರವಣಿಗೆ
    ಏ.7ರಂದು ದೇವಿಗೆ ಮಧುವಣಗಿತ್ತಿ ಅಲಂಕಾರ ಮಾಡಿ, ಬೆಳಗ್ಗೆ 9.30ರಿಂದ ಸಂಜೆವರೆಗೂ ನಗರದ ರಾಜಬೀದಿಗಳಲ್ಲಿ ರಥೋತ್ಸವ ನಡೆಸಲಾಗುತ್ತದೆ. ಈ ವೇಳೆ ಭಕ್ತರು, ಮೀಸಲು, ಹರಕೆ ಸಲ್ಲಿಸಲಿದ್ದಾರೆ.

    ಐತಿಹಾಸಿಕ ಅಕ್ಕತಂಗಿ ಭೇಟಿ 11ಕ್ಕೆ
    ಏ.11ರಂದು ಚಿಕ್ಕಪೇಟೆ, ಐಯ್ಯಣ್ಣನಪೇಟೆ, ದೊಡ್ಡಪೇಟೆ, ಉತ್ಸವಾಂಬ ದೇಗುಲದ ಅಕ್ಕಪಕ್ಕ, ಕರುವಿನಕಟ್ಟೆ ವೃತ್ತ, ಬುರುಜನಹಟ್ಟಿ ರಸ್ತೆಯಲ್ಲಿನ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸಿದ ನಂತರ ಒಳಗಿನ ದೇಗುಲಕ್ಕೆ ಆಗಮನ. ನಂತರ ರಾತ್ರಿ 8ಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಐತಿಹಾಸಿಕ ಅಕ್ಕತಂಗಿ ಭೇಟಿ ಮಹೋತ್ಸವ ನೆರವೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts