More

    ಬಾಣೂರು ರೈತನ ಸಮಸ್ಯೆ ಬಗೆಹರಿಸಲು ರೈತ ಸಂಘ ಒತ್ತಾಯ

    ಚಿಕ್ಕಮಗಳೂರು: ಸಾರ್ವಜನಿಕರು ಸಂಚರಿಸುತ್ತಿದ್ದ ಬಾಣೂರು ಗ್ರಾಮದ ಸರ್ಕಾರಿ ಖರಾಬು ಜಮೀನಿಗೆ ಖಾಸಗಿ ವ್ಯಕ್ತಿ ಬೇಲಿ ಹಾಕಿ ಕಾಲುವೆ ನಿರ್ಮಿಸಿ ತೊಂದರೆ ಕೊಡುತ್ತಿದ್ದು, ಈ ಬಗ್ಗೆ ಕಡೂರು ತಹಸೀಲ್ದಾರ್ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸದಿದ್ದರೆ ಜೂನ್.೧೦ರಂದು ನೊಂದ ಕುಟುಂಬದೊAದಿಗೆ ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್ ತಿಳಿಸಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಡೂರು ತಾಲೂಕು ಸಖರಾಯಪಟ್ಟಣ ಹೋಬಳಿ, ಬಾಣೂರು ಗ್ರಾಮದ ಸರ್ವೆ ನಂಬರ್ ೧೩೭/೭ರಲ್ಲಿ ೪ ಗುಂಟೆ ಸರ್ಕಾರಿ ಖರಾಬು ಜಮೀನು ಇದೆ. ಬಸವರಾಜ್ ಬಿನ್ ಶೇಖರಪ್ಪ ಎಂಬವವರು ಅಕ್ರಮವಾಗಿ ಬೇಲಿ ನಿರ್ಮಿಸಿ ಕಾಲುವೆ ತೋಡಿ ಸೋಮಶೇಖರ್ ಬಿನ್ ಶಂಕ್ರಪ್ಪ ಎಂಬುವವರಿಗೆ ಜಮೀನಿಗೆ ಹೋಗದಂತೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
    ಇತ್ತೀಚೆಗೆ ಪಕ್ಕದ ಜಮೀನಿನ ಮಾಲಿಕರಾದ ಬಸವರಾಜ್ ಎಂಬುವವರು ಸರ್ಕಾರದ ಖರಾಬು ಜಮೀನನ್ನು ಒತ್ತುವರಿ ಮಾಡಿ ರೈತರು ಓಡಾಡದಂತೆ ಅಡ್ಡಗಟ್ಟಿ ತಂತಿಬೇಲಿ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ತೊಂದರೆಗೊಳಗಾದ ಸೋಮಶೇಖರ್ ಇವರು ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಮನವಿಯ ಆಧಾರದಲ್ಲಿ ಸ್ಥಳ ತನಿಖೆ ಮಾಡಿ ಒತ್ತುವರಿ ತೆರವುಗೊಳಿಸಲು ಸಖರಾಯಪಟ್ಟಣ ಹೋಬಳಿ ರಾಜಸ್ವ ನಿರೀಕ್ಷಕರಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪುನಃ ದೂರುದಾರರು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದಾಗ ತಾಲೂಕು ಸರ್ವೇಯರ್‌ಗೆ ಸರ್ವೆ ಮಾಡಿ ವರದಿ ಸಲ್ಲಿಸಲು ಸೂಚಿಸಿದ್ದು, ೨೭ ಸೆಪ್ಟೆಂಬರ್ ೨೦೨೩ರಲ್ಲಿ ಸರ್ವೆಯರ್ ವರದಿ ಸಲ್ಲಿಸಿ ತಂತಿಬೇಲಿ ನಿರ್ಮಾಣ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.
    ಕಳೆದ ಡಿ. ೧೫ಕ್ಕೆ ದಿನಾಂಕ ನಿಗದಿಪಡಿಸಿ ಜಾಗ ತೆರವುಗೊಳಿಸಿ ಗ್ರಾಮಸ್ಥರುಗಳ ಮಹಜರಿನೊಂದಿಗೆ ವರದಿ ಕಳಿಸಲು ತಹಸೀಲ್ದಾರ್ ರಾಜಸ್ವ ನಿರೀಕ್ಷಕರಿಗೆ ತಿಳಿಸಿದ್ದರು. ನಂತರ ಬೇಲಿ ತೆರವುಗೊಳಿಸಲಾಗಿದ್ದು ತಿರುಗಾಡಲು ಸಾಧ್ಯವಿಲ್ಲದಂತೆ ಆಳವಾದ ಕಂದಕ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಅನೇಕ ಬಾರಿ ತಹಸೀಲ್ದಾರ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ಭೇಟಿ ಸಾಧ್ಯವಾಗಿಲ್ಲ ಎಂದರು.
    ಪಕ್ಕದ ಜಮೀನು ಮಾಲಿಕರಿಗೂ ಅರ್ಜಿದಾರರಿಗೂ ಗಲಾಟೆಗಳಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರೂ ಏನು ಕ್ರಮ ಕೈಗೊಳ್ಳದಿರುವುದು ದೂರುದಾರರಿಗೆ ನಿರಾಸೆ ಮೂಡಿಸಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಲಾಗಿದ್ದು, ತಹಸಿಲ್ದಾರ್ ದೂರು ಸಲ್ಲಿಸಿದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ತಹಶೀಲ್ದಾರ್ ಇದುವರೆಗೆ ದೂರು ಸಲ್ಲಿಸಿಲ್ಲ/ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
    ಸುದ್ದಿಗೋಷ್ಟಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಮುಖಂಡರುಗಳಾದ ಸುನಿಲ್‌ಕುಮಾರ್, ಹಾಲಮ್ಮ, ದರ್ಶನ್ ಹಾಗೂ ತೊಂದರೆಗೊಳಗಾದ ಹರಿಣಾಕ್ಷಿ ಸೋಮಶೇಖರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts